ಉಡುಪಿ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ  ತೆಂಗಿನ ಮರದ ಸ್ನೇಹಿತರು ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಸುಧೀರ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತೆಂಗಿನಕಾಯಿ, ತೆಂಗಿನ ಎಣ್ಣೆಯ ಬೆಲೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ, ಇತ್ತೀಚಿನ ದಿನಗಳಲ್ಲಿ ತೆಂಗಿನ ಉತ್ಪಾದನೆ ಬಹಳ ಕಡಿಮೆಯಾಗಿದ್ದು, ಎಲ್ಲಾ ರೈತರು ತಮಗೆ ತಿಳಿದಿರುವ ಮಾಹಿತಿಯನ್ನು ಬೇರೆ ರೈತರಲ್ಲೂ ಹಂಚಿಕೊಂಡು ಕೃಷಿಗೆ ಪ್ರಾಧಾನ್ಯತೆ ಕೊಡುವಂತೆ ತಿಳಿಸಿದರು.

ತೆಂಗಿನ ಉತ್ಪನ್ನ ಹೀಗೆ ಕಡಿಮೆ ಆಗುತ್ತಾ ಹೋದರೆ ಹೊರ ದೇಶಕ್ಕೆ ಅವಲಂಭಿತವಾಗಬೇಕಾಗುತ್ತದೆ. ಆಗ ನಾವು ಗುಣಮಟ್ಟ ಮತ್ತು ದರದ ಬಗ್ಗೆ ಯೋಚಿಸುವಂತಿಲ್ಲ ಎಂದು ತಿಳಿಸಿದರು. ಇದು ಒಂದು ಉತ್ತಮ ತರಬೇತಿ ಕಾರ್ಯಕ್ರಮ, ಎಲ್ಲರೂ ತರಬೇತಿಯ ಪ್ರಯೋಜನ ಪಡೆದುಕೊಂಡು ತೆಂಗಿನ ಮರ ಹತ್ತುವ ಈ ಕಾರ್ಯಕ್ರಮವನ್ನು ಆದಾಯದ ಮೂಲವಾಗಿ ಮಾಡಿಕೊಳ್ಳಿ ಎಂದರು. ಮಹಿಳೆಯರು ಈ ಕಾರ್ಯಕ್ರಮದ ಬಗ್ಗೆ ಆಸಕ್ತಿ ತೋರಿಸಿದ್ದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ ವಲಯ ಕೃಷಿ ಮತ್ತು ಸಂಶೋಧನಾ ಕೇಂದ್ರ ಬ್ರಹ್ಮಾವರದ ಮಣ್ಣು ಮತ್ತು ನೀರು ಸಂರಕ್ಷಣೆ ವಿಜ್ಞಾನಿ ವಿ.ಆರ್.ವಿನೋದ್ ಮಾತನಾಡಿ, ಎಲ್ಲರೂ ಈ 21 ದಿನಗಳ ಕಾಲ ತಮ್ಮ ಕೆಲಸಗಳನ್ನು ಬದಿಗಿಟ್ಟು ಈ ತರಬೇತಿಗೆ ತಮ್ಮ ಸಮಯವನ್ನು ನೀಡಿದ್ದೀರಿ. ಇದರ ಪೂರ್ತಿ ಪ್ರಯೋಜನ ನಿಮಗೆ ಸಿಗಲಿ ಎನ್ನುವುದು ನನ್ನ ಆಶಯ ಎಂದರು.

ಕೆ.ವಿ.ಕೆ ಬ್ರಹ್ಮಾವರದ ತೋಟಗಾರಿಕೆ ವಿಜ್ಞಾನಿ ಚೈತನ್ಯ ಹೆಚ್. ಎಸ್, ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೆ.ವಿ.ಕೆ, ಬ್ರಹ್ಮಾವರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಎನ್. ಈ. ನವೀನ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ರೈತರು ಈ ಕಾರ್ಯಕ್ರಮದ ಬಗ್ಗೆ ತಮ್ಮ ಅನುಭವವನ್ನು ಹಾಗೂ ಈ ತರಬೇತಿಯಿಂದ ಅವರಿಗೆ ಆದ ಪ್ರಯೋಜನದ ಬಗ್ಗೆ ತಮ್ಮ ವಿಚಾರದಾರೆಯನ್ನು ವ್ಯಕ್ತಪಡಿಸಿದರು.