ಬಂಟ್ವಾಳ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಭೋಸ್ ಸಹವರ್ತಿಯಾಗಿ ಶ್ರಮಿಸಿದ್ದ ಗಾಣಿಗ ಸಮುದಾಯದ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಅವರ ಪ್ರತಿಮೆ ಮಂಗಳೂರು ನಗರದಲ್ಲಿ ನಿರ್ಮಿಸಲು ಪಕ್ಷಾತೀತವಾಗಿ ಎಲ್ಲರೂ ಮುಂದಾಗಬೇಕು ಎಂದು ವಿಧಾನಪರಿಷತ್ ಮಾಜಿ ಸಭಾಪತಿ ವಿ. ಆರ್. ಸುದರ್ಶನ್ ಸಲಹೆ ನೀಡಿದ್ದಾರೆ.

ಗಾಣಿಗರ ಸೇವಾ ಸಂಘ ಬಂಟ್ವಾಳ ವತಿಯಿಂದ ಗಾಣಿಗ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಸಹಭಾಗಿತ್ವದಲ್ಲಿ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಸರಗೋಡು ಮತ್ತು ಉಡುಪಿ ಸಹಿತ ಅವಿಭಜಿತ ಜಿಲ್ಲಾ ಮಟ್ಟದ ‘ಗಾಣಿಗ ಕ್ರೀಡೋತ್ಸವ’ದಲ್ಲಿ ಸುದರ್ಶನ್ ಮಾತನಾಡಿದರು.
ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಗಾಣಿಗ ಸಂಘ ಮುಂಬಯಿ ಅಧ್ಯಕ್ಷ ಸಿಎ| ಶ್ರೀನಿವಾಸ ಪಿ.ಸಪಲ್ಯ ರಾಯಿ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿ ‘ಗಾಣಿಗರು ಸಂಘಟಿತರಾಗಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆಯ ಹಾದಿ ಏರಬೇಕು’ ಎಂದರು.
‘ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ’ ಪುರಸ್ಕೃತ ಬ್ಯಾಡ್ಮಿಂಟನ್ ಆಟಗಾರ್ತಿ ಜಯಲಕ್ಷಿ ಗಾಣಿಗ ಕಡೇಶ್ವಾಲ್ಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಈಜುಗಾರ್ತಿ ಶ್ರೀಲಕ್ಷಿ ವಿಟ್ಲ ಇವರನ್ನು ಮಾಜಿ ಸಚಿವ ಬಿ. ರಮಾನಾಥ ರೈ ಸನ್ಮಾನಿಸಿ ಅಭಿನಂದಿಸಿದರು.
ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್ ಗಾಣಿಗ ಮಾತನಾಡಿ ರಾಜ್ಯದ 16 ಜಿಲ್ಲೆಗಳಲ್ಲಿ ಗರಿಷ್ಠ ಸಂಖ್ಯೆ ಹೊಂದಿರುವ ಗಾಣಿಗ ಸಮಾಜಕ್ಕೆ ರಾಜಕೀಯ ಪ್ರಾಧಾನ್ಯತೆ ಸಹಿತ ಸಮುದಾಯ ಭವನ ಮತ್ತು ಶಿಕ್ಷಣ ಸಂಸ್ಥೆ ನಿರ್ಮಿಸಲು ಸೂಕ್ತ ಜಮೀನು ಮತ್ತು ಅನುದಾನ ಒದಗಿಸಬೇಕು ಎಂದರು.
ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಉದ್ಯಮಿ ಮಾಧವ ಎಸ್. ಮಾವೆ ಶುಭ ಹಾರೈಸಿದರು. ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮ ಮುಗರೋಡಿ, ಮಂಗಳೂರು ತಾಲೂಕು ಸಂಘದ ಅಧ್ಯಕ್ಷ ರಾಘವ ಪಡೀಲ್, ಪುತ್ತೂರು ಗಾಣಿಗ ಸಂಘದ ಅಧ್ಯಕ್ಷ ಹರಿ ರಾಮಚಂದ್ರ, ಉಳ್ಳಾಲ ಗಾಣಿಗ ಸಂಘದ ಅಧ್ಯಕ್ಷ ಸುನಿಲ್ ಕುಮಾರ್, ಪುತ್ತೂರು ಯುವ ವೇದಿಕೆ ಅಧ್ಯಕ್ಷ ಪ್ರಸಾದ್ ಪುತ್ತೂರು, ಎಡಪದವು ಸಂಘದ ಅಧ್ಯಕ್ಷ ಭಾಸ್ಕರ್ ಎಡಪದವು, ಬಿಲ್ಲವ ಮಹಾ ಮಂಡಲ ಕೋಶಾಧಿಕಾರಿ ಬೇಬಿ ಕುಂದರ್, ಧಾರ್ಮಿಕ ಸಂಘಟಕ ಜಗನ್ನಾಥ ಬಂಗೇರ ನಿರ್ಮಾಲ್, ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ್ ಆಚಾರ್ಯ, ಉದ್ಯಮಿ ಜನಾರ್ಧನ ಅರ್ಕುಳ, ಶಾಲಾ ಸಂಚಾಲಕ ನರೇಂದ್ರ ಕುಡ್ವ, ಪ್ರಮುಖರಾದ ರತಿಕಾ ಶ್ರೀನಿವಾಸ್ ಮುಂಬಯಿ, ಯುವ ವೇದಿಕೆ ಅಧ್ಯಕ್ಷ ಭುವನೇಶ್ ಮೊಗರ್ನಾಡ್, ಮಹಿಳಾ ವೇದಿಕೆ ಅಧ್ಯಕ್ಷೆ ಆಶಾ ವೇದವ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಭೇಟಿ ನೀಡಿದರು. ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿದರು. ರಿಶಾಂತ್ ತೋಡಾರು ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಮೆಲ್ಕಾರ್ ವಂದಿಸಿದರು.
