ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಸಿನಿಮಾಗಳಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದ್ದು, ಪ್ರೇಕ್ಷಕರ ಆಸಕ್ತಿಗೆ ಪೂರಕವಾಗಿ ಇನ್ನಷ್ಟು ಚಿತ್ರಮಂದಿರಗಳು ಹೆಚ್ಚಬೇಕಿದೆ ಎಂದು ಚಿತ್ರ ನಟರಾಜ್ ಬಿ ಶೆಟ್ಟಿ ಹೇಳಿದ್ದಾರೆ.

ಅವರು ಕರಾವಳಿ ಉತ್ಸವದ ಅಂಗವಾಗಿ ನಗರದ ಬಿಜೈ ಭಾರತ್ ಸಿನಿಮಾಸ್‍ನಲ್ಲಿ ನಡೆಯಲಿರುವ 3 ದಿನದ ಕರಾವಳಿ ಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಾವಳಿ ಜಿಲ್ಲೆಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತೀಚೆಗೆ ಬರುತ್ತಿದ್ದು, ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಚಿತ್ರೋದ್ಯಮಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ. ಪ್ರೇಕ್ಷಕರ ಬೆಂಬಲದಿಂದ ಭವಿಷ್ಯದಲ್ಲಿ ಒಳ್ಳೆಯ ಕಥೆ, ಉತ್ತಮ ದೃಶ್ಯಗಳ ಸಿನಿಮಾಗಳು ಮೂಡಿಬರಲಿದೆ. ಈ ನಿಟ್ಟಿನಲ್ಲಿ ಸರಕಾರ ಸ್ಪಂದಿಸಬೇಕು ಎಂದು ಅವರು ಹೇಳಿದರು. ಕರಾವಳಿ ಚಲನಚಿತ್ರೋತ್ಸವ ಜಿಲ್ಲಾಡಳಿತ ಆಯೋಜಿಸಿರುವುದು ಶ್ಲಾಘನೀಯ. ಇದನ್ನು ಪ್ರತಿವರ್ಷ ನಿರಂತರವಾಗಿ ನಡೆಸಿಕೊಂಡು ಬರಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯಚಿತ್ರ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ ಅವರು ಮಾತನಾಡಿ, ಕರಾವಳಿ ಚಲನಚಿತ್ರ ಅಂಗವಾಗಿ 5 ಭಾಷೆಗಳ ಚಲನಚಿತ್ರಗಳು ಒಂದೇ ಸೂರಿನಡಿ ನೋಡುವ ಅವಕಾಶ ಕಲ್ಪಿಸಿರುವುದು ಸಂತೋಷದ ಸಂಗತಿ. ಪ್ರಾದೇಶಿಕ ಭಾಷೆಯ ಚಲನಚಿತ್ರಗಳಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಸಂಘದ ಅಧ್ಯಕ್ಷ ಧನರಾಜ್, ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ, ಟಿ.ಎ ಶ್ರೀನಿವಾಸ್, ವಿಜಯ್ ಕುಮಾರ್ ಬೈಲ್ ಹಾಗೂ ಯತೀಶ್ ಬೈಕಂಪಾಡಿ, ತಮ ಲಕ್ಷ್ಮಣ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟನೆಯ ಅಂಗವಾಗಿ ತುಳು ಚಲನಚಿತ್ರ ‘ಏಸ’ನಡೆಯಿತು. ಜನವರಿ 19 ರಿಂದ 21 ರ ವರೆಗೆ ಚಲನಚಿತ್ರೋತ್ಸವ ನಡೆಯಲಿದೆ.
ಪ್ರದರ್ಶನ ಚಲನಚಿತ್ರಗಳ ವಿವರ :-
ಜನವರಿ 20- ಬೆಳಿಗ್ಗೆ 10 ಗಂಟೆಗೆ ಪಿದಾಯಿ (ತುಳು), ಮಧ್ಯಾಹ್ನ1:30 – ಪಿಲಿಬೈಲ್‍ಯಮುನಕ್ಕ (ತುಳು), ಸಂಜೆ4:30- ಮೀರಾ (ತುಳು), ರಾತ್ರಿ 7- ಗಿರಿಗಿಟ್ (ತುಳು), 7:30- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು (ಕನ್ನಡ), ರಾತ್ರಿ 10 -ಕೊರಮ್ಮ (ತುಳು).
ಜನವರಿ 21 – ಬೆಳಿಗ್ಗೆ 11 ಬ್ಯಾರಿ (ಬ್ಯಾರಿ) , ಮಧ್ಯಾಹ್ನ 2- ದಬಕ್‍ದಬಾ ಐಸಾ (ತುಳು), ಸಂಜೆ4:30 ಉಜ್ವಾಡು (ಕೊಂಕಣಿ), ರಾತ್ರಿ7:15 – ದಸ್ಕತ್ (ತುಳು), 7:30 – ಗರುಡಗಮನ ವೃಷಭ ವಾಹನ(ಕನ್ನಡ), ರಾತ್ರಿ 10 – ಉಳಿದವರು ಕಂಡಂತೆ (ಕನ್ನಡ)
ಚಲನಚಿತ್ರ ಪ್ರದರ್ಶನವು ನಗರದ ಬಿಜೈ ಭಾರತ್ ಸಿನಿಮಾಸ್‍ನಲ್ಲಿ ನಡೆಯಲಿದೆ.
