ಮುಂಬಯಿ: ಬಿಎಸ್ಕೆಬಿ ಅಸೋಸಿಯೇಶನ್ ಗೋಕುಲ ಸಾಯನ್ ಭಾರತದ 77ನೇ ಗಣರಾಜ್ಯ ದಿನವನ್ನು ಕಳೆದ ಸೋಮವಾರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಿತು. ಪ್ರಾತಃಕಾಲ ಸಂಘದ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅವರು ಪದಾಧಿಕಾರಿಗಳು ಹಾಗೂ ನೆರೆದ ಸದಸ್ಯರುಗಳ ಉಪಸ್ಥಿತಿಯಲ್ಲಿ ರಾಷ್ಟ್ರಗೀತೆಯೊಂದಿಗೆ ಧ್ವಜವಂದನೆ ಸಲ್ಲಿಸಿದರು.



ಬೆಳಿಗ್ಗೆ ಗೋಕುಲದ ಸರಸ್ವತಿ ಸಭಾಗೃಹದಲ್ಲಿ ಸಭಾ ಕಾರ್ಯಕ್ರಮದ ನಡೆಸಲಾಗಿದ್ದು, ಸಂಘದ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್, ಉಪಾಧ್ಯಕ್ಷರುಗಳಾದ ಮೋಹನ್ರಾಜ್, ಚಿತ್ರಾ ಮೇಲ್ಮನೆ, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಗಣೇಶ್ ಭಟ್, ಜತೆ ಕಾರ್ಯದರ್ಶಿ ವಿನೋದಿನಿ ರಾವ್ ಉಪಸ್ಥಿತರಿದ್ದರು. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್ಸಿ, ಎಚ್ಎಸ್ಸಿ ಮತ್ತು ವಿವಿಧ ಪದವಿ ಹಾಗೂ ಉನ್ನತ ಪದವಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಿದರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸದಸ್ಯರನ್ನು ಗೌರವಿಸಿದರು. ವಿದ್ಯಾ ರಾವ್ ಮತ್ತು ರಾಮಮೂರ್ತಿ ಭಟ್ ಪ್ರತಿಭಾವಂತರ ಯಾದಿ ಘೋಷಿಸಿದರು.




ಡಾ| ಸುರೇಶ್ ರಾವ್ ಮಾತನಾಡಿ ಗೋಕುಲ ತನ್ನ ಶತಮಾನೋತ್ಸವವನ್ನು ಸದಸ್ಯರೆಲ್ಲರ ಪೂರ್ಣ ಸಹಕಾರದಿಂದ ಅತ್ಯಂತ ಸಂಭ್ರಮದಿಂದ ಆಚರಿಸಿದೆ. ಅದೇ ಉತ್ಸಾಹ ಮತ್ತು ಸಹಕಾರ ಇನ್ನು ಮುಂದೆಯೂ ಇರಲಿ ಎಂದು ಸರ್ವರಿಗೂ ಗಣತಂತ್ರ ದಿನದ ಶುಭಾಶಯಗಳನ್ನು ಸಲ್ಲಿಸಿ ಹಾರೈಸಿದರು.
ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯುವ ವಿಭಾಗ ಮತ್ತು ಮಹಿಳಾ ವಿಭಾಗದವರು ಪ್ರಸ್ತುತ ಪಡಿಸಿದ ಭಾರತದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಮಧ್ಯಭಾರತ ಸೇರಿದಂತೆ ವಿವಿಧ ರಾಜ್ಯಗಳ ವೈಭವೋಪೇತ ಆಭರಣ ಅಲಂಕಾರಗಳ ಪ್ರದರ್ಶನ ಮನ ರಂಜಿಸಿತು. ಗೀತಾ ಹೆರಲಾ ಮತ್ತು ಬಳಗದವರ ನಿರ್ದೇಶನದಲ್ಲಿ ಬಾಲಕಲಾವೃಂದದ ಚಿಣ್ಣರಿಂದ “ನೇತ್ರದಾನ ಮಹಾದಾನ” ಎಂಬ ಕಿರು ಪ್ರಹಸನ, ದೇಶ ಭಕ್ತಿ ಗೀತೆ, ನೃತ್ಯ ಪ್ರಸ್ತುತಗೊಂಡಿತು.
ಸಂಘದ ವಿವಿಧ ವಲಯದ ಕನ್ನಡ ಕಲಿಕಾ ಕೇಂದ್ರ ಅಂಧೇರಿ ವಲಯ “ಅತಿಆಸೆ”, ಮೀರಾರೋಡ್ ವಲಯ “ಮಲ್ಲಿಗೆ, ಸಂಪಿಗೆ, ಸೇವಂತಿಗೆ” ನವಿ ಮುಂಬಯಿ ವಲಯ ಹಾಗೂ ಸಾಯನ್ ವಲಯವು “ಕುದುರೆ ಮೊಟ್ಟೆ” ಹಾಸ್ಯ ಪ್ರಹಸನಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿತು. ತನ್ವಿ ರಾವ್ ನಿರೂಪಣೆಯಲ್ಲಿ ಗೋಕುಲದ ವಿವಿಧ ವಲಯ ಸದಸ್ಯರು ದೇಶಭಕ್ತಿ ಗೀತೆಗಳ ಕಾರ್ಯಕ್ರಮ ಪ್ರಸ್ತುತಗೊಂಡಿತು. ಶೈಲಿನಿ ರಾವ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನ ಕಂಡಿತು.
