ಮಂಗಳೂರು: ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ 2031 ರ ವರದಿ ತಯಾರಿಕೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಮಾಹಿತಿ ನೀಡುವ ಮೂಲಕ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ ಹೇಳಿದ್ದಾರೆ.

ಅವರು ಮಂಗಳವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ 2031ರ ವರದಿಗಳ ತಯಾರಿಕೆ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಮಾನವ ಅಭಿವೃದ್ಧಿ ವರದಿಯು ಜಿಲ್ಲೆಯ ಮಾನವ ಅಭಿವೃದ್ಧಿಯ ಸಮಗ್ರ ಚಿತ್ರಣವನ್ನು ನೀಡಿ, ಜನರ ಆಯ್ಕೆಗಳನ್ನು ವಿಸ್ತರಿಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಜಿಲ್ಲಾ ಮಾನವ ಅಭಿವೃದ್ಧಿ ವರದಿಯು ಜಿಲ್ಲೆಯ ಜನರ ಕಲ್ಯಾಣ, ಶಿಕ್ಷಣ, ಆರೋಗ್ಯ ಮತ್ತು ಆದಾಯದಂತಹ ಅಂಶಗಳನ್ನು ಅಳೆಯುವ ಬಹಳ ಮುಖ್ಯವಾದ ವರದಿಯಾಗಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಮಾನವ ಅಭಿವೃದ್ಧಿ ಕೇವಲ ಆರ್ಥಿಕ ಬೆಳವಣಿಗೆಯಲ್ಲ, ಬದಲಿಗೆ ಜನರ ಬೇಡಿಕೆಗಳನ್ನು ಪೂರೈಸುವುದಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಮಾತನಾಡಿ, ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಕೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ನಿಖರವಾದ ಅಂಕಿ- ಅಂಶಗಳನ್ನು ನೀಡಬೇಕು ಎಂದು ಹೇಳಿದರು. ಎಲ್ಲಾ ಇಲಾಖೆ ಅಧಿಕಾರಿಗಳು ವರದಿ ತಯಾರಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಬೇಕು ಎಂದು ಅವರು ಹೇಳಿದರು. ಕರ್ನಾಟಕ ರಾಜ್ಯ ಮಾನವ ಅಭಿವೃದ್ಧಿ ವರದಿಯಡಿ 11 ನೇ ಸ್ಥಾನದಲ್ಲಿದೆ. ಪ್ರತಿಯೊಂದು ಕುಟುಂಬಕ್ಕೆ ಮೂಲಭೂತ ಸೌಕರ್ಯಗಳು ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಅಚ್ಚುಕಟ್ಟಾಗಿ ಮಾಹಿತಿ ನೀಡಿದರೆ ದಕ್ಷಿಣಕನ್ನಡ ಜಿಲ್ಲೆ ಉಳಿದ ಜಿಲ್ಲೆಗಳಿಗಿಂತ ಜಿಲ್ಲಾ ಮಾನವ ಅಭಿವೃದ್ಧಿಯಲ್ಲಿ ಮುಂದುವರಿಯಲಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಂಟಿ ನಿರ್ದೇಶಕ( ನಿವೃತ್ತ) ಶ್ರೀನಿವಾಸ್ರಾವ್ ಮಾತನಾಡಿ, ಜಿಲ್ಲಾ ಮಾನವ ಅಭಿವೃದ್ಧಿ ವರದಿಗೆ ಅತ್ಯಂತ ಮಹ್ವತ್ವವಾದ ಮೌಲ್ಯವಿದೆ. ಇದು ದೀರ್ಘ, ಆರೋಗ್ಯಕರ ಮತ್ತು ಸೃಜನಾತ್ಮಕ ಜೀವನ ನಡೆಸಲು, ಶಿಕ್ಷಣ ಪಡೆಯಲು ಮತ್ತು ಯೋಗ್ಯಜೀವನ ಮಟ್ಟಕ್ಕೆ ಬೇಕಾದ ಸಂಪನ್ಮೂಲಗಳನ್ನು ಹೊಂದಲು ಅವಕಾಶ ನೀಡುತ್ತದೆ. ಮಾನವ ಅಭಿವೃದ್ಧಿ ಸೂಚ್ಯಂಕ ತಯಾರಿಕೆಗೆ ಜನರ ಜೀವನ ಮಟ್ಟ, ಶಿಕ್ಷಣ, ಆರೋಗ್ಯ, ಆದಾಯ ಸೇರಿದಂತೆ ಇತರೆ ಅಂಕಿ ಅಂಶಗಳನ್ನು ಪರಿಗಣಿಸಲಾಗುತ್ತದೆ. ನಿಖರವಾದ ಮಾಹಿತಿ ಮತ್ತು ಅಂಕಿ ಅಂಶಗಳನ್ನು ನೀಡಿದರೆ ಉತ್ತಮ ವರದಿಯಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯಯೋಜನಾಧಿಕಾರಿ ಸಂಧ್ಯಾಕೆ.ಎಸ್, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಕೆ.ಎಸ್ ಸುಷ್ಮಾ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
