ಮಂಗಳೂರು, ಮಾರ್ಚ್ 22: ವಿನಾಯಕ ಬಾಳಿಗಾ ಹತ್ಯೆಗೆ ಆರು ವರುಷದಿಂದ ಹಾಗೂ ಈ ಒಂದು ತಿಂಗಳಲ್ಲಿ ಧರ್ಮಸ್ಥಳದಲ್ಲಿ ದಲಿತ ದಿನೇಶ್  ಕೊಲೆಗಳಿಗೆ ಆಳುವವರಿಂದ ನ್ಯಾಯ ದೊರೆತಿಲ್ಲ. ಇದನ್ನು ಖಂಡಿಸುವುದಾಗಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.

70 ವರುಷಗಳಿಂದ ಏನು ಮಾಡಿದ್ದಾರೆ ಎಂದು ಕೇಳುವವರು 7 ವರುಷಗಳಿಂದ ಏನೂ ಮಾಡುವ ಕರ್ತವ್ಯ ಹೊಂದಿಲ್ಲವೆ? ಶಿವಮೊಗ್ಗದಲ್ಲಿ ಕೋಟಿ ಕೋಟಿ ಪರಿಹಾರದ ಪ್ರಚಾರ ಮಾಡಿರುವ ಬಿಜೆಪಿ ಸರಕಾರಕ್ಕೆ ದಿನೇಶ್ ಕೊಲೆಗೆ ಸರಿಯಾಗಿ ಪರಿಹಾರ ಕೊಡಬೇಕು ಎನ್ನುವ ವಿವೇಚನೆ ಇಲ್ಲವೆ? ದಿನೇಶ್ ಮಡದಿ ಮತ್ತು ತಾಯಿ ಬಂದಿದ್ದಾರೆ. ಅವರನ್ನು ಕರೆದೊಯ್ದು ಈಗ ಜಿಲ್ಲಾಧಿಕಾರಿ ಅವರಿಗೆ ಭರವಸೆ ನೀಡುವವರೆಗೆ ಕುಳಿತು ಕೊಳ್ಳುವುದಾಗಿ ಪುಷ್ಪಾ ಅಮರನಾಥ ಹೇಳಿದರು.

ಮಂಗಳೂರು ಫೈಲ್ಸ್, ದ. ಕ. ಫೈಲ್ಸ್ ಕಾಶ್ಮೀರ ಫೈಲ್ಸ್‌ಗಿಂತ ಕ್ರೂರವಾದುದು. ಇತ್ತೀಚಿಗೆ ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿಯವರು ನಾನು ಹೆಣ್ಣು ಹೋರಾಡಬಲ್ಲೆ ಎಂಬ ಘೋಷಣೆ ಮಾಡಿದ್ದಲ್ಲದೆ 40% ಮಹಿಳೆಯರಿಗೆ ಟಿಕೆಟ್ ಕೊಟ್ಟರು. ಆದರೆ ಮಹಿಳಾ ಶೋಷಕರು ಅದು ಪ್ರಜ್ವಲಿಸದಂತೆ ನೋಡಿಕೊಂಡರು. ಆದ್ದರಿಂದ ಮಹಿಳೆಯರಿಗೆ ಕೂಡಲೆ ಮೀಸಲಾತಿ ನೀಡುವಂತೆ ಮಹಿಳಾ ಕಾಂಗ್ರೆಸ್ ಒತ್ತಾಯಿಸುತ್ರದೆ ಎಂದು ಪುಷ್ಪಾ ಅವರು ಹೇಳಿದರು.

ಮಹಿಳಾ ದಿನಾಚರಣೆ ಸಂಬಂಧ ಕಿರು ವೀಡಿಯೋ ಸ್ಪರ್ಧೆ ಇಟ್ಟಿದ್ದು, ಮಹಿಳೆಯರಿಗೆ ಸಂಬಂಧಿಸಿದಂತೆ ಏಪ್ರಿಲ್ 8ರವರೆಗೆ ಕಿರು ವೀಡಿಯೋ ಕಳುಹಿಸಬಹುದು. ರಾಜ್ಯದಿಂದ 6 ಜನರನ್ನು ದೇಶ ಮಟ್ಟಕ್ಕೆ ಆರಿಸಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ನಾಯಕಿಯರಾದ ಅಪ್ಪಿ, ಶಾಲೆಟ್ ಪಿಂಟೋ, ಚಂದ್ರಕಲಾ, ಮಂಜುಳಾ ನಾಯಕ್, ಶೈಲಜಾ, ನಮಿತಾ, ವಂದನಾ, ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು.