ಜಿಲ್ಲೆಯ ಬ್ಯಾಂಕುಗಳು ಆರ್.ಬಿ.ಐ ನ ನಿಗಧಿತ ಗುರಿ ಸಾಧನೆಯ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು : ನಿಶಾ ಠಾಕೂರ್

ಉಡುಪಿ: ಜಿಲ್ಲೆಯ ಬ್ಯಾಂಕುಗಳು ಆರ್ಥಿಕ ವರ್ಷದಲ್ಲಿ ಆರ್.ಬಿ.ಐ ಮಾರ್ಗಸೂಚಿ ಅನ್ವಯ ನೀಡಿರುವ ಗುರಿಗಳನ್ನು ಸಾಧಿಸುವ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಆರ್.ಬಿ.ಐ ಎ.ಜಿ.ಎಂ ನಿಶಾ ಠಾಕೂರ್ ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯ ಹೆಬ್ರಿ ತಾಲೂಕಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ವ್ಯವಹಾರದಲ್ಲಿ ಹಾಗೂ ಬ್ಯಾಂಕ್‍ಗಳ ಶಾಖೆಗಳ ಸಂಖ್ಯೆ ಕಡಿಮೆ ಇದೆ. ಈ ವ್ಯಾಪ್ತಿಯ ಬ್ಯಾಂಕ್‍ನ ಅಧಿಕಾರಿಗಳು ವ್ಯವಹಾರವನ್ನು ಹೆಚ್ಚಿಸಲು ಗಮನಹರಿಸಬೇಕು. ಬ್ಯಾಂಕಿನಿಂದ ದೊರೆಯುವ ಸಾಲ, ಸಹಾಯಧನ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಬ್ಯಾಂಕಿಂಗ್ ವ್ಯವಹಾರದ ವಿಸ್ತರಣೆಗೆ ಮುಂದಾಗಬೇಕು ಎಂದರು.

ಬ್ಯಾಂಕಿಂಗ್ ಠೇವಣಿ ಅನುಪಾತವು ಕಳೆದ ಬಾರಿ ಶೇ.48.47 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.49.54 ರಷ್ಟು ಹೆಚ್ಚಾಳವಾಗುದರೊಂದಿಗೆ ಶೇ. 1.07 ರಷ್ಟು ಏರಿಕೆ ಕಂಡಿದೆ ಎಂದ ಅವರು, ಮುಂದಿನ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗದರ್ಶನದ ಅನ್ವಯ ಸಿ.ಡಿ ಅನುಪಾತವನ್ನು ಹೆಚ್ಚಿಸಲು ಎಲ್ಲಾ ಬ್ಯಾಂಕ್‍ನ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ಬ್ಯಾಂಕ್‍ಗಳ ಕೊಡುಗೆ ಉತ್ತಮವಾಗಿದ್ದು, ಇದು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರೆಯಬೇಕು. ಜಿಲ್ಲೆಯ ಯುವ ಉದ್ಯೋಗಾಸಕ್ತರಿಗೆ ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ನಿಗಧಿತ ಗುರಿಗೂ ಮೀರಿ 165 ಫಲಾನುಭವಿಗಳಿಗೆ 6.59 ಕೋಟಿ ರೂ. ಆರ್ಥಿಕ ನೆರವು ವಿತರಿಸಲಾಗಿದೆ ಎಂದರು.

ಪಿ.ಎಂ.ವಿಶ್ವಕರ್ಮ ಯೋಜನೆಯಡಿ 5865 ಅರ್ಜಿಗಳು ಸ್ವೀಕೃತವಾಗಿದ್ದು, 1345 ಅರ್ಜಿಗಳು ತಿರಸ್ಕøತಗೊಂಡು, 4028 ಫಲಾನುಭವಿಗಳಿಗೆ 36.65 ಕೋಟಿ ರೂ. ಸಾಲ ವಿತರಿಸಲಾಗಿದೆ. ತಿರಸ್ಕೃತ ಅರ್ಜಿಗಳ ಸಂಖ್ಯೆ ಕಡಿಮೆಯಾಗಬೇಕು ಎಂದ ಅವರು, ಯೋಜನೆಯಡಿ ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ, ಅರ್ಹ ಫಲಾನುಭವಿ ಉದ್ಯಮಿಗಳಿಗೆ ಸಬ್ಸಿಡಿಯನ್ನು ಶೀಘ್ರವಾಗಿ ವಿತರಿಸುವಂತೆ ಸೂಚನೆ ನೀಡಿದರು.

ಪಿ.ಎಂ.ಎಫ್.ಎಂ.ಇ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 154 ಫಲಾನುಭವಿಗಳಿಗೆ 20.53 ಕೋಟಿ ರೂ. ಹಾಗೂ ಪಿ.ಎಂ.ಎಸ್.ಜಿ.ಎಂ.ಬಿ.ವೈ ಅಡಿಯಲ್ಲಿ ಬ್ಯಾಂಕುಗಳು 444 ಫಲಾನುಭವಿಗಳಿಗೆ 9.05 ಕೋಟಿ ರೂ. ಆರ್ಥಿಕ ನೆರವನ್ನು ಮಂಜೂರು ಮಾಡಿದೆ ಎಂದ ಅವರು, ಶಿಕ್ಷಣ ವಲಯದಲ್ಲಿ ಆರ್ಥಿಕ ನೆರವು ನೀಡುವ ಪ್ರಮಾಣ ಹೆಚ್ಚಾಗಬೇಕು. ಬ್ಯಾಂಕ್ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುವುದರೊಂದಿಗೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಬ್ಯಾಂಕುಗಳಲ್ಲಿ ಲಭ್ಯವಿರುವ ಆರ್ಥಿಕ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಶಿಬಿರಗಳನ್ನು ಆಯೋಜಿಸಬೇಕು ಎಂದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ-1 ರ ರೀಜನಲ್ ಮ್ಯಾನೆಜರ್ ತದಿನಾಡ ಶ್ರೀನಾಗ ಪೂರ್ಣಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಮಿಣ ಭಾಗದಲ್ಲಿ 239, ಸೆಮಿ ಅರ್ಬನ್‍ನಲ್ಲಿ 94 ಹಾಗೂ ನಗರ ಪ್ರದೇಶಗಳಲ್ಲಿ 106 ಸೇರಿದಂತೆ ಒಟ್ಟು 439 ಬ್ಯಾಂಕ್ ಶಾಖೆಗಳಿದ್ದು, ಒಟ್ಟಾರೆಯಾಗಿ 67,840 ಕೋಟಿ ರೂ. ಬ್ಯಾಂಕಿಂಗ್ ವ್ಯವಹಾರ ನಡೆದಿದ್ದು, ಕಳೆದ ವರ್ಷದ ಸೆಪ್ಟಂಬರ್ ಗೆ ಹೋಲಿಸಿದ್ದಲ್ಲಿ ಶೇ. 9.96 ರಷ್ಟು ಬ್ಯಾಂಕಿಂಗ್ ವ್ಯವಹಾರದಲ್ಲಿ ಬೆಳವಣಿಗೆ ಸಾಧಿಸಲಾಗಿದೆ. ಬ್ಯಾಂಕ್‍ಗಳು 22,475 ಕೋಟಿ ರೂ. ಸಾಲ ಸೌಲಭ್ಯ ನೀಡುವುದರೊಂದಿಗೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ. 11.58 ರಷ್ಟು ಬೆಳವಣಿಗೆ ಹೊಂದಿದೆ. ಅದೇ ರೀತಿ ಬ್ಯಾಂಕ್‍ಗೆ ಠೇವಣಿ ಇರಿಸುವ ಅನುಪಾತವು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಕಾಣಬಹುದಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಆದ್ಯತೆಯ ಮತ್ತು ಆದ್ಯತೆಯೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ 15,514.16 ಕೋಟಿ ರೂ.ಗಳ ವಾರ್ಷಿಕ ಕ್ರೆಡಿಟ್ ಯೋಜನೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಈವರೆಗೆ 13,060.39 ಗುರಿ ಸಾಧಿಸಿ, ಶೇ. 84.18 ಸಾಧನೆ ಮಾಡಲಾಗಿದೆ ಎಂದ ಅವರು, ಕೃಷಿ ವಲಯಕ್ಕೆ 4230.26 ನಿಗಧಿತ ಗುರಿಗೆ 3429.03 ಗುರಿ ಸಾಧಿಸಿ ಶೇ.81.05, ಎಂ.ಎಸ್.ಎಂ.ಇ ವಲಯಕ್ಕೆ 3712.65 ನಿಗಧಿತ ಗುರಿಗೆ 3040.98 ಗುರಿ ಸಾಧಿಸಿ ಶೇ. 81.91 ರಷ್ಟು, ಶಿಕ್ಷಣ ವಲಯಕ್ಕೆ 187.06 ನಿಗಧಿತ ಗುರಿಗೆ 153.21 ಗುರಿ ಸಾಧಿಸಿ ಶೇ. 81.90 ರಷ್ಟು, ವಸತಿ ಕ್ಷೇತ್ರಗಳಿಗೆ 510.02 ನಿಗಧಿತ ಗುರಿಗೆ 174.83 ಗುರಿ ಸಾಧಿಸಿ ಶೇ. 34.28 ರಷ್ಟು, ಇತರೆ ಕ್ಷೇತ್ರಗಳಿಗೆ 399.86 ನಿಗಧಿತ ಗುರಿಗೆ, 246.82 ಗುರಿ ಸಾಧಿಸಿ ಶೇ. 61.73 ಹಾಗೂ ಆದ್ಯತೇತರ ವಲಯಗಳಿಗೆ 6474.31 ನಿಗಧಿತ ಗುರಿಗೆ, 6015.52 ಗುರಿ ಸಾಧಿಸಿ ಶೇ. 92.91 ರಷ್ಟು ಸಾಧನೆ ಮಾಡಲಾಗಿದೆ ಎಂದ ಅವರು, ಪ್ರತೀ ವಲಯಗಳು ಪ್ರತಿಶತಃ ನೂರರಷ್ಟು ಗುರಿ ಸಾಧನೆಗೆ ಮುಂದಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ವಿಜಯ್ ಕುಮಾರ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‍ನ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ರಾಜೇಶ್ ಶೆಟ್ಟಿ, ರುಡ್‍ಸೆಟ್ ನಿರ್ದೇಶಕ ಡಾ. ಬೊಮ್ಮಾಯಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *