ಉಡುಪಿ, ಏಪ್ರಿಲ್ 28: ಬೇಸಿಗೆ ಶಿಬಿರಗಳು  ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದ್ದು, ಅನುಭವಿ ತರೆಬೇತುದಾರರಿಂದ  ಉತ್ತಮ ತರಬೇತಿ ದೊರೆಯಲಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ ಶರ್ಮಿಳಾ. ಎಸ್ ಹೇಳಿದರು.

     ಅವರು ಇಂದು ಬಾಲಭವನ ಸೊಸೈಟಿ ಬೆಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಉಡುಪಿ ಜಿಲ್ಲೆ ಇದರ ಸಹಯೋಗದಲ್ಲಿ ನಡೆದ ಬೇಸಿಗೆ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

     ಬೇಸಿಗೆ ಶಿಬಿರವು ಮಕ್ಕಳ ಕಲಿಕಾ ಬೆಳವಣಿಗೆಗೆ ಸಹಕಾರಿಯಾಗಿದ್ದು,   ಇಲ್ಲಿ ಮಕ್ಕಳ ದೈನಂದಿನ ಕಲಿಕೆಯ ಬದಲಾಗಿ ಆಟ, ಮೈಂಡ್ ಗೇಮ್, ಕಲೆ, ಸಂಸ್ಕøತಿ ಹಾಗೂ ಹೊಸ-ಹೊಸ ವಿಷಯಗಳ ಅರಿವಾಗುತ್ತದೆ, ಇದರಿಂದ ಮಕ್ಕಳಲ್ಲಿ ಹೊಸ ಜವಾಬ್ದಾರಿಯ ಜೊತೆಗೆ ಆತ್ಮವಿಶ್ವಾಸ ಮೂಡಲು ಸಹಕಾರಿಯಾಗುತ್ತದೆ ಎಂದು ಶರ್ಮಿಳಾ. ಎಸ್ ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ , ಸಣ್ಣ ವಯಸ್ಸಿನಲ್ಲಿಯೇ ಮಕ್ಕಳ ಆಸಕ್ತಿಯ ವಿಷಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ಬಹಳ ಅನಿವಾರ್ಯ, ಇಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿನ ಆಸಕ್ತಿ ಗುರುತಿಸಲು ಸಾಧ್ಯ ಎಂದರು. ಕೋವಿಡ್ ಸಮಸ್ಯೆಯಿಂದ ಕಳೆದ ಎರಡು ವರ್ಷಗಳಲ್ಲಿ  ಇಂತಹ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ ಇದರಿಂದಾಗಿ ಮಕ್ಕಳು ಮೊಬೈಲ್ ಪ್ರಭಾವಕ್ಕೆ ಒಳಗಾಗಿದ್ದಾರೆ,  ಮೊಬೈಲ್‍ನ್ನು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಬಳಕೆ ಮಾಡಬೇಕು, ಪೋಷಕರು ಮಕ್ಕಳ ಕಲಿಕೆಯ ಮೇಲೆ ಯಾವುದೇ ರೀತಿಯ ಒತ್ತಡ ಹೇರದೆ ಅವರ ಆಸಕ್ತಿಯ ವಿಷಯಕ್ಕೆ ಸಹಕರಿಸುವ ಜೊತೆಗೆ ಸರಿಯಾದ ಮಾರ್ಗದರ್ಶಕರಾಗಬೇಕು ಎಂದರು.

     ಕಾರ್ಯಕ್ರಮದಲ್ಲಿ ಶಿರಿಬೀಡು ವಾರ್ಡ್ ನಗರ ಸಭೆ ಸದಸ್ಯ ಟಿ.ಜಿ. ಹೆಗ್ಡೆ ಸೇರಿದಂತೆ ಇತರೆ ಗಣ್ಯರು ಬಾಗವಹಿಸಿದ್ದರು.

     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಕಿ ವೀಣಾ ವಿವೇಕಾನಂದ ಸ್ವಾಗತಿಸಿ, ಜಿಲ್ಲಾ ಮಹಿಳಾ ಶಕ್ತಿ ಕೇಂದ್ರದ ಸಂಯೋಜಕಿ ಶಾರದ ನಿರೂಪಿಸಿ ವಂದಿಸಿದರು.