ನಿಟ್ಟೆ: ಎಂಸಿಎ ವಿಭಾಗದಿಂದ ಟೆಕ್-ನೋ’26 ತಾಂತ್ರಿಕ ಮಹೋತ್ಸವ

ನಿಟ್ಟೆ: ‘ಕೃತಕ ಬುದ್ಧಿಮತ್ತೆಯು (AI) ಉದ್ಯೋಗಾವಕಾಶಗಳನ್ನು ಕಡಿತಗೊಳಿಸುತ್ತದೆ ಎಂದು ದೂರುವುದರ ಬದಲು ಅದನ್ನ ಬಳಸಿಕೊಂಡು ನಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದು ಉಡುಪಿಯ ಥಾಟ್ ಗ್ರೈನ್ಸ್ ಸೊಲ್ಯೂಶನ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಅರುಣಾಚಲ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗವು ಉಡುಪಿಯ ಥಾಟ್ ಗ್ರೈನ್ಸ್ ಸೊಲ್ಯೂಶನ್ಸ್ ನ ಸಹಯೋಗದಲ್ಲಿ ಫೆ.20 ರಂದು ಹಮ್ಮಿಕೊಂಡ ‘ಟೆಕ್-ನೋ’26’ ತಾಂತ್ರಿಕ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನ ಬೆಳವಣಿಗೆಯಿಂದ ನಮ್ಮ ಬದುಕು ಹೇಗೆ ಸುಲಭದಾಯಕವಾಗಲಿದೆ ಎಂಬುದನ್ನು ನಾವು ಮನನ ಮಾಡಬೇಕು. ವಿಭಿನ್ನ ಪ್ರೋಗ್ರಾಮಿಂಗ್ ಭಾಷೆಗಳ ಮೇಲೆ ಗಮನಹರಿಸಿ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಗೌರವ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ ಅವರು ಮಾತನಾಡಿ ‘ಎಐ ಎಂಬುದು ಮಾನವರ ಭಾವನಾತ್ಮಕ ನಿರ್ಧಾರಶಕ್ತಿ ಹಾಗೂ ಸಾಮಾನ್ಯ ವಿವೇಕವನ್ನು ಯಾವುದೇ ಸಂದರ್ಭದಲ್ಲೂ ಬದಲಾಯಿಸಲು ಸಾಧ್ಯವಿಲ್ಲ. ಇಂದಿನ ದಿನದ ತಂತ್ರಜ್ಞಾನಕ್ಕೆ ನಾವು ಒಗ್ಗಿಕೊಳ್ಳುವುದು ಅನಿವಾರ್ಯ. ಎಐಯಿಂದ ಆರೋಗ್ಯದಂತಹ ಕ್ಷೇತ್ರಗಳಲ್ಲಿ ಉತ್ತಮ ಬೆಳವಣಿಗೆ ಕಾಣಲು ಸಹಕಾರಿ’ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಎಂಸಿಎ ವಿಭಾಗವನ್ನು ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ನಿರಂಜನ್ ಚಿಪ್ಳುಣ್ಕರ್ ಅವರು, ತಾಂತ್ರಿಕ ಜ್ಞಾನವನ್ನು ವಿಸ್ತರಿಸುವ ಮತ್ತು ವಿದ್ಯಾರ್ಥಿಗಳಲ್ಲಿ ನವೀನ ಚಿಂತನೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದ ಉಪಯೋಗವನ್ನು ಪಡೆಯುವಂತೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕರಾವಳಿ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳ 120ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಂಸಿಎ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಬಲಿಪ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ಮತ್ತು ವೈಶಿಷ್ಟ್ಯಗಳ ಕುರಿತು ವಿವರಿಸಿದರು. ಟೆಕ್-ನೋ’26 ಸಂಯೋಜಕರಾದ ಡಾ. ಸ್ಪೂರ್ತಿ ಪಿ. ಶೆಟ್ಟಿ ಮುಖ್ಯ ಅತಿಥಿಯನ್ನು ಪರಿಚಯಿಸಿದರು ಹಾಗೂ ಡಾ. ಮಂಗಳ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಸಾತ್ವಿಕಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *