ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ : ಕಳೆದ ಹಲವಾರು ತಿಂಗಳುಗಳಿಂದ ಪ್ರತಿ ಸಭೆಗೂ ರೆವೆನ್ಯೂ, ಲೋಕೋಪಯೋಗಿ, ಪೊಲೀಸ್ ಇಲಾಖೆಗೆ ಅಧಿಕಾರಿಗಳನ್ನು ಕಡ್ಡಾಯವಾಗಿ ಬರಬೇಕೆಂದು ಕೇಳಿಕೊಳ್ಳುತ್ತಿದ್ದರೂ, ಯಾವುದೇ ಅಧಿಕಾರಿಗಳು ಬರದಿರುವುದರ ಬಗ್ಗೆ ಪುರಸಭಾ ಸದಸ್ಯರುಗಳು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ರಸ್ತೆಗಳನ್ನು ಪುರಸಭಾ ವತಿಯಿಂದ ನಿರಂತರ ಸರಿಪಡಿಸಿದರೂ ಕೂಡ ಮತ್ತೆ ಮತ್ತೆ ರಸ್ತೆಗಳು ಹಾಳಾಗುತ್ತಿರುವ ಬಗ್ಗೆ ಸದಸ್ಯರು ಗಮನಸೆಳೆದರು. ಆಗ ಸಮಜಾಯಿಸಿಕೆ ನೀಡಲು ಮುಂದಾದ ಉಪಾಧ್ಯಕ್ಷ ನಾಗರಾಜ ಪೂಜಾರಿ ಅವರ ಮಾತಿಗೆ ಎಲ್ಲರೂ ಸಹ ಮತವನ್ನು ವ್ಯಕ್ತಪಡಿಸಿ ವಿಶೇಷ ಸಭೆ ನಡೆಸಿ ಶಾಸಕರೊಂದಿಗೆ ಆ ಎಲ್ಲಾ ಅಧಿಕಾರಿಗಳನ್ನು ಆಹ್ವಾನಿಸಬೇಕೆಂದು ಆಗ್ರಹಿಸಿದರು.
ಪುರಸಭಾ ವ್ಯಾಪ್ತಿಯ ಮನೆ ಕರ ವಸೂಲಿ ಹಾಗೂ ವಾಣಿಜ್ಯ ಕರ ವಸೂಲಿಗಳ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ವ್ಯವಸ್ಥಿತ ರೀತಿಯಲ್ಲಿ ಮುಂದಿನ ಸಭೆಗೆ ಹಾಜರುಪಡಿಸಬೇಕೆಂದು ಪಿ.ಕೆ.ಥೋಮಸ್, ಪ್ರಸಾದ್ ಕುಮಾರ್ ಆಶಿಸಿದಾಗ ಎಲ್ಲ ಸದಸ್ಯರು ಸಹಮತಿಸಿದರು. ಅಲ್ಲದೆ ಕಡ್ಡಾಯವಾಗಿ ವಾಣಿಜ್ಯ ಕರ ವಸೂಲಿಯನ್ನು ಮಾಡಲೇಬೇಕೆಂದು ಆಗ್ರಹಿಸಿದರು. ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಡ್ರೈವರ್ ಗಳನ್ನು ಖಾಯಂ ಮಾಡುವವರೇ, ಬಹಳ ಹಿಂದೆ ಚಾಲಕರಾಗಿದ್ದು, ಬಿಟ್ಟವರಿಗೆ ಆದ್ಯತೆಯಿಂದ ಅವಕಾಶ ನೀಡಬೇಕೆಂದು ಸದಸ್ಯ ಕೊರಗಪ್ಪ ಕೇಳಿಕೊಂಡರು. ಪುರಸಭೆಯ ಓರ್ವ ಕಾರ್ಮಿಕ ಮಹಿಳೆ ಸಾಕಷ್ಟು ತೊಂದರೆಯಲ್ಲಿ ದಿನ ಕಳೆಯುತ್ತಿರುವುದರಿಂದ ಎಲ್ಲ ಸದಸ್ಯರು ತಮ್ಮ ಎರಡು ತಿಂಗಳ ಸಿಟ್ಟಿಂಗ್ ಫೀಸ್ ಅನ್ನು ಪರಿಹಾರದ ರೂಪದಲ್ಲಿ ನೀಡಲು ಕೊರಗಪ್ಪರು ಅಪೇಕ್ಷಿಸಿದಾಗ ಎಲ್ಲರೂ ಪಕ್ಷ ಭೇದ ಮರೆತು ಒಮ್ಮತವನ್ನು ಸೂಚಿಸಿದರು.
ಗೊಬ್ಬೆರೆಗೇ ಜಾಗ ಇಜ್ಜಿ ಬೊಕ ಗೊಬ್ಬರ ಮಲ್ಪುನ?:- ಪುರಸಭಾ ವ್ಯಾಪ್ತಿಯ ಕೆಲವಾರು ಮನೆಗಳವರು ಕಸವನ್ನು ನೀಡದೆ ಕಂಡ ಕಂಡಲ್ಲಿ ಎಸೆಯುತ್ತಿರುವ ಬಗ್ಗೆ ದೂರಿದಾಗ ರಾಜೇಶ್ ನಾಯ್ಕ ಅವರು ಮೇಲ್ಕಂಡಂತೆ ಹೇಳಿ, ಕಸ ನೀಡದೆ ಇರುವ ಮನೆಗಳವರಿಗೆ ವಿಶೇಷ ದಂಡವನ್ನು ಹಾಕಬೇಕೆಂದು ಕೇಳಿಕೊಂಡರು. ತನ್ಮೂಲಕ ಕಂಡ ಕಂಡಲ್ಲಿ ಕಸ ಎಸೆಯುವುದನ್ನು ಕಡಿಮೆ ಮಾಡಬಹುದು ಎಂದರು.
ಬಹು ಮಹಡಿ ಕಟ್ಟಡಗಳಿಗೆ ನೋಟಿಸು ನೀಡಿ:- ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಇರುವ ಹೆಚ್ಚಿನ ಬಹುಮಹಡಿ ಫ್ಲಾಟ್ ಗಳಿಂದ ತ್ಯಾಜ್ಯ ಗಳನ್ನು ವಿಲೇವಾರಿ ಮಾಡದೆ ಹಾಗೆಯೇ ಚರಂಡಿ, ರಾಜ ಕಾಲುವೆಗಳಿಗೆ ಬಿಡಲಾಗುತ್ತಿದೆ ಎಂದು ಸುರೇಶ್ ಪ್ರಭು, ರೂಪ ಶೆಟ್ಟಿ, ಕೊರಗಪ್ಪ, ಪ್ರಸಾದ್ ಕುಮಾರ್, ಸುರೇಶ್ ಕೋಟ್ಯಾನ್ ಅವರು ಆಕ್ಷೇಪಿದರು. ಆದುದರಿಂದ ಅಂತಹ ಎಲ್ಲ ಬಹು ಮಹಡಿ ಕಟ್ಟಡಗಳ ಎಲ್ಲಾ ತ್ಯಾಜ್ಯ ಪೈಪುಗಳನ್ನು ಶಾಶ್ವತವಾಗಿ ಮುಚ್ಚಿಸಬೇಕು. ಈ ಕ್ರಮ ತುರ್ತಾಗಿ ಆಗಬೇಕಾಗಿದೆ ಆದ್ದರಿಂದ ಅದಕ್ಕೆ ಮೊದಲು ಅಂತಹ ಎಲ್ಲ ಬಹು ಮಹಡಿ ಕಟ್ಟಡಗಳವರಿಗೆ ನೋಟಿಸು ನೀಡುವಂತೆ ಹಾಗೂ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ಕೋರಿದರು.
ಸರಕಾರದ ಆದೇಶದ ತನಕ ಕಟ್ಟಡ ಪರವಾನಿಗೆಯನ್ನು ಪುರಸಭೆಯೇ ನೀಡಲಿ:- ಈಗಾಗಲೇ ಮೂಡ ಕಚೇರಿಯಲ್ಲಿ ಸಾಕಷ್ಟು ಕೊರತೆ ಇರುವುದರಿಂದ ಈ ಹಿಂದಿನಂತೆಯೇ ಕಟ್ಟಡ ಪರವಾನಿಗೆಯನ್ನು ಪುರಸಭೆಯಿಂದಲೇ ನೀಡುವಂತಾಗಬೇಕು ಎಂದು ಪುರಂದರ ದೇವಾಡಿಗ, ಕಾಸಿಂ ಅವರು ಮನವಿ ಮಾಡಿದರು. ಸ್ಮಶಾನದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ವಿಚಾರದಲ್ಲಿ ಒಂದು ಹಂತದಲ್ಲಿ ಪುರಂದರ ದೇವಾಡಿಗ ಹಾಗೂ ನಾಗರಾಜ ಪೂಜಾರಿಯವರ ನಡುವೆ ನೇರವಾಗ್ವಾದ ನಡೆದು ಮುಖ್ಯಾಧಿಕಾರಿ ಇಂದು ರವರ ಉತ್ತರದಿಂದ ನೀರಸವಾಗಿ ಪರಿಸಮಾಪ್ತಿಯಾಯಿತು. ಪುತ್ತಿಗೆ ಹಾಗೂ ಒಂಟಿ ಕಟ್ಟೆಯ ಕೊಳಚೆ ವಿಷಯದಲ್ಲಿ ಈಗಾಗಲೇ ತಾಲೂಕು ಪಂಚಾಯತ್ ಅಧಿಕಾರಿ ಅವರನ್ನು ಸಂಪರ್ಕಿಸಿದ್ದು ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಯನ್ನು ಕೂಡ ಕೇಳಿ ಮುಂದಿನ ಕಾರ್ಯವನ್ನು ಮಾಡಲಾಗುವುದೆಂದು ಇಂದು ಅವರು ಸಭೆಗೆ ತಿಳಿಸಿದರು.
ಕೃಷ್ಣ ಅಷ್ಟಮಿಯ ಸಂದರ್ಭ ಪುರಸಭಾ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ನಿರ್ವಹಿಸಿದ ಉತ್ತಮ ಕಾರ್ಯವನ್ನು ಪ್ರಶಂಸಿಸಿದ ಸದಸ್ಯರು, ಗಣೇಶೋತ್ಸವದ ಸಂದರ್ಭದಲ್ಲಿಯೂ ಅಂತಹದ್ದೇ ಕಾರ್ಯವನ್ನು ಮಾಡಿ ಪುರಸಭಾ ಪ್ರದೇಶವನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಬೇಕೆಂದು ಕೇಳಿಕೊಂಡರು. ಪುರಸಭಾ ಆರೋಗ್ಯ ಅಧಿಕಾರಿ ಶಿಲ್ಪಾ ಅವರು ಹಿಂದೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದನ್ನು ಅಭಿನಂದಿಸಿದ ಸದಸ್ಯರುಗಳು ಇನ್ನು ಮುಂದೆಯೂ ಅದೇ ರೀತಿಯ ಕೆಲಸವನ್ನು ಮಾಡುವುದರ ಮೂಲಕವಾಗಿ ಪುರಸಭೆಯ ಘನತೆಯನ್ನು ಹೆಚ್ಚಿಸಬೇಕೆಂದು ಶಿಲ್ಪ ಅವರಲ್ಲಿ ಕೇಳಿಕೊಂಡರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಲವಾರು ತಿಂಗಳುಗಳಿಂದ ಕೆಲವಾರು ಫೈಲುಗಳು ಹಾಗೆಯೇ ಉಳಿದಿದ್ದು ನಿಯೋಗದ ಮೂಲಕ ಆ ಎಲ್ಲಾ ಫೈಲ್ಗಳನ್ನು ವಿಲೇವಾರಿ ಮಾಡಿಸಲು ಒಟ್ಟಾಗಿ ಹೋಗುವ ನಿರ್ಧಾರವನ್ನು ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳು ನಿರ್ಧರಿಸಿದರು.
ಸಭೆಗೆ ಆಗಮಿಸಿದ್ದ ಅರಣ್ಯ ಹಾಗೂ ಮೆಸ್ಕಾಂ ಅಧಿಕಾರಿಗಳು ರಸ್ತೆಗೆ ಅಡ್ಡವಾಗುತ್ತಿರುವ ಮರಗಳನ್ನು ಸಾಂದರ್ಭಿಕವಾಗಿ ನಿವಾರಿಸಿಕೊಡುವ ಭರವಸೆ ನೀಡಿದರು. ಪೊಲೀಸ್ ಠಾಣೆ ಹಾಗೂ ಗಾಂಧಿ ಪಾರ್ಕ್ ದಲ್ಲಿ ಹೈ ಮಾಸ್ಟ್ ದೀಪವನ್ನು ಅಳವಡಿಸಬೇಕೆಂದು ಮಮತಾ, ಸೌಮ್ಯ ಶೆಟ್ಟಿ ಆಗ್ರಹಿಸಿದರು. ಅನಗತ್ಯ ಗಿಡಗಳ ನಿವಾರಣೆಯಾಗದೆ ಬಿಲ್ಲು ಸಂದಾಯ ಮಾಡುವ ಬಗ್ಗೆ ಕರೀಂ ಹಾಗೂ ಸುರೇಶ್ ಪ್ರಭು ವಿರೋಧಿಸಿದರು. ಸುಮಾರು 40ಕ್ಕೂ ಹೆಚ್ಚು ಮಂದಿ ದ್ವಿಚಕ್ರ ವಾಹನದವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಕಾರಣ ಆಸ್ಪತ್ರೆಗಳಲ್ಲಿ ನರಳಾಡುತ್ತಿರುವುದರಿಂದ ಪುರಸಭೆ ವ್ಯಾಪ್ತಿಯ ಅಲ್ಲಲ್ಲಿ ಹೆಲ್ಮೆಟ್ ಕಡ್ಡಾಯದ ಬೋರ್ಡನ್ನು ಹಾಕುವ ಬಗ್ಗೆ ಪಿ.ಕೆ. ಥೋಮಸ್ ಸೂಚಿಸಿದರು ಹಾಗೂ ಬಹುಚಕ್ರದ ಲಾರಿಗಳು ಪುರಸಭೆ ವ್ಯಾಪ್ತಿಯಲ್ಲಿ ಪ್ರವೇಶಿಸದಂತೆ ತಡೆಯಲು ಪೊಲೀಸರನ್ನು ಕೇಳಿಕೊಳ್ಳಲು ನಿರ್ಣಯಿಸಲಾಯಿತು.
ರಾಜೀವ್ ಗಾಂಧಿ ಕಾಂಪ್ಲೆಕ್ಸ್ ನ ಎದುರಿನ ಪ್ರದೇಶ ಸರಕಾರಿ ಬಸ್ಸುಗಳಿಗಾಗಿ ಕಾಯ್ದಿರಿಸಿರುವುದರಿಂದ ಆ ಪ್ರದೇಶದಲ್ಲಿ ಪೆಂಡಾಲ್ ಹಾಕಿ ಅಂಗಡಿಗಳವರಿಗೆ ಅಡ್ಡಲಾಗಿ ಸಭೆ ನಡೆಸಲು ಅನುಮತಿ ನೀಡಬಾರದೆಂದು ಎಲ್ಲ ಸದಸ್ಯರು ಅಧ್ಯಕ್ಷರು ಹಾಗೂ ಅಧಿಕಾರಿಗಳಲ್ಲಿ ಕೇಳಿಕೊಂಡರು.
ಪುರಸಭಾ ಅಧ್ಯಕ್ಷೆ ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು, ಇಂಜಿನಿಯರ್ ನವೀನ್, ದಿವಾಕರ್, ಅರಣ್ಯಾಧಿಕಾರಿ ಗುರುಮೂರ್ತಿ, ಮೆಸ್ಕಾಂ ನ ಅಧಿಕಾರಿ ಪ್ರವೀಣ್ ಹಾಜರಿದ್ದರು.