ಅಜೆಕಾರು ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರೆಕಾಣಿಕೆಯ ಮೆರವಣಿಗೆ

ಕಾರ್ಕಳ: ಅಜೆಕಾರು ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಪೂರ್ವಭಾವಿಯಾಗಿ ನಡೆದ ಹೊರೆಕಾಣಿಕೆ ಮೆರವಣಿಗೆ ಹಾಗೂ ಗಣಪತಿ ದೇವರ ಮೆರವಣಿಗೆ ಭಕ್ತಿಭಾವದಿಂದ ಯಶಸ್ವಿಯಾಗಿ ನೆರವೇರಿತು. ಈ ಮೆರವಣಿಗೆಗೆ ಊರಿನ ಜನರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಧಾರ್ಮಿಕ ಸಂಭ್ರಮ ಎಲ್ಲೆಡೆ ಕಂಡುಬಂತು.

ಮೆರವಣಿಗೆಗೆ ಉದ್ಯಮಿ ಅಜೆಕಾರು ಶಿವರಾಂ ಜಿ ಶೆಟ್ಟಿ,ಚಾಲನೆ ನೀಡಿದರು.
ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಹಾಗೂ ಅಜೆಕಾರು ಪದ್ಮಗೋಪಾಲ್ ಟ್ರಸ್ಟ್ ಸಂಸ್ಥಾಪಕ ಸುಧಾಕರ್ ಶೆಟ್ಟಿ ಅರುಣ್ ಭಟ್ ಎಣ್ಣೆಹೊಳೆ ಸಾಥ್ ನೀಡಿದರು.

ಈ ವೇಳೆ ಅವರು ದೇವರ ಆಶೀರ್ವಾದ ಪಡೆದು ಕಾರ್ಯಕ್ರಮದ ಯಶಸ್ಸಿಗಾಗಿ ಹಾರೈಸಿದರು.

ಅಜೆಕಾರು ರಾಮಮಂದಿರದಿಂದ ಆರಂಭವಾದ ಮೆರವಣಿಗೆ ಪೇಟೆಯ ಮುಖ್ಯರಸ್ತೆಗಳ ಮೂಲಕ ಸಾಗುತ್ತ ಹೆಬ್ರಿ ರಸ್ತೆಯಿಂದ ಪದ್ಮನಗರದತ್ತ ಮುಂದುವರಿಯಿತು. ಮಾರ್ಗಮಧ್ಯೆ ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ವಿಶೇಷವಾಗಿ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ನಿಂತು ಹಸಿರು ವಾಣಿ ಮತ್ತು ಹೊರೆಕಾಣಿಕೆ ವಸ್ತುಗಳನ್ನು ವಾಹನಗಳಿಗೆ ಸಮರ್ಪಿಸುವ ಮೂಲಕ ಭಕ್ತಿ ತೋರಿದರು.

ಈ ಮೆರವಣಿಗೆಯಲ್ಲಿ ಕೇರಳದ ಚೆಂಡೆ ವಾದ್ಯಗಳು ವಿಶೇಷ ಆಕರ್ಷಣೆಯಾಗಿದ್ದವು. ಭಜನಾ ಮಂಡಳಿಗಳ ಭಕ್ತಿಗೀತೆಗಳು ಹಾಗೂ ಸಾಂಪ್ರದಾಯಿಕ ನೃತ್ಯಗಳು ಮೆರವಣಿಗೆಯ ಸೊಬಗು ಹೆಚ್ಚಿಸಿತು. ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಊರಿನ ಪ್ರಮುಖರು ಮೆರವಣಿಗೆಗೆ ಸಾಥ್ ನೀಡಿ ಕಾರ್ಯಕ್ರಮವನ್ನು ಮತ್ತಷ್ಟು ವೈಭವಮಯಗೊಳಿಸಿದರು.

ಸಮಗ್ರವಾಗಿ ಮೆರವಣಿಗೆ ಧಾರ್ಮಿಕ ಉತ್ಸಾಹ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ಸಂಕಲನವಾಗಿತ್ತು. ಭಕ್ತರ ಸಹಕಾರ ಮತ್ತು ಸಂಘಟಕರ ಪರಿಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಇದೇ ಹಿನ್ನೆಲೆಯಲ್ಲಿ ನ. 12ರಂದು ಮಹಾಗಣಪತಿ ದೇವಸ್ಥಾನದಲ್ಲಿ ವೈಭವದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *