ಉಜಿರೆ: ದೇಹ, ಮನಸ್ಸು ಹಾಗೂ ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ನಮ್ಮನ್ನು ನಾವೇ ಅರಿತುಕೊಂಡು ಅಂತರಂಗ ದರ್ಶನ ಮಡುವ ಸುಲಭ ವಿಧಾನವೇ ಪ್ರಕೃತಿ ಚಿಕಿತ್ಸಾ ಪದ್ಧತಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರಿಗಾಗಿ ಆಯೋಜಿಸಿದ ಆರೋಗ್ಯಜಾಗೃತಿ ಶಿಬಿರ “ ಪ್ರಕೃತಿಯ ಮಡಿಲಲ್ಲಿ” ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿ ಚಿಕಿತ್ಸಾ ವಿಧಾನವು ಔಷದಿ üರಹಿತ ಶುಶ್ರೂಷೆಯಾಗಿದ್ದು. ಹಿತ-ಮಿತ ಆಹಾರ ಸೇವನೆಯೊಂದಿಗೆ ಸಾಧಕರಿಗೆ ಆರೋಗ್ಯ ಭಾಗ್ಯ ರಕ್ಷಣೆಗೆ ಸಹಕಾರಿಯಾಗಿದೆ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಏನು ಮಾಡಬೇಕು, ಏನು ಮಾಡಬಾರದು ಎಂದು ತಿಳಿದುಕೊಳ್ಳುವುದೇ ಆರೋಗ್ಯ ರಕ್ಷಣೆಯ ಸೂತ್ರವಾಗಿದೆ.
ನಿರಂತರ ಪರಿವರ್ತನಾಶೀಲವಾದ ದೇಹಕ್ಕೆ ಧರ್ಮದ ಮೂಲಕ ಉತ್ತಮ ಸಂಸ್ಕಾರ ನೀಡಿದಾಗ ಪರಿಷ್ಕಾರದೊಂದಿಗೆ ಸಾರ್ಥಕ ಜೀವನ ಸಾಧ್ಯವಾಗುತ್ತದೆ.
ವಾಹನಗಳಲ್ಲಿ ಗ್ಯಾರಂಟಿ ಮತ್ತು ವಾರಂಟಿ ಬಗ್ಯೆ ಮ್ಯಾನ್ಯುವಲ್ (ಮಾಹಿತಿ ಪುಸ್ತಕ) ನೀಡುವಂತೆದೇಹ ಮತ್ತು ಮನಸ್ಸಿಗೆ ಕೂಡಾ ವಿಶ್ರಾಂತಿ ಮತ್ತು ಸಕಾಲಿಕ ಶುಶ್ರೂಷೆ ನೀಡಿದರೆ ಆರೋಗ್ಯ ಭಾಗ್ಯರಕ್ಷಣೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪತ್ರಕರ್ತರು ಸದಾ ಒತ್ತಡದಲ್ಲಿ ಅನಿಯಮಿತವಾಗಿ ಕೆಲಸ ಮಾಡುವುದರಿಂದ ಆರೋಗ್ಯ ರಕ್ಷಣೆ ಬಗ್ಯೆಯೂ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಪತ್ರಕರ್ತರ ಸಂಘದ ವತಿಯಿಂದ ಹೆಗ್ಗಡೆಯವರನ್ನು ಗೌರವಿಸಲಾಯಿತು.
ಶಾಂತಿವನದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ್ ಜೈನ್ ಮಾತನಾಡಿ ಪತ್ರಕರ್ತರು ಶಿಬಿರದ ಸದುಪಯೋಗ ಪಡೆದು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಶುಭಾಶಂಸನೆ ಮಾಡಿ ಬೆಳ್ತಂಗಡಿಯ ಪತ್ರಕರ್ತರ ಸೇವೆ, ಸಾಧನೆಗೆ ಅಭಿನಂದಿಸಿ, ಜಿಲ್ಲಾ ಸಂಘದಿಂದ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷಧನ ಕೀರ್ತಿ ಆರಿಗಾ ಮಾತನಾಡಿ , ಪತ್ರಕರ್ತರು ಸದಾ ಅಧ್ಯಯನಶೀಲರಾಗಿ ಜ್ಞಾನ ವಿಸ್ತರಿಸಿಕೊಳ್ಳಬೇಕು ಎಂದು ಹೇಳಿದರು.
ಸ್ಥಾನೀಯ ವೈದ್ಯಾಧಿಕಾರಿ ಡಾ. ಶಶಿಕಿರಣ, ಆಡಳಿತಾಧಿಕಾರಿ ಜಗನ್ನಾಥ್ ಮತ್ತು ಶಾಂತಿವನ ಟ್ರಸ್ಟ್‍ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.
ಅಶ್ರಫ್ ಅಲಿ ಕುಂಞ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲ್ಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಚೈತ್ರೇಶ್ ಇಳಂತಿಳ ಸ್ವಾಗತಿಸಿದರು.
ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಧನ್ಯವಾದವಿತ್ತರು. ಉಪಾಧ್ಯಕ್ಷ ಗಣೇಶ್ ಬಿ. ಶಿರ್ಲಾಲು ಕಾರ್ಯಕ್ರಮ ನಿರ್ವಹಿಸಿದರು.
ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಪತ್ರಕರ್ತರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.