ಕಾರ್ಕಳ: ಏ. 19 ರಂದು ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಕಾರ್ಯಾಲಯ ಉದ್ಘಾಟನೆ ಹಾಗೂ ದಿನಾಂಕ ಘೋಷಣೆ

ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ (ರಿ.) ವತಿಯಿಂದ ಕಾರ್ಯಾಲಯ ಉದ್ಘಾಟನೆ ಮತ್ತು 2027ರಲ್ಲಿ ನಡೆಯಲಿರುವ ಕಾರ್ಕಳ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಏ. 19ರಂದು ಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನೆ ಹಾಗೂ ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆ ಕಾರ್ಯಕ್ರಮವು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.

ಭಾನುವಾರ ಕಾರ್ಕಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವು ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ನೆರವೇರಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷರಾದ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 2027ರ ಮಹಾಮಸ್ತಕಾಭಿಷೇಕದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.

ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಕರ್ನಾಟಕ ಸರಕಾರದ ಯೋಜನಾ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖಾ ಸಚಿವರಾದ ಸುಧಾಕ‌ರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಳರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಶಾಸಕ ವಿ. ಸುನಿಲ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಮಸ್ತಕಾಭಿಷೇಕದ ಸಿದ್ಧತೆಗಾಗಿ ವಿವಿಧ ಕಾಮಗಾರಿಗಳಿಗೆ ಸರ್ಕಾರದ ಅನುದಾನಕ್ಕಾಗಿ ಒಟ್ಟು 82 ಕೋಟಿ ರೂಪಾಯಿ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ ವಿದ್ಯುದ್ದೀಕರಣಕ್ಕಾಗಿ 1.50 ಕೋಟಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳು ಸೇರಿವೆ. ಕಳೆದ ಬಾರಿ ಸರ್ಕಾರದಿಂದ 7 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಈ ಬಾರಿ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ ಎಂದರು.
ಇದಲ್ಲದೇ ಕಾರ್ಕಳದ ದಾನಶಾಲೆ ರಸ್ತೆ ದ್ವಿಪಥ ಅಭಿವೃದ್ಧಿಗಾಗಿ 2.50 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.

ಈ ಸುದ್ದಿಗೋಷ್ಠಿ ಸಂದರ್ಭದಲ್ಲಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಸಹ ಕೊಶಾಧಿಕಾರಿ ಪ್ರಭಾತ್ ಕುಮಾರ್, ಉಪಾದ್ಯಕ್ಷರಾದ ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ ಜಯಕಿರ್ತಿ ಕಡಂಬ, ಕಾರ್ಯದರ್ಶಿಗಳಾದ ಹಡೆಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೊಳಿ, ಮಹಾವೀರ ಹೆಗ್ಡೆ ಮುಡಾರು, ಭರತ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮಜೈನ್, ಶಿಶುಪಾಲ ಜೈನ್, ಜೊತೆ ಕಾರ್ಯದರ್ಶಿಗಳಾದ ಶಶಿಕಲ ಹೆಗ್ಡೆ, ಹರ್ಷಿಣಿ ವಿಜಯರಾಜ್, ಮೋಹಿನಿ ವರ್ದಮಾನ್, ನಿರಂಜನ್ ಜೈನ್, ಪೃಥ್ವಿರಾಜ್ ಹೆಗ್ಡೆ, ಆದಿರಾಜ ಲಿಜಿ ಸಾಂತ್ರಬೆಟ್ಟು, ಅಮೃತ ಮಲ್ಲಿ, ಪ್ರಭಾಕರ ಅತಿಲಾರಿ, ದೀಪಕ್ ಜೈನ್, ಅಶೋಕ್ ಕುಮಾರ್ ಬಳ್ಳಾಲ್, ವಿನಯ ಅರಿಗ, ವಿನಯ್ ಉದಯ ಕುಮಾರ್, ವಿಖ್ಯಾತ್ ಜೈನ್, ಚಂದ್ರ ಕೀರ್ತಿ ಜೈನ್, ಧನಂಜಯ ಜೈನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *