ಮಂಗಳೂರು: ಮಾಜಿ ಪ್ರಧಾನಿ ರಾಜೀವ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಜನ್ಮದಿನ ಕಾರ್ಯಕ್ರಮ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ, ರಾಜೀವ್ ಗಾಂಧಿ ಅವರು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದು ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಅವರು ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಕೈಗೊಂಡ ಯೋಜನೆಗಳು ಇಂದಿಗೂ ಪ್ರಸ್ತುತ. ಅವರ ಚಿಂತನೆ, ಸುಧಾರಣಾ ಕ್ರಮಗಳು ಇಂದಿನ ರಾಜಕಾರಣಿಗಳಿಗೆ ಸ್ಫೂರ್ತಿ. ರಾಜೀವ್ ಗಾಂಧಿ ಅವರು ದೇಶದಲ್ಲಿ ಕಂಪ್ಯೂಟರ್-ಟೆಲಿಫೋನ್ ಕ್ರಾಂತಿ, 18 ವಯಸ್ಸಿನವರಿಗೆ ಮತದಾನದ ಹಕ್ಕು, ನವೋದಯ ಶಾಲೆಗಳ ನಿರ್ಮಾಣ, ಗಂಗಾ ನದಿಯ ಮಾಲಿನ್ಯ ನಿಯಂತ್ರಣ ಯೋಜನೆ, ಆರ್ಥಿಕ ಉದಾರೀಕರಣ, ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆ ಮುಂತಾದ ಸುಧಾರಣಾ ಕ್ರಮಗಳನ್ನು ಕೈಗೊಂಡು ಸದೃಢ ಭಾರತವನ್ನಾಗಿಸಿದರು ಎಂದು ಹೇಳಿದರು.
ದೇಶವನ್ನು ಆಧುನಿಕ ಭಾರತವನ್ನಾಗಿ ಕಟ್ಟಬೇಕೆನ್ನುವ ಕಲ್ಪನೆಯಿಂದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ಸಾಧನೆಗಳ ಮೂಲಕ ಜನಮನದಲ್ಲಿ ಶಾಶ್ವತವಾಗಿ ನೆಲೆಸಿರುವ ರಾಜೀವ್ ಗಾಂಧಿಯವರನ್ನು ಗೌರವ ಮತ್ತು ಕೃತಜ್ಞತೆಯಿಂದ ಸ್ಮರಿಸುವುದು ಎಲ್ಲರ ಕರ್ತವ್ಯ ಎಂದರು.
ಇಂದಿರಾ ಗಾಂಧಿ ಅವರ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಜಾರಿಗೊಳಿಸದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅವರು ರಾಜ್ಯದ ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ಜನರ ಪರವಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಸಮಾನತೆಯ ಬುನಾದಿ ಮೇಲೆ ಸಮಾಜವನ್ನು ಕಟ್ಟುವ ಮೂಲಕ ಸರ್ವ ಜನರ ಕಲ್ಯಾಣವನ್ನು ಬಯಸಿದ್ದ ಮುತ್ಸದ್ದಿ ರಾಜಕಾರಣಿಯಾಗಿದ್ದರು. ಭವಿಷ್ಯದ ರಾಜಕಾರಣಕ್ಕೆ ಮಾದರಿಯನ್ನು ಹಾಕಿಕೊಟ್ಟ ಮಾರ್ಗದರ್ಶಕರಾಗಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪದ್ಮರಾಜ್.ಆರ್ ಪೂಜಾರಿ, ಅಪ್ಪಿ.ಎಸ್, ಜಯಶೀಲಾ ಅಡ್ಯಂತಾಯ, ನೀರಜ್ ಚಂದ್ರಪಾಲ್, ಡೆನ್ನಿಸ್ ಡಿಸಿಲ್ವ, ಶಬೀರ್.ಎಸ್, ವಿಜಯ ಲಕ್ಷ್ಮೀ, ಯೋಗಿಶ್ ಕುಮಾರ್, ಟಿ.ಕೆ ಸುಧೀರ್, ಸಬಿತಾ ಮಿಸ್ಕಿತ್, ಅಬ್ದುಲ್ ರಹಿಮಾನ್ ಕೋಡಿಜಾಲ್, ದಿನೇಶ್ ಕುಂಪಲ, ಜಾರ್ಜ್, ಪ್ರಕಾಶ್ ಆಲ್ವಿನ್, ಸಮರ್ಥ್ ಭಟ್, ಮೀನಾ, ದುರ್ಗಾ ಪ್ರಸಾದ್, ಯಶವಂತ್ ಪ್ರಭು, ಗಣೇಶ್ ಉರ್ವ, ಸೀತಾರಾಮ್ ಶೆಟ್ಟಿ, ರವಿರಾಜ್ ಪೂಜಾರಿ, ಉದಯ ಕುಂದರ್, ಚಂದ್ರಹಾಸ್ ಪೂಜಾರಿ, ಟಿ.ಸಿ ಗಣೇಶ್, ಜೈರಾಮ್ ಕಾರಂದೂರ್, ಪದ್ಮನಾಭ ಫಣಿಕಾರ್, ಕೃಷ್ಣ ಕುಮಾರ್, ನಝೀರ್ ಬಜಾಲ್ ಉಪಸ್ಥಿತರಿದ್ದರು. ಶುಭೋದಯ ಆಳ್ವ ಸ್ವಾಗತಿಸಿದರು, ಮಲಾರ್ ಮೋನು ವಂದಿಸಿದರು.