ಮಂಗಳೂರಿನ ಕಥಾ ಬಿಂದು ಪ್ರಕಾಶನ , ಯಶಸ್ವಿ ಸಂಗೀತ ಸಾಹಿತ್ಯ ಸಂಸ್ಥೆ(ರಿ), ಮುದೋಳ, ಮತ್ತು ನಿಮಿಷಾಂಬಾ ಪ್ರಕಾಶನ (ಶ್ರೀನಿವಾಸ ಚಿತ್ರಗಾರ) ವತಿಯಿಂದ ಅದ್ದೂರಿಯಾಗಿ ಸಾಹಿತ್ಯ ಗೋಷ್ಠಿ, ಕವಿಗೋಷ್ಠಿ ,ಭರತನಾಟ್ಯ ಸಹಿತ ವಿವಿಧ ಕಲಾ ರಂಜನೆಗಳ ಕಾರ್ಯಕ್ರಮವು ನೇಪಾಳದ ಪೋಕರಾ ಎಂಬಲ್ಲಿನ ಕುಟಿ ಸಭಾಂಗಣದಲ್ಲಿ ನಡೆಯಿತು.
ಖ್ಯಾತ ಸಾಹಿತಿ ಹರಿಶ್ಚಂದ್ರ ಸಾಲಿಯಾನ್ ಇವರಿಂದ ಉದ್ಘಾಟಿಸಲ್ಪಟ್ಟ ಸಮಾರಂಭವು ಚುಟುಕು ಸಾಹಿತ್ಯ ಪರಿಷತ್ತು ಮಂಗಳೂರಿನ ಅಧ್ಯಕ್ಷ ಡಾ ಸುರೇಶ ನೆಗಳಗುಳಿ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಿತು.
ಉದ್ಘಾಟಕರಾಗಿ ಹರಿಶ್ಚಂದ್ರ ಸಾಲಿಯಾನ್ ಮಾತನಾಡುತ್ತಾ" ಕನ್ನಡ ಸಾಹಿತ್ಯದ ವಿಸ್ತಾರವು ಕಾವೇರಿಯಿಂದ ಮಾ ಗೋದಾವರಿ ತನಕವೂ ಅಲ್ಲದೇ ವಿಶ್ವ ವ್ಯಾಪಿಯಾಗುವುದಕ್ಕೆ ಈ ರೀತಿಯ ಕಾರ್ಯಕ್ರಮ ಗಳೇ ಸಾಕ್ಷಿ "ಎಂದರು.
ಡಾ ಸುರೇಶ ನೆಗಳಗುಳಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ "ಕನ್ನಡ ಭಾಷೆಯು ರಾಷ್ಟ್ರ ಸೀಮೆಯನ್ನೂ ದಾಟಿ ನೇಪಾಳದಂತಹ ಪ್ರದೇಶಗಳಲ್ಲಿ ಕಂಪನ್ನು ಬೀರುವ ಮುಖಾಂತರ ಪರದೇಶೀಯರಲ್ಲಿ ಕನ್ನಡ ಪ್ರೇಮ ಹುಟ್ಟಿಸಲು ಸಾಧ್ಯ.ಭಾಷಾ ಕೊಳು ಕೊಡೆ ಗಳಿಗೆ ಇದೊಂದು ಅತ್ಯಮೂಲ್ಯ ಕೊಡುಗೆ.ಪ್ರದೀಪ್ ಕುಮಾರ್ ಇವರ ಪರದೇಶಗಳಲ್ಲಿ ಕನ್ನಡದ ಕಂಪು ಬೀರುವ ಪ್ರವೃತ್ತಿ ಎಲ್ಲರಿಗೂ ಮಾರ್ಗದರ್ಶಿಯಾಗಿದೆ . ಇನ್ನಷ್ಟು ಕವಿಗಳಿಂದ ಇಂತಹ ಸಾಹಿತ್ಯ ಸೇವೆ ಮುಂದುವರಿಯಲಿ "ಎಂದು ಶುಭ ಕೋರಿದರು.
ಅನಂತರ ಜಯಾನಂದ ಪೆರಾಜೆ ಇವರ "ಭಾವ ಬಿಂದು ", ಕೋಮಲ ಕುದುರೆ ಮೋತಿಯವರ "ಮುತ್ತಿನಹನಿ" ಮತ್ತು ಪಾಟೀಲರ "ಅರಿವನರಸುತ" ಕವನ ಸಂಕಲನಗಳನ್ನು ಬೆಂಗಳೂರಿನ ದಂತ ವೈದ್ಯ, ಚಿತ್ರ ಸಾಹಿತಿ ಡಾ ನಾಗೇಂದ್ರ ಇವರು ಅನಾವರಣ ಮಾಡಿದರು.ಅವರು ಮಾತನಾಡುತ್ತಾ "ಕನ್ನಡದ ಒಲವು ಇಂತಹ ಕಾರ್ಯಕ್ರಮಗಳ ಮುಖಾಂತರ ಗೆಲುವು ಸಾಧಿಸುತ್ತದೆ" ಎಂದರು.
ಜಯಾನಂದ ಪೆರಾಜೆಯವರು ವಿದೇಶದ ನೆಲದಲ್ಲಿ ಕನ್ನಡದ ತನ್ನ ಕೃತಿ ಬಿಡುಗಡೆಯಾಗುವುದಕ್ಕೆ ಹರ್ಷ ವ್ಯಕ್ತ ಪಡಿಸಿದರು. ಅನಂತರ ಬೆಂಗಳೂರಿನ ಡಾ ನೀರಜಾ ನಾಗೇಂದ್ರ, ಇವರು ಜಿನ ದರ್ಶನ ಕುರಿತಾದ ಉಪಾನ್ಯಾಸ ಮಾಡುತ್ತಾ" ಅಹಿಂಸಾದಿ ತತ್ವ ಸಿದ್ಧಾಂತಗಳ ರೂವಾರಿಗಳ ನಾಡಿನಲ್ಲಿ ಹಾಕುವ ರತ್ನಾಕರ ವರ್ಣಿಯಂತಹವರ ಉಪದೇಶಗಳ ಮೆಲುಕು ಅತ್ಯಂತ ಮುದ ನೀಡುತ್ತದೆ" ಎಂದರು . ಪಿಂಗಾರ ಪತ್ರಿಕೆಯ ರೇಮಂಡ್ ಡಿ ಕುನ್ಹ ರವರು ಸಾಹಿತ್ಯದ ನೆಪವೊಂದು ನೇಪಾಳದಲ್ಲಿ ಪ್ರವಾಸ ಸಹಿತ ಕನ್ನಡದ ತುಂತುರುಗಳಿಗೆ ಕಾರಣವಾಯಿತು." ಕೇವಲ ಪ್ರವಾಸಗಳಿಗಿಂತ ಈ ತರಹದ ವಿಶೇಷಣಗಳನ್ನೊಳಗೊಂಡ ಪ್ರವಾಸವೂ ಅತ್ಯಂತ ಪ್ರಭಾವ ಶಾಲಿಯಾದ ಸಾಹಿತ್ಯ ದ ಉಣಿಸಿಗೆ ಕಾರಣವಾಗ ಬಲ್ಲುದು "ಎಂದರು .ಅನಂತರ ಲಕ್ಷ್ಮಿ ಕೆ ಮೈಸೂರು, ಪಿಂಗಾರ ಪತ್ರಿಕೆಯ ರೇಮಂಡ್ ಡಿ ಕುನ್ಹಾ , ಹಿರಿಯ ಪತ್ರಕರ್ತ ಕಡಬ ಚು.ಸಾ.ಪ ಗೌರವಾಧ್ಯಕ್ಷ ಜಯಾನಂದ ಪೆರಾಜೆ, ಕಟ್ಟತ್ತಿಲ ಗೋಪಾಲಕೃಷ್ಣ ಭಟ್ , ಅನ್ನಪೂರ್ಣ ಕೊಪ್ಪಳ, ಶ್ರೀನಿವಾಸ ಚಿತ್ರಗಾರ,ಟಿ ನಾಗರಾಜ, ಮಹೇಶ ಮನ್ನಾಪುರ,ವಿಜಯಾ, ಸಹಿತ ಮೂವತ್ತೈದು ಮಂದಿ ಕವನ ವಾಚನ ಮಾಡಿದರು.
ಇದೇ ವೇಳೆ ಹರಿಶ್ವಂದ್ರ ಸಾಲಿಯಾನ್ ಸಹಿತ ಹಲವು ಸಾಹಿತ್ಯ ಸಾಧಕರಿಗೆ ಸನ್ಮಾನ ಸಮಾರಂಭಗಳೂ ಅದ್ದೂರಿಯಾಗಿ ನೆರವೇರಿದುವು.
ತರುವಾಯ ಇಂದಿರಮ್ಮ ಇವರಿಂದ ಸಂಗೀತ ರಸ ಸಂಜೆ ಮತ್ತು ಕುಮಾರಿ ವೀಣಾ ಚಿತ್ರಗಾರ ಇವರಿಂದ ಭರತ ನಾಟ್ಯ ಕಾರ್ಯಕ್ರಮ ಅಲ್ಲದೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನವಾದುವು.
ಕಥಾ ಸಂಗಮದ ಪ್ರದೀಪ್ ಕುಮಾರ ಇವರು ತಮ್ಮ ಯೋಜನೆಗಳ ಅಂತರಾಳವನ್ನು ವಿಶ್ಲೇಷಿಸುತ್ತಾ ಹಲವಾರು ದೇಶಗಳ ಮಣ್ಣಿನಲ್ಲಿ ಕನ್ನಡದ ಸೊಗಡನ್ನು ಹರಡುವ ಕುರಿತಾಗಿ ಪ್ರಸ್ತಾವಿಸುತ್ತಾ ಸ್ವಾಗತಿಸಿದ ಈ ಸಮಾರಂಭವನ್ನು ಖ್ಯಾತ ಟಿ.ವಿ. ನಿರೂಪಕಿ ಪ್ರಿಯಾ ಹರೀಶ್ ನಿರೂಪಣೆ ಗೈದರು.