ಫೆ. 7 ರಂದು ನಿಟ್ಟೆಯಲ್ಲಿ ‘ಯಕ್ಷಗವಿಷ್ಟಿ’ ಯಕ್ಷಗಾನ ಸ್ಪರ್ಧೆ

ಕಾರ್ಕಳ: ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಡಿಯಲ್ಲಿ ಆಹ್ವಾನಿತ ತಂಡಗಳ ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಗವಿಷ್ಟಿ’ಯನ್ನು ಫೆಬ್ರವರಿ 7 ರಂದು ನಿಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಗಣ್ಯರ ಸಮ್ಮುಖದಲ್ಲಿ ಅತಿಥಿಗಳಾಗಿ ವೇ|| ಮೂ|| ಕೆಮ್ಮಣ್ಣು ಪ್ರಸನ್ನ ಆಚಾರ್ಯ, ಅರ್ಚಕರು, ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ನಿಟ್ಟೆ ಉದ್ಘಾಟಿಸಲಿರುವರು. ನಿಟ್ಟೆ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ ಅಧ್ಯಕ್ಷತೆ ವಹಿಸಲಿರುವರು. ಸಂಜೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ  ಶ್ರೀ ಹರಿನಾರಾಯಣದಾಸ ಆಸ್ರಣ್ಣ ಭಾಗವಹಿಸಲಿರುವರು.

ಈ ಸ್ಪರ್ಧೆಯಲ್ಲಿ ಸಂಸ್ಥೆಯ ಪರಿಸರದ ಆಹ್ವಾನಿತ ಕಾಲೇಜುಗಳ ಕಲಾವಿದರು ಸ್ಪರ್ಧೆಯ ಅಂಗವಾಗಿ ಒಂದೇ ಪ್ರಸಂಗವಾದ “ಸೌದಾಸ ಚರಿತ್ರೆ” ಅನ್ನು ಪ್ರದರ್ಶಿಸಲಿರುವರು. ಸ್ಪರ್ಧೆಯ ಬಳಿಕ ಆತಿಥೇಯ ಕಾಲೇಜಿನ ಕಲಾವಿದರಿಂದ ತೆಂಕು-ಬಡಗು ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಎಲ್ಲಾ ತಂಡಗಳು ಒಂದೇ ಪ್ರಸಂಗವನ್ನು ಪ್ರದರ್ಶಿಸುವ ಅಪರೂಪದ ನಿಯಮವನ್ನು ಒಳಗೊಂಡಿರುವ ಈ ವಿಶಿಷ್ಟ ಯಕ್ಷಗಾನ ಸ್ಪರ್ಧೆಯಲ್ಲಿ ನೋಂದಣಿ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳು ಸಂಪೂರ್ಣವಾಗಿ ಕಾಗದರಹಿತವಾಗಿ, ಅಂತರ್ಜಾಲ ಆಧಾರಿತವಾಗಿ ನಡೆಯಲಿವೆ. ಇದರ ಮೂಲಕ ಪರಂಪರೆ ಮತ್ತು ತಂತ್ರಜ್ಞಾನಗಳ ಅಪೂರ್ವ ಸಂಗಮಕ್ಕೆ ‘ಯಕ್ಷಗವಿಷ್ಟಿ’ ವೇದಿಕೆಯಾಗಲಿದೆ.

ತಂಡಗಳ ಏಕ ಪ್ರಸಂಗದ ತೀವ್ರ ಪೈಪೋಟಿಗೆ ಸಾಕ್ಷಿಯಾಗಲು ಯಕ್ಷಗಾನ ಅಭಿಮಾನಿಗಳನ್ನು ಆದರಪೂರ್ವಕವಾಗಿ ಆಹ್ವಾನಿಸುತ್ತೇವೆ ಎಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *