ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ಅಗ್ನಿಶಾಮಕ ದಳ ತಿದ್ದುಪಡಿ ವಿಧೇಯಕ 2025 ಕುರಿತು ನಡೆದ ಚರ್ಚೆಯಲ್ಲಿ ಶಾಸಕ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿದರು.

ಅವರು, “ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾನ್ಸೂನ್ ಮಳೆಯ ಸಮಯದಲ್ಲಿ ಭಾರೀ ಹಾನಿ ಸಂಭವಿಸುತ್ತಿದೆ. ಆದರೆ ಅಲ್ಲಿ ಕಾರ್ಯನಿರ್ವಹಿಸುವ ಅಗ್ನಿಶಾಮಕ ದಳವು ಫಸ್ಟ್ ರೆಸ್ಪಾಂಡರ್ ಆಗಿ ಸೂಕ್ತವಾಗಿ ಕಾರ್ಯನಿರ್ವಹಿಸಲು ವಿಫಲವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಈ ವೇಳೆ ಮೊದಲು ಮಾತನಾಡಿದ ಕಾಂಗ್ರೆಸ್ ಶಾಸಕ ಐವನ್ ಡಿಸೋಜಾ ಅವರು “ಅಗ್ನಿಶಾಮಕ ದಳದ ಬಳಿ ಸೂಕ್ತ ವಾಹನಗಳಿಲ್ಲ, ತುಕ್ಕು ಹಿಡಿದು ಹೋಗಿದೆ” ಎಂದು ಹೇಳಿದಾಗ ಗೃಹಸಚಿವರು ಅವರ ಮಾತನ್ನು ನಿರ್ಲಕ್ಷಿಸಿ “ಐವನ್ ಟ್ರ್ಯಾಕ್ ತಪ್ಪಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು, “ಐವನ್ ಡಿಸೋಜಾ ಅವರು ಟ್ರ್ಯಾಕ್ ತಪ್ಪಿಲ್ಲ. ನಮ್ಮ ಕರಾವಳಿಯಲ್ಲಿ ವರುಣನ ಆರ್ಭಟಕ್ಕೆ ಜನತೆ ತತ್ತರಿಸಿದ್ದಾರೆ. ಉಳ್ಳಾಲದಲ್ಲಿ ಸಂಭವಿಸಿದ ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಮನೆ ಕುಸಿತದಲ್ಲಿ ಸಾವನ್ನಪ್ಪಿದರು; ಅವರ ತಾಯಿ ತನ್ನೆರಡು ಕಾಲುಗಳನ್ನು ಕಳೆದುಕೊಂಡರು. ಇಂತಹ ದುಃಖಕರ ಘಟನೆಗಳನ್ನು ತಡೆಯಲು ಜಿಲ್ಲೆಯಲ್ಲಿ ಅಗ್ನಿಶಾಮಕ ದಳದಲ್ಲಿ ಹೆಚ್ಚಿನ ಯುವಕರನ್ನು ಸೇರಿಸಿ, ವಿಶೇಷ ಟಾಸ್ಕ್ ಫೋರ್ಸ್ ರಚನೆ ಅಗತ್ಯವಾಗಿದೆ” ಎಂದು ಒತ್ತಾಯಿಸಿದರು.

ಅವರು ಗೃಹಸಚಿವರಲ್ಲಿ, “ಮುಂದೆ ಇಂತಹ ಪ್ರಕೃತಿ ಆಪತ್ತುಗಳು ಸಂಭವಿಸಿದರೆ ತಕ್ಷಣ ಸ್ಪಂದಿಸಲು ಮತ್ತು ಪ್ರಾಣ ಹಾನಿಯನ್ನು ಕಡಿಮೆ ಮಾಡಲು ಕರಾವಳಿ ಜಿಲ್ಲೆಗಳಲ್ಲಿ ಅಗ್ನಿಶಾಮಕ ದಳವನ್ನು ಬಲವರ್ಧಿಸಬೇಕು” ಎಂದು ಮನವಿ ಮಾಡಿದರು.