ಮಂಗಳೂರು: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರವು ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ, ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ, ಯೆನೆಪೋಯ ವಿಶ್ವವಿದ್ಯಾನಿಲಯ, NSS, 18 KAR BN ಮಂಗಳೂರು ಸೈಕಲಿಂಗ್ ಕ್ಲಬ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಬೈಸಿಕಲ್ ದಿನಾಚರಣೆ’ಯನ್ನು 03-06-2022 ರಂದು ಆಯೋಜಿಸಿತ್ತು. 

ಕಾರ್ಯಕ್ರಮದಡಿ 13 ಕಿ.ಮೀ ಬೈಸಿಕಲ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ರ್ಯಾಲಿಯನ್ನು ಮಾನ್ಯ ಅಪರ ಜಿಲ್ಲಾಧಿಕಾರಿಯವರಾದ ಕೃಷ್ಣಮೂರ್ತಿ ಹೆಚ್. ಇವರು ಹಸಿರು ನಿಶಾನೆಯನ್ನು ತೋರಿಸುವ ಮೂಲಕ ರ್ಯಾಲಿಯು ಜಿಲ್ಲಾಧಿಕಾರಿ ಕಛೇರಿಯಿಂದ ಪ್ರಾರಂಭವಾಗಿ -ಮಂಗಳಾದೇವಿ-ಮುಗೇರು-ತೊಕ್ಕೊಟ್ಟು-ಮಾಸ್ತಿಕಟ್ಟೆ-ರಾಣಿಅಬ್ಬಕ್ಕ ವೃತ್ತ ಉಳ್ಳಾಲ ಇಲ್ಲಿ ಸಮಾಪನಗೊಂಡಿತ್ತು. ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಯವರು ತಾನು ಸ್ವತಃ ಸೈಕಲಿಸ್ಟ್ ಆಗಿದ್ದು, ಸೈಕಲ್ ಸವಾರಿಯಿಂದ ಆಗುವ ಪ್ರಯೋಜನ ಹಾಗೂ ಮಹತ್ವವನ್ನು ತಿಳಿಸಿದರು ಹಾಗೂ ರ್ಯಾಲಿಗೆ ಶುಭ ಹಾರೈಸಿದರು. ಆನಂದ ಕುಮಾರ್, ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ದ.ಕ. ಜಿಲ್ಲೆ, ಡಾ| ಅಶ್ವಿನಿ ಶೆಟ್ಟಿ, NSS ಸಂಯೋಜನಾಧಿಕಾರಿ ಜಗದೀಶ ಕೆ. ನೆಹರು ಯುವಕೇಂದ್ರ, ಮಂಗಳೂರು, ಅನಿಲ್ ಶೇಟ್, ಅಧ್ಯಕ್ಷರು ಮಂಗಳೂರು ಸೈಕಲಿಂಗ್ ಕ್ಲಬ್, ಅಬ್ದುಲ್ ರಹೆಮಾನ್, ಮಂಗಳ ಗ್ರಾಮೀಣ ಯುವಕ ಮಂಡಲ ಕೊಣಾಜೆ ಇವರುಗಳು ಉಪಸ್ಥಿತರಿದ್ದರು. ಸೈಕಲ್ ರ್ಯಾಲಿಯಲ್ಲಿ ಸುಮಾರು 140 ಯುವಜನರು ಭಾಗವಹಿಸಿದರು. 

ಉಳ್ಳಾಲ ನಗರ ಪಂಚಾಯತ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಾಮಪ್ಪ ಪೌರಾಯುಕ್ತರು, ನಗರ ಪಂಚಾಯತ್ ಉಳ್ಳಾಲ ಇವರು ಸೈಕಲಿಸ್ಟ್‍ರನ್ನು ಉದ್ದೇಶಿಸಿ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪರಿಸರ ಮತ್ತು ಶಬ್ಧ ಕಾಪಾಡುವಲ್ಲಿ ನಿಟ್ಟಿನಲ್ಲಿ ಸೈಕಲಿಂಗ್‍ನ ವಿಶೇಷತೆಯನ್ನು ತಿಳಿಸಿದರು. 

ಹಾಗೆಯೇ ಡಾ| ಅಶ್ವಿನಿ ಶೆಟ್ಟಿ NSS ಸಂಯೊಜನಾಧಿಕಾರಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸುದೃಢ ಆರೋಗ್ಯ ಮತ್ತು ಮನಸ್ಸು, ಜಾಗತಿಕ ತಾಪಮಾನ ಹಾಗೂ ಪರಿಸರ ಉಳಿಸುವ ನಿಟ್ಟಿನಲ್ಲಿ ಸೈಕಲಿಂಗ್‍ನ ಉಪಯುಕ್ತತೆಯನ್ನು ತಿಳಿಸಿದರು. 

ಈ ಸಂದರ್ಭದಲ್ಲಿ ಅನಿಲ್ ಶೇಟ್, ಅಧ್ಯಕ್ಷರು ಮಂಗಳೂರು ಸೈಕಲಿಂಗ್ ಕ್ಲಬ್ ಇವರನ್ನು ಸನ್ಮಾನಿಸಲಾಯಿತು. ಶ್ರೀಯುತರು 7 ವರ್ಷದಲ್ಲಿ 1 ಲಕ್ಷ ಕಿ.ಮೀ ಸೈಕಲ್ ಸವಾರಿಯನ್ನು ಮಾಡಿದ್ದು, ಸಾಮಾಜಿಕ ಜಾಗೃತಿ ವಿಷಯವನ್ನು ಇಟ್ಟುಕೊಂಡು ಮಾಡಿರುವರು. ಬಂದಂತಹ ಎಲ್ಲರಿಗೂ ಪ್ರಶಂಸ ಪತ್ರವನ್ನು ಅತಿಥಿಗಣ್ಯರು ವಿತರಿಸಿದರು. 

ಸಭಾ ಕಾರ್ಯಕ್ರಮದಲ್ಲಿ ಚಿತ್ರಕಲಾ, ಅಧ್ಯಕ್ಷರು ನಗರ ಪಂಚಾಯತ್ ಉಳ್ಳಾಲ, ರಾಮಪ್ಪ, ಪೌರಾಯುಕ್ತರು ನಗರ ಪಂಚಾಯತ್ ಉಳ್ಳಾಲ, ಡಾ| ನಾಗರತ್ನ ಕೆ.ಎ., NSS ಸಂಯೋಜನಾಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ, ಡಾ| ಅಶ್ವಿನಿ ಶೆಟ್ಟಿ, NSS ಸಂಯೋಜನಾಧಿಕಾರಿ ಜಗದೀಶ ಕೆ. ನೆಹರು ಯುವಕೇಂದ್ರ, ಮಂಗಳೂರು, ಅನಿಲ್ ಶೇಟ್, ಅಧ್ಯಕ್ಷರು ಮಂಗಳೂರು ಸೈಕಲಿಂಗ್ ಕ್ಲಬ್, ಅಬ್ದುಲ್ ರಹೆಮಾನ್, ಮಂಗಳ ಗ್ರಾಮೀಣ ಯುವಕ ಮಂಡಲ ಕೊಣಾಜೆ ಇವರುಗಳು ಉಪಸ್ಥಿತರಿದ್ದರು. ಬಂದಂತಹ ಎಲ್ಲರಿಗೂ ಉಪಹಾರವನ್ನು ನೀಡಲಾಯಿತು. 

ವಂದನಾರ್ಪಣೆಯ ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. 

ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಶ್ರೀ ಲೋಕೇಶ್ ರೈ ಮಾಡಿದರು ಎಂದು ನೆಹರೂ ಯುವಕೇಂದ್ರದ ಪ್ರಕಟಣೆಯಲ್ಲಿ ತಿಳಿಸಿದರು.