ಚಿಕ್ಕಮಗಳೂರು, ಮಾ.10:- ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಜಾತ್ಯಾತೀತ ಮಹಿಳಾ ರಕ್ಷಣಾ ವೇದಿಕೆ ಸಂಸ್ಥಾಪಕಿ ಕನ್ನಡ ರತ್ನ ಹೇಳಿದರು.

ನಗರದ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ಕಛೇರಿಯಲ್ಲಿ ಬುಧವಾರ ಕೊರೊನಾ ಸಮಯದಲ್ಲಿ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸಿದ ಮಹಿಳೆಯರನ್ನು ಗುರುತಿಸಿ ಗೌರವಿಸುವ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಿದರು.

ಹೆಣ್ಣು ತನ್ನ ಶಿಕ್ಷಣ, ಆಯ್ಕೆಗಳು, ಸ್ವಾತಂತ್ರ್ಯ, ಮತ್ತು ತನ್ನ ತೀರ್ಮಾನಗಳಿಂದ ಅದನ್ನು ಉಳಿಸಿಕೊಳ್ಳಬೇಕು. ಆಗ ಯಾರೂ ಕೂಡ ಹೆಣ್ಣನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ. ಹೆಣ್ಣು ಬುದ್ದಿವಂತಳು. ಶಿಕ್ಷಣದಿಂದ ಇನ್ನಷ್ಟು ಶಕ್ತಿವಂತಳಾಗಿದ್ದಾಳೆ. ಮಹಾಶಕ್ತಿಯ ರೂಪವೇ ಮಹಿಳೆಯಾಗಿದ್ದು ಎಲ್ಲ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಹಿಳೆಯರು ಮಾಡಬೇಕೆಂದು ಎಂದು ಕಿವಿಮಾತು ಹೇಳಿದರು.

ಪ್ರತಿಯೊಬ್ಬ ಮಹಿಳೆಗೂ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಹಲವಾರು ಒಳ್ಳೆಯ ಅವಕಾಶಗಳಿದ್ದು ಅಂತಹ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ಜಿಲ್ಲಾಧ್ಯಕ್ಷ ರಾಜೇಶ್ ಮಾತನಾಡಿ ಹೆಣ್ಣು ಅತ್ಯಂತ ಶಕ್ತಿಯುತಳು, ಬೆಳಗಿನ ಜಾವ ಎದ್ದಾಗಿನಿಂದ ರಾತ್ರಿ ವಿಶ್ರಾಂತಿ ಪಡೆಯುವವರೆಗೆ ಅವಳದ್ದೇ ಅಧಿಕಾರ. ಅಂದರೆ ಮಕ್ಕಳ ಪಾಲನೆ, ಪೋಷಣೆ ನಿರ್ವಹಣೆ ಸೇರಿದಂತೆ ಸರ್ವ ಕಾರ್ಯದಲ್ಲಿ ತೊಡಗಿರುತ್ತಾಳೆ ಎಂದರು.

ಮಹಿಳೆಯರಲ್ಲಿ ವಿಶೇಷವಾದ ಶಕ್ತಿ ಇದೆ. ಇಲ್ಲ ಎಂದುಕೊಂಡರೆ ಹಿಂದೆ ಉಳಿಯುತ್ತೇವೆ. ನಾವೇ ಚೌಕಟ್ಟು ಹಾಕಿಕೊಳ್ಳಬಾರದು. ನಮ್ಮ ದೇಶ ಮತ್ತು ರಾಜ್ಯವು ಅನೇಕ ವೀರಮಹಿಳೆಯರನ್ನು ಕಂಡಿದೆ. ಧೈರ್ಯ, ಶೌರ್ಯ, ಮನೋಬಲದಿಂದ ದೇಶ ಕಟ್ಟುವ ಕೆಲಸದಿಂದಾಗಿ ಅವರು ಅಜರಾಮರರಾಗಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಕೊರೊನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸಿದ ಬಿ.ಜಿ.ಉಮಾದೇವಿ, ಪುಟ್ಟಮ್ಮ, ಕಾಂಚನಾ ಹಾಗೂ ಶಾರದಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕದಂಬಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸಪ್ಪ, ಮಾನವ ಹಕ್ಕುಗಳ ಮಾಹಿತಿ ಸಮಿತಿಯ ಜಿಲ್ಲಾ ಜಂಟಿ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿನುತಾ, ಪ್ರಧಾನ ಕಾರ್ಯದರ್ಶಿ ಶಾಂತಿ ಫರ್ನಾಂಡೀಸ್, ನಗರ ಅಧ್ಯಕ್ಷೆ ಶ್ರೀಮತಿ ಮಂಜುಳಾ, ಪ್ರಧಾನ ಕಾರ್ಯದರ್ಶಿ ಗಾಯತ್ರಿ, ನಗರಾಧ್ಯಕ್ಷ ಶಿವಕುಮಾರ್ ಮತ್ತಿತರರಿದ್ದರು.