ಚಿಕ್ಕಮಗಳೂರು, ಮಾ.10:- ನಗರದ ಪೆನ್ಷನ್ ಮೊಹಲ್ಲಾದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಬಡ ವರ್ಗದ ನಿವಾಸಿಗಳು ಚಿಕಿತ್ಸೆಗೆಂದು ಬರುತ್ತಿದ್ದು ಇದನ್ನು ಬೇರೆಡೆ ಸ್ಥಳಾಂತರಿಸಲು ಮುಂದಾಗಬಾರದು ಎಂದು ನೂರಾನಿ ಚಾರಿಟಬಲ್ ಅಸೋಸಿಯೇಷನ್ ಮುಖಂಡರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಒತ್ತಾಯಿಸಿದರು.

ಈ ಸಂಬಂಧ ಜಿಲ್ಲಾ ಆರೋಗ್ಯ ಅಧಿಕಾರಿ ಡಾ|| ಉಮೇಶ್ ಅವರಿಗೆ ಬುಧವಾರ ಮನವಿ ಸಲ್ಲಿಸಿದ ಅವರು ನಗರ ಆರೋಗ್ಯ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಆಗ್ರಹಿಸಿದರು.

ನಗರದ ಪೆನ್ಷನ್ ಮೊಹಲ್ಲಾ ಆರೋಗ್ಯ ಕೇಂದ್ರಕ್ಕೆ ಉಪ್ಪಳ್ಳಿ, ಶಾಂತಿನಗರ, ತರಗಿನಪೇಟೆ, ವಿಜಯಪುರ, ಗೌರಿಕಾಲುವೆ, ನೆಹರುನಗರ, ಶರೀಫ್‍ಗಲ್ಲಿ, ರಾಮನಹಳ್ಳಿ ಹಾಗೂ ಪೆನ್ಷನ್ ಮೊಹಲ್ಲಾದ  ಬಡ ವರ್ಗದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದು ಆರೋಗ್ಯ ಕೇಂದ್ರವನ್ನು ಅಲ್ಲಿಂದ ಸ್ಥಳಾಂತರಿಸಿದರೆ ಅವರಿಗೆ ಸಮಸ್ಯೆ ಉಂಟಾಗಲಿದೆ ಎಂದರು.

ಆದರೆ ಈ ಆರೋಗ್ಯ ಕೇಂದ್ರವನ್ನು ಕಲ್ಯಾಣನಗರಕ್ಕೆ ಸ್ಥಳಾಂತರ ಮಾಡುವ ಬಗ್ಗೆ ತಿಳಿದು ಬಂದಿದ್ದು ಒಂದು ವೇಳೆ ಆರೋಗ್ಯ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಸುತ್ತಮುತ್ತಲಿನ ವಾರ್ಡಿನ  ಅನೇಕ ನಿವಾಸಿಗಳಿಗೆ ತೀವ್ರ ತೊಂದರೆಯಾಗಲಿದೆ ಎಂದು ತಿಳಿಸಿದರು.

ಪ್ರಸ್ತುತ ಆರೋಗ್ಯ ಕೇಂದ್ರವನ್ನು ಇರುವ ವಾರ್ಡ್‍ನಲ್ಲಿ ಅಕ್ಕಪಕ್ಕದಲ್ಲೇ ಸ್ಥಳಾಂತರಿಸಿ ಅಥವಾ ಮೇಲ್ಕಂಡ ವಾರ್ಡ್‍ಗಳಲ್ಲಿ ಅನೇಕ ಮಳಿಗೆಗಳು ಖಾಲಿಯಿದ್ದು  ಆ ಜಾಗದಲ್ಲಿ ಸ್ಥಳಾಂತರಿಸಿದರೆ ಯಾವುದೇ ಸಮಸ್ಯೆಗಳಾಗುವುದಿಲ್ಲ. ಇದನ್ನು ಸ್ಥಳೀಯೊಂದಿಗೆ ಚರ್ಚಿಸಿ ಬಡ ವರ್ಗದ ನಿವಾಸಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ರಸೂಲ್ ಖಾನ್, ಸಮಾಜ ಸೇವಕ ಕರೀಂಖಾನ್ ಮತ್ತಿತರರು ಹಾಜರಿದ್ದರು.