ಕಾರ್ಕಳ: ಕ್ರೈಸ್ಟ್ ಕಿಂಗ್ ಶಾಲೆಯಲ್ಲಿ ವರ್ಟೆಕ್ಸ್ ವೆಂಚರ್ – 2026 ಬೇಸಿಗೆ ಶಿಬಿರ

ಕಾರ್ಕಳ: ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಸಂಸ್ಥೆಯ ನೂತನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸಂತ ಬೆಸಿಲಿಕಾ ಅತ್ತೂರು ಇಲ್ಲಿನ ಸಹಾಯಕ ಧರ್ಮ ಗುರುಗಳಾದ ರೆ| ರಾಬಿನ್ ಜಾಯ್ಸನ್‍ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ ಮತ್ತು ಕೌಶಲ್ಯವನ್ನು ಅಭಿವೃದ್ಧಿ ಪಡಿಸುವಲ್ಲಿ ಇಂತಹ ಶಿಬಿರ ಅತ್ಯವಶ್ಯಕ ಎಂದು ಹೇಳಿದರು. ಶಿಬಿರದ ಮುಖ್ಯ ಅತಿಥಿಯಾಗಿ ಆಗಮಿಸಿದ ಯಕ್ಷರಂಗಾಯಣ ಕಾರ್ಕಳ ನಿರ್ದೇಶಕರಾದ ವೆಂಕಟ್ರಮಣ ಐತಾಳ್‍ರವರು ಮಾತನಾಡುತ್ತಾ “ಮಕ್ಕಳಾದ ನೀವು ಜೀವನದಲ್ಲಿ ನಿಮಗೆ ಸಿಗುವ ಎಲ್ಲಾ ಚಟುವಟಿಕೆಗಳಲ್ಲೂ ಪಾಲ್ಗೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ರುಡಾಲ್ಫ್ ಕಿಶೋರ್ ಲೋಬೋರವರು ವಹಿಸಿದ್ದರು. ಅವರು ಮಾತನಾಡುತ್ತಾ “ಯುವ ಮನಸ್ಸುಗಳನ್ನು ಚೈತನ್ಯಗೊಳಿಸಿ, ಕಲಿಕೆ, ಸೃಜನಶೀಲತೆ ಮತ್ತು ಸಾಹಸದೊಂದಿಗೆ ಮುನ್ನಡೆಸುವ ಒಂದು ಪ್ರೇರಣಾದಾಯಕ ಪ್ರಯಾಣವೇ ವರ್ಟೆಕ್ಸ್ ವೆಂಚರ್” ಎಂದು ಹೇಳಿದರು. ದಿನಾಂಕ 23-03-2026 ರಿಂದ 30-03-2026 ರವರೆಗೆ ನಡೆಯುವ ಈ ಶಿಬಿರದಲ್ಲಿ ಧ್ಯಾನ, ಯೋಗ, ಏರೋಬಿಕ್ಸ್, ಇಕೋ ವಾರಿಯರ್ಸ್, ಮ್ಯಾಜಿಕ್ ಶೋ, ಅಡುಗೆ ಮನೆ ಚಟುವಟಿಕೆ, ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ, ಕರಕುಶಲ ವಸ್ತು ತಯಾರಿ, ಸಂಗೀತದ ಮೋಜು, ರಂಗಕಲೆ, ಸಾಹಸಮಯ ಕ್ರೀಡೆಗಳು, ಆರೋಗ್ಯ ತಪಾಸಣೆ, ಹೊರಸಂಚಾರ ಹಾಗೂ ಪುರಾತನ ಕಾಲದ ವಸ್ತುಗಳ ಪ್ರದರ್ಶನ ಇನ್ನೂ ಮುಂತಾದ ಚಟುವಟಿಕೆಗಳು ಈ ಶಿಬಿರದಲ್ಲಿ ನೆರವೇರಲಿದೆ. ವೇದಿಕೆಯಲ್ಲಿ ಸಂಸ್ಥೆಯ ಆಪ್ತ ಸಮಾಲೋಚಕಿಯಾಗಿರುವ ಸಿಸ್ಟರ್ ಶಾಲೆಟ್ ಸಿಕ್ವೇರಾ, ಪದವಿ ಪೂರ್ವ ವಿಭಾಗದ ಪ್ರಾಚಾರ್ಯರಾದ ಲಕ್ಷ್ಮೀನಾರಾಯಣ ಕಾಮತ್, ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ಜೋಸ್ನಾ ಸ್ನೇಹಲತಾ, ಆಡಳಿತಾಧಿಕಾರಿಯಾದ ಕಿರಣ್ ಕ್ರಾಸ್ತಾ ಹಾಗೂ ಕಾಲೇಜು ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ದಯಾನಂದ, ಹಾಗೂ ಪ್ರಾಥಮಿಕ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಉದಯರವಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಲಕ್ಷ್ಮೀರವರು ಸ್ವಾಗತಿಸಿ, ವಿಜೇತಾ ಜೈನ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Leave a Reply

Your email address will not be published. Required fields are marked *