ಉಜಿರೆ: ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಪದವಿ ಪ್ರದಾನ, ರ‍್ಯಾಂಕ್ ವಿಜೇತರ ಅಭಿನಂದನೆ

ಉಜಿರೆ: ಯಾವುದೇ ಕ್ಷೇತ್ರದಲ್ಲಿ ಉನ್ನತ ಸೇವೆ, ಸಾಧನೆ ಮಾಡಬೇಕಾದರೆ ಪ್ರತಿಯೊಬ್ಬರಲ್ಲಿಯೂ ಶಿಕ್ಷಣದ ಜೊತೆಗೆ ವಿಶೇಷ ಕೌಶಲ ಅನಿವಾರ್ಯವಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ (2025-2026) ರಾಜ್ಯಸರ್ಕಾರ ಮತ್ತು ಅಜೀಂ ಪ್ರೇಮ್‌ಜಿ  ಪ್ರತಿಷ್ಠಾನದ ಮಧ್ಯೆ ಈಗಾಗಲೇ ಮಾಡಿಕೊಂಡ ಒಪ್ಪಂದದಂತೆ “ದೀಪಿಕಾ” ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪಿ.ಯು.ಸಿ. ಉತ್ತೀರ್ಣರಾದವರು ಯಾವುದೇ ಪದವಿ ತರಗತಿ, ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ವರೆಗೆ ವರ್ಷಕ್ಕೆ ಮೂವತ್ತು ಸಾವಿರ ರೂ. ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.

ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. (ಸ್ವಾಯತ್ತ) ಕಾಲೇಜಿನಲ್ಲಿ 24 ಮಂದಿ ಪದವಿ ತರಗತಿ, 22 ಮಂದಿ ಸ್ನಾತಕೋತ್ತರ ಪದವಿ ಶಿಕ್ಷಣ ಪೂರೈಸಿದ ಹಾಗೂ ರ‍್ಯಾಂಕ್‌ ವಿಜೇತ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ, ಅಭಿನಂದಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿಗಾಗಿ ಸರ್ಕಾರದ ವತಿಯಿಂದ ವಿಶೇಷ ಯೋಜನೆ ರೂಪಿಸಿದ್ದು, ಭಾಷಾ ಪ್ರಯೋಗಾಲಯ, ತಾಂತ್ರಿಕ ಶಿಕ್ಷಣದೊಂದಿಗೆ ಕೌಶಲಾಭಿವೃದ್ಧಿ, ಭಾಷಾ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಿ ಪಠ್ಯಕ್ರಮ ರೂಪಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಬೆಂಗಳೂರು ಈಗ ಸಿಲಿಕಾನ್ ಸಿಟಿಯಾಗಿ ಪ್ರಗತಿ ಹೊಂದಿದ್ದು ಸಂತಸವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಶಿಕ್ಷಣದಲ್ಲಿ ಶೇ.75 ರಷ್ಟು ವಿದ್ಯಾರ್ಥಿನಿಯರೇ ಇದ್ದು ತನ್ಮೂಲಕ ಮಹಿಳಾ ಸಬಲೀಕರಣವಾಗುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಎಸ್.ಡಿ.ಎಂ. ಡೆಂಟಲ್ ಕಾಲೇಜು ದೇಶದಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಹೆಗ್ಗಡೆಯವರನ್ನು ಅವರು ಅಭಿನಂದಿಸಿದರು.
ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸೇವೆ-ಸಾಧನೆಗೆ ಅಭಿನಂದಿಸಿ ನ್ಯಾಕ್ ನಿಂದ ಎ++ ಮಾನ್ಯತೆ ಪಡೆದಿರುವುದು ಸ್ತುತ್ಯಾರ್ಹವಾಗಿದ್ದು, ಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸಚಿವರು ಅಭಿನಂದಿಸಿದರು.
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗದ ಉಪನಿರ್ದೇಶಕಿ ಡಾ. ಕವಿತಾ ಕೆ.ಆರ್. ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ತಮ್ಮ ತೀರ್ಥರೂಪರಾದ ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರು 1966 ರಲ್ಲಿ ಉಜಿರೆಯಲ್ಲಿ ಒಂದು ಕಾಲೇಜು ಆರಂಭಿಸಲು ಪ್ರತ್ಯೇಕ ಟ್ರಸ್ಟ್ ಸ್ಥಾಪಿಸಿದರು. ಸ್ಥಾಪಕ ಪ್ರಾಂಶುಪಾಲ ಪ್ರೊ. ಎಸ್. ಪ್ರಭಾಕರ್, ಡಾ. ಬಿ. ಯಶೋವರ್ಮ ಹಾಗೂ ಎಲ್ಲಾ ಸಿಬ್ಬಂದಿಗಳ ಉತ್ತಮ ಸೇವೆಯನ್ನು ಅವರು ಶ್ಲಾಘಿಸಿದರು.
ನಿರ್ಧಿಷ್ಟ ಗುರಿಯೊಂದಿಗೆ ದೃಢಸಂಕಲ್ಪದಿಂದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಉನ್ನತ ಪ್ರಗತಿ, ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ಅವರು ಶುಭ ಹಾರೈಸಿದರು.
ಸದ್ಯದಲ್ಲಿಯೆ ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ನಂದಕುಮಾರಿ ಕಾಲೇಜಿನ ಪ್ರಗತಿ-ಸಾಧನೆಯ ವರದಿ ಸಾದರ ಪಡಿಸಿದರು.

ಮಂಗಳೂರು ವಿ.ವಿ. ಭೌತಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ. ದೇವೇಂದ್ರಪ್ಪ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಸೌಮ್ಯ, ಬಿ.ಪಿ. ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ಸ್ವಾಗತಿಸಿದರು. ಡಾ. ಶ್ರೀಧರ ಭಟ್ ಧನ್ಯವಾದವಿತ್ತರು.
ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಪ್ರಾಧ್ಯಾಪಕಿ ಡಾ. ನೆಫಿಸೆತ್ ಕಾರ್ಯಕ್ರಮ ನಿರ್ವಹಿಸಿದರು.
ಸಚಿವರ ಧರ್ಮಸ್ಥಳ ಭೇಟಿ: ಸಮಾರಂಭದ ಬಳಿಕ ಸಚಿವ ಡಾ. ಎಂ.ಸಿ. ಸುಧಾಕರ್ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.

ಹೆಗ್ಗಡೆಯವರೊಂದಿಗೆ ಮಾತುಕತೆ ನಡೆಸಿ, ಭೋಜನದ ಬಳಿಕ ಮಂಗಳೂರಿಗೆ ಪ್ರಯಾಣಿಸಿದರು.

.

Leave a Reply

Your email address will not be published. Required fields are marked *