ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ಶಾಲಾ ಮೈದಾನದಲ್ಲಿ ರಥ ಸಪ್ತಮಿಯ ಪ್ರಯುಕ್ತ ಸಾಮೂಹಿಕ ಸೂರ್ಯ ನಮಸ್ಕಾರ ನೆರವೇರಿತು.



ರಥ ಸಪ್ತಮಿಯ ಪ್ರಯುಕ್ತ ಕ್ರೀಡಾ ಭಾರತಿ ಮಂಗಳೂರು ಹಾಗೂ ಶಕ್ತಿ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸೂರ್ಯ ನಮಸ್ಕಾರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರಿನ ಹೆಸರಾಂತ ಯೋಗಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ‘ರಥ ಸಪ್ತಮಿ ಅಂದರೆ ಸೂರ್ಯನು ಏಳು ಕುದುರೆಗಳ ರಥವನ್ನುಏರಿ ಆಕಾಶ ಮಾರ್ಗವಾಗಿ ಸಂಚರಿಸುತ್ತಾನೆ. ಏಳು ಕುದುರೆಗಳು ಏಳು ಬಣ್ಣಗಳ ಸಂಕೇತ, ನಾವು ಈ ದಿನ ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಸೂರ್ಯದೇವನ ಆರಾಧನೆ ಮಾಡಬೇಕು. ಬ್ರಾಹ್ಮೀ ಮುಹೂರ್ತದಲ್ಲಿ ನಾವು ಸೂರ್ಯ ನಮಸ್ಕಾರ ಮಾಡಿದಾಗ ನಮ್ಮದೇಹದ ಸರ್ವ ಅಂಗಾಂಗಗಳಿಗೆ ವ್ಯಾಯಾಮವಾಗುತ್ತದೆ.






ನಮ್ಮ ಭಾರತೀಯ ಪರಂಪರೆಯಲ್ಲಿ ಸೂರ್ಯದೇವನನ್ನು ಪೂಜಿಸುವುದನ್ನು ಹಿಂದೆ ಋಷಿ ಮುನಿಗಳು ಗುರುಕುಲ ಪದ್ಧತಿಯಲ್ಲಿ ಮಾಡುತ್ತಿದ್ದರು .ಈಗ ಅದೂ ಬೆಳಕಿಗೆ ಬರಬೇಕಾಗಿದೆ ಅಂತಹ ಕೆಲಸವನ್ನು ಶಕ್ತಿ ವಿದ್ಯಾ ಸಂಸ್ಥೆ ಮಾಡುತ್ತಿದೆ ಇದು ನಿಜಕ್ಕೂ ಶ್ಲಾಘನಿಯ. ಸೂರ್ಯ ನಮಸ್ಕಾರ ಎಂದರೆ ಆಸನ ಮತ್ತು ಪ್ರಾಣಯಾಮದ ಸಂಗಮ. ಸೂರ್ಯದೇವನ ಅನುಗ್ರಹ ಇದ್ದರೆ ದೇಹದಲ್ಲಿ ಉತ್ಸಾಹ ಇರುತ್ತದೆ ಲವಲವಿಕೆ ಇರುತ್ತದೆ.
ಆಧುನಿಕ ಕಾಲದಲ್ಲಿ ನಾವು ಕೆಲಸದ ಒತ್ತಡದಲ್ಲಿ ಬಾಗಿ ಹೋಗಿದ್ದೇವೆ. ಯೋಗಾಭ್ಯಾಸ ಮತ್ತು ಸೂರ್ಯ ನಮಸ್ಕಾರ ಮಾಡುವ ಮೂಲಕ ಸ್ವಾಮಿ ವಿವೇಕಾನಂದರು ಹೇಳಿದಂತೆ ನಮ್ಮ ದೇಹವನ್ನು ವಿಗ್ರಹದಂತೆ ಅಚಲವಾಗಿಟ್ಟುಕೊಳ್ಳಬೇಕು ಪ್ರಪ್ರಥಮವಾಗಿ ಸೂರ್ಯ ನಮಸ್ಕಾರವನ್ನು ಆರಂಭ ಮಾಡುವವರು ಆದಿತ್ಯವಾರದಂದು ಆರಂಭಿಸಿದರೆ ಉತ್ತಮವಾಗಿರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ ಅವರು ಮಾತನಾಡಿ ‘ದಿನ ನಿತ್ಯ ಬೆಳಗ್ಗಿನ ಹೊತ್ತು ಶಕ್ತಿ ವಿದ್ಯಾ ಸಂಸ್ಥೆಯಲ್ಲಿನ ಮಕ್ಕಳಿಗೆ ಗೋಪಾಲಕೃಷ್ಣ ದೇಲಂಪಾಡಿ ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸವನ್ನು ನೀಡಲಾಗುತ್ತಿದೆ. ಹಾಗೇನೇ ಇನ್ನು ಮುಂದಿನ ದಿನಗಳಲ್ಲಿ ಈ ಸೂರ್ಯ ನಮಸ್ಕಾರವನ್ನು ಕೂಡ ಅಭ್ಯಾಸ ಮಾಡಿದರೆ ಬಹಳ ಉತ್ತಮ. ಮಕ್ಕಳ ಆರೋಗ್ಯ ವೃದ್ಧಿಯಾಗುತ್ತದೆ. ನಾವೆಲ್ಲ ಈ ದಿನ ಸೂರ್ಯ ನಮಸ್ಕಾರ ಮಾಡುವ ಮೂಲಕ ಸೂರ್ಯದೇವರ ಆರಾಧನೆ ಮಾಡೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬೊಗಸೆಯಲ್ಲಿ ನೀರು ತೆಗೆದುಕೊಂಡು ಸೂರ್ಯದೇವನಿಗೆ ಅಘ್ರ್ಯ ಸಮರ್ಪಿಸುವುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ನಂತರ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳೆಲ್ಲರೂ ಏಕಕಾಲದಲ್ಲಿ ಸಾಮೂಹಿಕವಾಗಿ ಗೋಪಾಲಕೃಷ್ಣ ದೇಲಂಪಾಡಿ ಅವರ ಮಾರ್ಗದರ್ಶನದಲ್ಲಿ ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ರಥ ಸಪ್ತಮಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಬಬಿತಾ ಸೂರಜ್, ಭೋಜರಾಜ ಕಲ್ಲಡ್ಕ ಕ್ರೀಡಾ ಭಾರತೀಯ ರಾಜ್ಯ ಕಾರ್ಯಕಾರಿಣಿ ಸದಸ್ಯರು, ಕ್ರೀಡಾ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷರಾದ ಕರಿಯಪ್ಪ ರೈ ಮತ್ತು ದೇಲಂಪಾಡಿಯೋಗ ಪ್ರತಿಷ್ಠಾನದ ಸದಸ್ಯರಾದ ಸುಭದ್ರಾ ಮತ್ತು ವೀಣಾ ಉಪಸ್ಥಿತರಿದ್ದರು.
ಶಿಕ್ಷಕ ಶರಣಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
