ಕಾರ್ಕಳ ಬಳಿ ಭೀಕರ ರಸ್ತೆ ಅಪಘಾತ: ಖಾಸಗಿ ಬಸ್-ತೂಫಾನ್ ಮುಖಾಮುಖಿ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು…

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಕಂಬಳ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರ್ಮಸ್ಥಳದಿಂದ ಕಾರ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಕಾರ್ಕಳದಿಂದ ಧರ್ಮಸ್ಥಳ ಕಡೆ ಹೋಗುತಿದ್ದ ತೂಫಾನ್ ವಾಹನದ ನಡುವೆ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯ ಖಾನಾಪೂರದ 12 ಮಂದಿಯಲ್ಲಿ ಮೂವರು ಮೃತಪಟ್ಟಿದ್ದು, 9 ಜನ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಚಾಲಕ ಮಣ್ಣಪ್ಪ, ಚೇತನ್(27) ಹಾಗೂ ರೋಹಿತ್(28) ಎಂದು ಗುರುತಿಸಲಾಗಿದೆ.

ಗುಲ್ಬರ್ಗ ಮೂಲದ ಯಾತ್ರಿಕರು ತೂಫಾನ್ ವಾಹನದಲ್ಲಿ ಧರ್ಮಸ್ಥಳದತ್ತ ಪ್ರಯಾಣಿಸುತ್ತಿದ್ದಾಗ, ಧರ್ಮಸ್ಥಳದಿಂದ ಕಾರ್ಕಳ ಕಡೆಗೆ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ಸು ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೂಫಾನ್ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದೆ.
ತೂಫಾನ್ ವಾಹನದಲ್ಲಿ ಮಲ್ಲಮ್ಮ (45), ಸಂಗೀತ (40), ಕವಿತಾ (38) ಬಸವರಾಜ್ (56), ಕಿಶೋರ್ (28), ಲಕ್ಷ್ಮೀ (25), ಜ್ಯೋತಿ (25), ಜಯಲಕ್ಷ್ಮೀ (24), ಕುಶಲ್ (2) ಗಾಯಗೊಂಡವರನ್ನು ಕಾರ್ಕಳ ಹಾಗೂ ಉಡುಪಿ ನಗರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅವೈಜ್ಞಾನಿಕ ಕಾಮಗಾರಿ ಅಪಘಾತಗಳಿಗೆ ಕಾರಣ….!

ರಾಷ್ಟ್ರೀಯ ಹೆದ್ದಾರಿ 169ಎ ಯ ಅವೈಜ್ಞಾನಿಕ ಕಾಮಗಾರಿಯೇ ಇಂತಹ ಅಪಘಾತಗಳಿಗೆ ಕಾರಣವಾಗಿದೆ. ಹೆದ್ದಾರಿಯಲ್ಲಿ ಸೂಕ್ತ ದಿಕ್ಕು ಸೂಚಕ ಫಲಕಗಳ ಕೊರತೆ, ಸರಿಯಾದ ಡಿವೈಡರ್‌ಗಳಿಲ್ಲದಿರುವುದು ಹಾಗೂ ಏಕಮುಖ ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ನಡೆಯುತ್ತಿದ್ದರೂ ವಾಹನ ಸಂಚಾರಕ್ಕೆ ಸ್ಪಷ್ಟ ನಿಯಮಗಳಿಲ್ಲದೆ, ಎರಡು ಬದಿಗಳಿಂದ ವಾಹನಗಳು ಮುಖಾಮುಖಿಯಾಗಿ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *