ಉಡುಪಿ: ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚು ಒತ್ತು ನೀಡಿ – ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜಿಲ್ಲೆಯ ಕಡಲ ತೀರಗಳು ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಯಾವುದೇ ಪ್ರಾಣಾಪಾಯಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದರು.
ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕಡಲ ತೀರದಲ್ಲಿ ತೆಗೆದುಕೊಳ್ಳಬೇಕಾದ ಭದ್ರತೆ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಕಡಲಲ್ಲಿ ವಿಹರಿಸಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿ ಬೋಟ್‍ಗಳ ಮೊರೆ ಹೋಗುತ್ತಾರೆ. ಆದ್ದರಿಂದ ಜಿಲ್ಲೆಯ ಎಲ್ಲಾ ಪ್ರವಾಸಿ ಬೋಟ್‍ಗಳು ಬಂದರು, ಪೊಲೀಸ್, ಕರಾವಳಿ ಕಾವಲು ಪಡೆ, ಸ್ಥಳೀಯ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದೇ ಕಡಲಿಗೆ ಇಳಿಯಬೇಕು ಎಂದರು.
ಜಿಲ್ಲೆಯಲ್ಲಿರುವ ಎಲ್ಲಾ ಪ್ರವಾಸಿ ಬೋಟುಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ 45 ದಿನಗಳ ಒಳಗಾಗಿ ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಿಂದ ನೋಂದಣಿ ಮಾಡಿಕೊಂಡು ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಪಡೆಯದೇ ಇರುವ ಪ್ರವಾಸೀ ಬೋಟ್‍ಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದ ಅವರು, ಅನುಮತಿ ಪಡೆದ ಪ್ರವಾಸಿ ಬೋಟ್‍ಗಳು ಪ್ರತೀ ವರ್ಷ ತಮ್ಮ ಪರವಾನಿಗೆಯನ್ನು ನವೀಕರಿಸಿಕೊಳ್ಳಬೇಕು ಎಂದರು.

ಪ್ರವಾಸಿ ಬೋಟ್‍ಗಳಲ್ಲಿ ಪ್ರವಾಸಿಗರ ಹಿತದೃಷ್ಠಿಯಿಂದ ಲೈಫ್ ಜಾಕೆಟ್ ಧರಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿಯೊಬ್ಬ ಪ್ರವಾಸಿಗರು ಕಡಲಿಗೆ ಇಳಿಯುವ ಮುನ್ನ ಲೈಫ್ ಜಾಕೆಟ್ ಧರಿಸುವಂತೆ ನೋಡಿಕೊಳ್ಳಬೇಕು. ಲೈಫ್ ಜಾಕೆಟ್ ಬಳಸುವ ಕುರಿತು ಕರಪತ್ರಗಳನ್ನು ಸಮುದ್ರ ತೀರ ಸೇರಿದಂತೆ ಪ್ರವಾಸಿಗರು ಹೆಚ್ಚಾಗಿ ಸೇರುವಲ್ಲಿ ಪ್ರದರ್ಶಿಸಬೇಕು. ಪ್ರವಾಸಿ ಬೋಟ್‍ಗಳಲ್ಲಿ ಎಲ್ಲರೂ ಲೈಫ್ ಜಾಕೆಟ್ ಧರಿಸಿದ್ದಲ್ಲಿ ಮಾತ್ರ ಬೋಟ್ ಮುಂದೆ ಸಾಗಲಿದೆ ಎಂಬ ಪ್ರೀ-ರೆಕಾರ್ಡೆಡ್ ಆಡಿಯೋವನ್ನು ಬೋಟ್‍ಗಳಲ್ಲಿ ಹೊರಡಿಸಬೇಕು ಎಂದರು.
ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರನ್ನು ಎಚ್ಚರಿಸುವ ಕುರಿತು ಸೂಚನಾ ಫಲಕಗಳನ್ನು ಅಲ್ಲಲ್ಲಿ ಅಳವಡಿಸಬೇಕು. ಪ್ರವಾಸೋದ್ಯಮ ಉದ್ದೇಶಕ್ಕೆ ಬಳಸುವ ಪ್ರವಾಸಿ ಬೋಟ್ ಮಾಲೀಕರುಗಳ ಸಭೆಯನ್ನು ಶೀಘ್ರದಲ್ಲಿ ಕರೆದು ಪರವಾನಿಗೆ ಪಡೆಯುವಂತೆ ಸೂಚನೆ ನೀಡಬೇಕು ಎಂದ ಅವರು, ಜಿಲ್ಲೆಯ ಪ್ರವಾಸಿ ಬೋಟ್‍ಗಳ ಮಾಲೀಕರುಗಳು ಹಾಗೂ ಅದನ್ನು ಚಲಾಯಿಸುವವರಿಗೆ ಕಾರ್ಯಾಗಾರ ಆಯೋಜಿಸಿ, ಸುರಕ್ಷತಾ ವಿಧಾನ ಅನುಸರಿಸುವ ಬಗ್ಗೆ, ವಿಮೆ ಸೌಲಭ್ಯ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಬೇಕು. ಜೀವ ರಕ್ಷಕ ಸಿಬ್ಬಂದಿಗಳೂ ಸಹ ಜೀವ ರಕ್ಷಣಾ ವಿಧಾನಗಳ ಬಗ್ಗೆ ಮಾಹಿತಿ ಹೊಂದಿರುವಂತೆ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯ ಎನ್.ಎಂ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *