ಉತ್ತಮವಾದ ಆಡಳಿತ, ಪ್ರಾಮಾಣಿಕ ದುಡಿಮೆಯ ಜತೆ ಊರ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಿಕೊಂಡರೆ ಕಸದಿಂದ ರಸ ತೆಗೆದು ಸಂಪನ್ಮೂಲ ಕ್ರೋಢೀಕರಣ ಸಾಧ್ಯ ಎಂಬುದನ್ನು ತೋರಿಸಿಕೊಡುವತ್ತ ಉಜಿರೆ ಗ್ರಾಮ ಪಂಚಾಯತಿ ಹೆಜ್ಜೆ ಇಟ್ಟಿದೆ.

18 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹಾಗೂ 4500 ರಷ್ಟು ಮನೆ, ಹೆಸರಾಂತ ಶೈಕ್ಷಣಿಕ ಸಂಸ್ಥೆಗಳು, ಅನೇಕ ವಾಣಿಜ್ಯ ಮಳಿಗೆ, ಅಂಗಡಿ-ಮುಂಗಟ್ಟು, ತರಕಾರಿ,ಹಣ್ಣಿನ ಅಂಗಡಿಗಳು,ಆಸ್ಪತ್ರೆ ಇತ್ಯಾದಿ ಎಲ್ಲವನ್ನೂ ಹೊಂದಿರುವ ಪ್ರಮುಖ ಪಟ್ಟಣ ಉಜಿರೆ. ಈ ಪಟ್ಟಣ ಪ್ರದೇಶದಲ್ಲಿ ಕಂಡುಬರುವ, ಉತ್ಪತ್ತಿಯಾಗುವ ಕಸ, ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಮಹತ್ತರ ಜವಾಬ್ದಾರಿ ಪಂಚಾಯಿತಿ ಗಿದೆ.ಇದನ್ನು ಸವಾಲಾಗಿ ಸ್ವೀಕರಿಸಿರುವ ಉಜಿರೆ ಗ್ರಾಮ ಪಂಚಾಯಿತಿ ಈ ನಿಟ್ಟಿನಲ್ಲಿ ಹಲವಾರು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಇದರಿಂದ ಪಂಚಾಯಿತಿಯ ಆದಾಯದ ಮೂಲಕ್ಕೂ ಅಡಿಪಾಯ ನಿರ್ಮಿಸುತ್ತಿದೆ.

ತ್ಯಾಜ್ಯ ಸಂಪನ್ಮೂಲ ಘಟಕ

ಗ್ರಾಮದ ಇಚ್ಚಿಲ ಎಂಬಲ್ಲಿ ಸರ್ವೇ ನಂಬರ್ 172 ಹಾಗೂ 564ರಲ್ಲಿರುವ 1.60 ಎಕ್ರೆ ಜಾಗವನ್ನು ಪಂಚಾಯಿತಿ ಹೊಂದಿದ್ದು ಇಲ್ಲಿ ತ್ಯಾಜ್ಯ ಸಂಪನ್ಮೂಲ ಘಟಕ ಕಾರ್ಯನಿರ್ವಹಿಸುತ್ತಿದೆ. 30 ಸೆಂಟ್ಸ್ ಜಾಗದಲ್ಲಿ 4000 ಕ್ಕಿಂತ ಅಧಿಕ ಚದರ ಅಡಿಯ ಕಟ್ಟಡವನ್ನು ನಿರ್ಮಿಸಲಾಗಿದೆ. ಸರಿಯಾದ ರಸ್ತೆ ಇಲ್ಲದಿದ್ದು ಈಗ ಈ ಪ್ರದೇಶಕ್ಕೆ ವ್ಯವಸ್ಥಿತ ರಸ್ತೆ ನಿರ್ಮಾಣವಾಗಿದೆ.ಇಲ್ಲಿ ಬಾಟಲಿ,ಬಟ್ಟೆ,ಚಪ್ಪಲಿ, ಎಲೆಕ್ಟ್ರಾನಿಕ್,ಫ್ಯಾನ್ಸಿ ಮೊದಲಾದ ಐಟಂಗಳನ್ನು ತ್ಯಾಜ್ಯದಿಂದ ಪ್ರತ್ಯೇಕಿಸಿ ಇಡಲು ಬೇರೆಬೇರೆ ಕೋಣೆಗಳಿವೆ.

ತರಕಾರಿ,ಆಹಾರ,ಹಣ್ಣು ಮೊದಲಾದ ತ್ಯಾಜ್ಯಗಳಿಂದ ಫಲವತ್ತಾದ ಸಾವಯವ ಗೊಬ್ಬರವನ್ನು ಮಾಡುವ ಕೆಲಸ ನಡೆಯುತ್ತಿದೆ.ಕೆಜಿ ಒಂದಕ್ಕೆ ಗರಿಷ್ಠ ರೂ.8 ಗೊಬ್ಬರವನ್ನು ಮಾರಾಟ ಮಾಡಲಾಗುತ್ತದೆ.ತ್ಯಾಜ್ಯ ಪರಿಷ್ಕರಣೆಯಿಂದ ರೂ.2ಲಕ್ಷ,ಕಸ ಸಂಗ್ರಹದಿಂದ ರೂ. 8ಲಕ್ಷ ಆದಾಯವನ್ನು. ನಿರೀಕ್ಷಿಸಲಾಗಿದೆ.

ಕಸ ಸಂಗ್ರಹ

ಪಂಚಾಯಿತಿಯ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡುತ್ತಾ ಗ್ರಾಮದ ಕಸವನ್ನು ಸಂಗ್ರಹ ಮಾಡಲಾಗುತ್ತದೆ. ಕೆಲವೊಂದು ಗ್ರಾಮಸ್ಥರು ಕಸವನ್ನು ವಿಂಗಡಿಸಿ ಕೊಡುತ್ತಾರೆ,ಕೆಲವರು ಎಲ್ಲವನ್ನೂ ಒಟ್ಟಾಗಿ ತಂದು ಹಾಕುತ್ತಾರೆ. ಒಟ್ಟಾಗಿ ತಂದು ಹಾಕುವ ಕಸವನ್ನು ಪ್ರತ್ಯೇಕಿಸುವ ಕೆಲಸ ಹೆಚ್ಚುವರಿ ಹೊರೆಯಾಗುತ್ತದೆ.ತ್ಯಾಜ್ ವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದರಿಂದ ಪರಿಸರ ಕೂಡ ಸ್ವಚ್ಛವಾಗಿದ್ದು ಯಾವುದೇ ರೀತಿಯ ಕೆಟ್ಟ ವಾಸನೆ ಇರುವುದಿಲ್ಲ.

ತ್ಯಾಜ್ಯ ಸಂಪನ್ಮೂಲ ಘಟಕ ಪ್ರದೇಶದಲ್ಲಿ ಪ್ಲಾಸ್ಟಿಕ್ ರಿ ಸೈಕಲಿಂಗ್ ಕೇಂದ್ರವನ್ನು ಸ್ಥಾಪಿಸುವ ಉದ್ದೇಶದಿಂದ ಹೊಸ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಖಾಸಗಿ ವ್ಯಕ್ತಿಯೊಬ್ಬರು ನಿರ್ವಹಣೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದು, ಬಾಡಿಗೆ ಆಧಾರದಲ್ಲಿ ನೀಡುವ ಯೋಜನೆ ಮುಂದಿನ ಒಂದು ತಿಂಗಳೊಳಗೆ ಕಾರ್ಯ ಆರಂಭಿಸುವ ನಿರೀಕ್ಷೆ ಇದೆ.

ಪ್ರಸ್ತುತ ನೆರಿಯದ ಪಶು ವೈದ್ಯಾಧಿಕಾರಿ ಡಾ.ಯತೀಶ್ ಕುಮಾರ್ ಆಡಳಿತಾಧಿಕಾರಿಯಾಗಿ ಹಾಗೂ ಪ್ರಕಾಶ್ ಶೆಟ್ಟಿ ನೊಚ್ಚ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

"ಪಂಚಾಯತ್ ಆಡಳಿತ ಹಾಗೂ ಸಿಬ್ಬಂದಿಗಳ ಸಹಕಾರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೇಂದ್ರದ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.ತ್ಯಾಜ್ಯದ ಕುರಿತು ನಾಗರಿಕರ ಸ್ಪಂದನೆ ಕಡಿಮೆ ಇದೆ. ಪ್ರತಿಯೊಬ್ಬರು ತ್ಯಾಜ್ಯ ಸಂಗ್ರಹಕ್ಕೆ ಸಹಕರಿಸಿದರೆ ಉಜಿರೆಯನ್ನು ತ್ಯಾಜ್ಯ ಮುಕ್ತಗೊಳಿಸುವುದು ಸುಲಭಸಾಧ್ಯ"


-By ರಾಮಚಂದ್ರ ಶೆಟ್ಟಿ, ಉಜಿರೆ.

ಮೇಲ್ವಿಚಾರಕ,

ತ್ಯಾಜ್ಯ ಸಂಪನ್ಮೂಲ ಕೇಂದ್ರ