ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿ ಕೃಷಿಸಿರಿ ಆವರಣದಲ್ಲಿ 23ನೇ ವರ್ಷದ ಇಫ್ತಾರ್ ಕೂಟವನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ಸೇರಿದಂತೆ ಸುಮಾರು 6,000ಕ್ಕೂ ಅಧಿಕ ಮಂದಿ ಭಾಗವಹಿಸಿ ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರಿದರು.




ರಮ್ಜಾನ್ ಸಂದೇಶ ನೀಡಿದ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಅನೀಸ್ ಕೌಸರ್, ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ಇಫ್ತಾರ್‍ಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ. ಇವು ವಿವಿಧ ಧರ್ಮಗಳ ನಡುವೆ ಪರಸ್ಪರ ಗೌರವ ಮತ್ತು ಸಾಮರಸ್ಯವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಪವಿತ್ರ ರಮಝಾನ್ ತಿಂಗಳಲ್ಲಿ ಆಚರಿಸಲಾಗುವ ಉಪವಾಸವು ದೇಹವನ್ನು ಮಾತ್ರವಲ್ಲದೆ ಹೃದಯವನ್ನೂ ಶುದ್ಧಗೊಳಿಸಿ ಮಾನವೀಯತೆ, ಕರುಣೆ ಮತ್ತು ದಯೆಯ ಗುಣಗಳನ್ನು ಬೆಳೆಸುತ್ತದೆ.
ಹೃದಯ ಶುದ್ಧವಾಗಿದ್ದು, ಧರ್ಮದ ಮಾರ್ಗದಲ್ಲಿ ನಡೆದಾಗಲೇ ವ್ಯಕ್ತಿ ನಿಜವಾದ ಮಹಾನ್ ವ್ಯಕ್ತಿಯಾಗುತ್ತಾನೆ ಎಂದು ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ನೀಡಿದ ಸಂದೇಶವನ್ನು ಉಲ್ಲೇಖಿಸಿದರು. ಭಾರತದ ನಾಗರಿಕತೆ ಸಹಿಷ್ಣುತೆ ಮತ್ತು ವೈವಿಧ್ಯತೆಯ ಮೇಲೆ ನಿರ್ಮಿತವಾಗಿದೆ. ವೇದಗಳಲ್ಲಿಯೂ ಸಹ ಸಾಮರಸ್ಯ ಮತ್ತು ಸಹಬಾಳ್ವೆಯ ಸಂದೇಶ ಸ್ಪಷ್ಟವಾಗಿ ಕಾಣುತ್ತದೆ. ಆದ್ದರಿಂದ ಇಂದಿನ ಸಮಾಜದಲ್ಲಿ ಸಹೋದರತ್ವ, ಕರುಣೆ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದರು. ಎಲ್ಲಾ ಧರ್ಮಗಳೂ ಮೂಲತಃ ಕರುಣೆ, ದಯೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಾರುತ್ತವೆ. ಮಾನವನು ಮಾನವಕುಲವನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಎಂ.ಎ. ಗಫೂರ್, ಟ್ರಸ್ಟಿಗಳಾದ ವಿವೇಕ್ ಆಳ್ವ ಹಾಗೂ ಡಾ ವಿನಯ ಆಳ್ವ, ಬಿಲ್ಡರ್ ಮುಸ್ತಫಾ, ಎಂಎಸ್ ಸೈಫುದ್ದೀನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ನಮಾಜ್ ಪ್ರಾರ್ಥನೆಗಾಗಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಸಮೂಹ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
