ದಕ್ಷಿಣ ಕನ್ನಡ ಜಿಲ್ಲೆಯ ಬೌಗೋಳಿಕ ಸ್ಥಿತಿಯು ಕೃಷಿ ಚಟುವಟಿಕೆಗೆ ಪೂರಕವಾಗಿದೆ. ಧಾರಾಳವಾಗಿ ಲಭಿಸುವ ಮಳೆ ನೀರು, ಬಿಸಿಲು ಮತ್ತು ಮಣ್ಣಿನ ಗುಣದಿಂದಾಗಿ ಕೃಷಿ ಪರಿಸ್ಥಿತಿ ಪಸರಿಸುವ ಹಿಂದಿನ ಕಾಲದಿಂದಲೂ ಈ ಪರಿಸರದಲ್ಲಿ ಕೃಷಿ ಚಟುವಟಿಕೆಗಳು ಮಹತ್ವ ಪಡೆಯುತ್ತಾ ಬಂದಿವೆ ಎನ್ನಬಹುದು. ಭತ್ತ, ತೆಂಗು, ಅಡಿಕೆ, ಕಾಳುಮೆಣಸು ಮತ್ತು ವಿಳ್ಯದೆಲೆಗೆ ಈ ನಾಡು ಪ್ರಸಿದ್ಧವಾಗಿತ್ತು ಹಾಗೂ ಮಿಶ್ರ ಬೆಳೆಗಳ ಮಹತ್ವವನ್ನು ಅರಿತ ರೈತರು ಇಲ್ಲಿ ಉದ್ದು, ಹೆಸರು, ಅಲಸಂಡೆ ಬೀಜ ಮುಂತಾದ ಧಾನ್ಯಗಳನ್ನು ಉಪಬೆಳೆಯಾಗಿ ಬೆಳೆಯುತ್ತಿದ್ದರು ಎಂಬುದರ ಬಗ್ಗೆ ಐತಿಹಾಸಿಕ ದಾಖಲೆಗಳಿವೆ.
ಜಿಲ್ಲೆಯ ರೈತರು ಋತುಮಾನಕ್ಕನುಗುಣವಾಗಿ ಮಳೆ ನೀರು ಆಧಾರಿತ ಕೃಷಿ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಮಳೆಗಾಲದ ಆರಂಭದಲ್ಲಿ ಬೀಜ ಬಿತ್ತನೆ ನಡೆಯುತ್ತದೆ. ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ತರಕಾರಿ ಫಸಲು ಬರಲು ಆರಂಭವಾಗುತ್ತದೆ. ಸಪ್ಟಂಬರ್ ತಿಂಗಳ ಅಂತ್ಯಕ್ಕೆ ತರಕಾರಿ ಉತ್ಪನ್ನ ಮುಕ್ತಾಯವಾಗುತ್ತದೆ. ಆಕ್ಟೋಬರ್ ತಿಂಗಳಲ್ಲಿ ಭತ್ತದ ಕೊಯಿಲು ಸಿದ್ಧವಾಗುತ್ತದೆ. ನೀರಿನ ಅವಕಾಶವಿದ್ದ ರೈತರು ಭತ್ತದ ಗದ್ದೆಗಳಲ್ಲಿ ತರಕಾರಿ ಬೆಳೆಯಲು ಆರಂಭಿಸುತ್ತಾರೆ. ಅದರ ಫಸಲು ಡಿಸೆಂಬರ್ ಕೊನೆಯ ವಾರದಲ್ಲಿ ಆರಂಭವಾಗುತ್ತದೆ. ಹೀಗೆ ಸುಮಾರು ಎಪ್ರಿಲ್ ತಿಂಗಳ ಅಂತ್ಯದವರೆಗೆ ಸ್ಥಳೀಯ ತರಕಾರಿಗಳು ಮಾರುಕಟ್ಟೆಗೆ ಲಭಿಸುತ್ತವೆ.
ನಮ್ಮ ಜಿಲ್ಲೆಯಲ್ಲಿ ಪ್ರಕೃತಿದತ್ತ ವೈವಿಧ್ಯತೆಯ ಬೆಳೆಗಳಾದ ಬಸಳೆ, ಕೆಂಪು - ಹಸಿರು ಹರಿವೆ, ಬೆಂಡೆ, ಮುಳ್ಳು ಸೌತೆ, ಗುಳ್ಳ, ಹಾಗಲಕಾಯಿ, ಪಡವಳಕಾಯಿ, ಮೆಣಸು ಮುಂತಾದವನ್ನು ರೈತರು ಬೆಳೆಯುತ್ತಾರೆ. ಇಲ್ಲಿ ಗಮನಿಸಬೇಕಾದ ವಿಷಯ ಒಂದಿದೆ. ಮಂಗಳೂರಿನಿಂದ ಮುಂಬಾಯಿಗೆ ಜಲಮಾರ್ಗವಿದ್ದ ಕಾಲದಲ್ಲಿ ಜಿಲ್ಲೆಯ ಹಲವು ರೈತರು ಶುಂಠಿಯನ್ನು ಬೆಳೆದು, ಹಡಗಿನಲ್ಲಿ ಮುಂಬಾಯಿ ಮಾರುಕಟ್ಟೆಗೆ ಕಳುಹಿಸಿಕೊಡುತ್ತಿದ್ದರು. ಅಕ್ಕಿಯ ಅಭಾವ ಇದ್ದ ಕಾಲದಲ್ಲಿ ಅಧಿಕ ರೈತರು ಕೆಂಪು ಗೆಣಸು ಬೆಳೆದು ಮಾರುಕಟ್ಟೆಗೆ ತರುತ್ತಿದ್ದರು. ಈಗಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಎರಡೂ ಬೆಳೆಗಳನ್ನು ರೈತರು ಬೆಳೆಯುವುದು ತೀರ ಅಪರೂಪ.
ಹಿಂದೆ ರಾಸಾಯನಿಕ ಗೊಬ್ಬರ ಹಾಗೂ ವಿಷಪೂರಿತ ಕೀಟನಾಶಕ ಬಳಕೆ ಇರಲಿಲ್ಲ. ಪಶು ಸಂಗೋಪನೆ, ಹಂದಿ ಸಾಕಣೆ ಮುಂತಾದ ಕೃಷಿ ಚಟುವಟಿಕೆಗಳಿಂದ ಪಡೆದ ಹಟ್ಟಿ ಗೊಬ್ಬರ ಮತ್ತು ಧಾರಾಳವಾಗಿ ಲಭ್ಯವಿದ್ದ ಹಸಿರೆಲೆಗಳಿಂದ ತಮ್ಮ ಭೂಮಿಯ ಫಲವತ್ತತೆಯನ್ನು ಉಳಿಸಿಕೊಂಡಿದ್ದರು. ನಗರ ಮಾರುಕಟ್ಟೆಗಳಿಂದ ತರಕಾರಿ ತ್ಯಾಜ್ಯವನ್ನು ಕೊಂಡೊಯ್ದು ದನ-ಹಂದಿಗಳಿಗೆ ಆಹಾರ, ಮೇವು ಒದಗಿಸುತ್ತಿದ್ದರು. ಚಪ್ಪರದ ಬೆಳೆಗಳಿಗಾಗಿ ಮರದ ಕಂಬಗಳನ್ನು ಬಳಸುವ ಬದಲು ಕಲ್ಲಿನ - ಕಬ್ಬಿಣದ ಕಂಬಗಳನ್ನು ಬಳಸುತ್ತಿದ್ದರು. ಸಾಕಷ್ಟು ಎತ್ತರವಿದ್ದ ಈ ಚಪ್ಪರಗಳು, ಹಟ್ಟಿಗೊಬ್ಬರ ಹಾಕಲು ಮತ್ತು ಕೃಷಿ ಬೆಳೆಗಳನ್ನು ಕೊಯ್ಯಲು ಅನುಕೂಲಕರವಾಗಿದ್ದವು. ತಮ್ಮ ಕೃಷಿ ಭೂಮಿಯನ್ನು ಭಾಗಗಳಾಗಿ ವಿಂಗಡಿಸಿ ಕ್ರಮವತ್ತಾಗಿ ಬೀಜ ಬಿತ್ತನೆ ಮಾಡುವುದರಿಂದ ನಿರಂತರವಾಗಿ ಫಸಲು ಪಡೆಯುತ್ತಿದ್ದರು ಹಾಗೂ ಬೇಡಿಕೆ ಕಡಿಮೆ ಇದ್ದ ಸಮಯದಲ್ಲಿ ಕಡಿಮೆ ಪ್ರಮಾಣದ ಫಸಲು ಬೆಳೆಸಿ ಮೌಲ್ಯಾಧರಿತ ಬೆಳೆ ನಾಶವಾಗದಂತೆ ಹಾಗೂ ತಮ್ಮ ಆರ್ಥಿಕತೆ ರಕ್ಷಣೆಯಾಗುವಂತೆ ನೋಡಿಕೊಳ್ಳುತ್ತಿದ್ದರು.
ಬ್ರಿಟಿಷರ ಆಡಳಿತದ ಕಾಲದಲ್ಲಿ ಘಟ್ಟದ ಮೇಲಿನ ಊರುಗಳಲ್ಲಿ ಕಾಫಿ ಬೆಳೆಯಲು ಆರಂಭಿಸಿದರು. ಕಾಫಿ, ಏಲಕ್ಕಿ, ಕಾಳುಮೆಣಸು ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಎತ್ತಿನ ಗಾಡಿಗಳಲ್ಲಿ ಹೇರಿಕೊಂಡು ಮಂಗಳೂರಿನ ಬಂದರು ಪ್ರದೇಶಕ್ಕೆ ಸಾಗಿಸುತ್ತಿದ್ದರು. ಈ ಗಾಡಿಗಳು ಕದ್ರಿ, ಮಲ್ಲಿಕಟ್ಟೆ, ಬಂಟ್ಸ್ ಹಾಸ್ಟೆಲ್ ಮಾರ್ಗವಾಗಿ ಸಾಗುತ್ತಿದ್ದವು. ಬಂಟ್ಸ್ ಹಾಸ್ಟೆಲ್ ಸಮೀಪದ ಶೇಡಿಗುಡ್ಡೆ ಮಾರ್ಕೆಟ್ ನಿತ್ಯವೂ ಮಧ್ಯಾಹ್ನ ರೈತರು ಮತ್ತು ಗ್ರಾಹಕರಿಂದ ತುಂಬುತ್ತಿತ್ತು. ಗಾಡಿಗಳಿಂದ ಸರಕ್ಕನ್ನು ಇಳಿಸಿ ಮರುಪ್ರಯಾಣ ಆರಂಭಿಸುವಾಗ ಶೇಡಿಗುಡ್ಡ ಮಾರ್ಕೆಟ್‍ನಲ್ಲಿ ದೊರೆಯುತ್ತಿದ್ದ ಕೃಷಿ ಉತ್ಪನ್ನಗಳನ್ನು ಖರೀದಿಸಿ ಒಯ್ಯುತ್ತಿದ್ದರು. ಬಜ್ಪೆ, ನೀರುಮಾರ್ಗ, ಕುಲಶೇಕರ, ಗುರುಪುರ, ಮೂಡುಶೆಡ್ಡೆ, ಉರ್ವಾ ಪರಿಸರದ ಕೃಷಿಕರು ತಲೆಹೊರೆಯಲ್ಲಿ, ಎತ್ತಿನ ಗಾಡಿಯಲ್ಲಿ ಕೃಷಿ ಉತ್ಪನ್ನಗಳನ್ನು ತರುತ್ತಿದ್ದ ರೈತರಿಗೆ ತಮ್ಮ ಬೆಳೆಯನ್ನು ಮಾರಲು ಅನುಕೂಲ ಪರಿಸ್ಥಿತಿ ಇದ್ದು, ಗ್ರಾಹಕರಿಗೆ ಮತ್ತು ಕೃಷಿಕರಿಗೆ ನೇರವಾಗಿ ವ್ಯವಹಾರ ನಡೆಸಲು ಅವಕಾಶವಿತ್ತು. ಸ್ವಾತಂತ್ರ್ಯ ಲಭಿಸಿದ ಸುಮಾರು ಮೂವತ್ತು ವರ್ಷಗಳಷ್ಟು ಕಾಲದವರೆಗೂ ಈ ಮಾರುಕಟ್ಟೆ ಜೀವಂತವಾಗಿತ್ತು.
ನಗರವು ಬೆಳೆಯುತ್ತಿದ್ದಂತೆ ನಗರದಲ್ಲಿ ವ್ಯಾಪಾರ ವಹಿವಾಟು ವೃದ್ಧಿಸಿತು. ರೈತರಿಂದ ಬೆಳೆ ಖರೀದಿ ಮಾಡಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶವನ್ನು ಮಧ್ಯವರ್ತಿ ವ್ಯಾಪರಸ್ಥರು ತಮ್ಮದಾಗಿಸಿಕೊಂಡರು. ಕಾಲಕ್ರಮೇಣ ಕೃಷಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಿ ಅಧಿಕ ಬೆಲೆಗೆ ಮಾರಾಟ ಮಾಡುವ ಪ್ರಕ್ರಿಯೆಗೂ ಚಾಲನೆ ದೊರೆಯಿತು. ಮಾರುಕಟ್ಟೆಯಲ್ಲಿ ರೈತರಿಂದ ಸುಂಕ ಪಡೆಯುವ ಅಧಿಕಾರ ಹೊಂದಿದವರು, ನಿಗದಿತ ಮೊತ್ತಕ್ಕಿಂತ ಅಧಿಕವಾಗಿ ಒತ್ತಾಯಪೂರ್ವಕವಾಗಿ ಸಂಗ್ರಹಿಸಲು ತೊಡಗಿದರು. ಇದೇ ಕಾಲದಲ್ಲಿ, ನಗರದ ಹಲವು ಗ್ರಾಮೀಣ ಭಾಗಗಳಿಂದ ಸಿಟಿ ಬಸ್ಸುಗಳು ಆರಂಭವಾದವು. ಈ ಅವಕಾಶವನ್ನು ತರಕಾರಿ ಬೆಳೆಯುತ್ತಿದ್ದ ರೈತರು ಬಳಸಿಕೊಂಡರು ಮತ್ತು ನಗರದ ಸೆಂಟ್ರಲ್ ಮಾರ್ಕೆಟಿನಲ್ಲಿ ತರಕಾರಿ ಇನ್ನಿತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭಿಸಿದರು.
ಮಂಗಳೂರಿನ ಸೆಂಟ್ರಲ್ ಮಾರ್ಕೆಟಿನ ಇತಿಹಾಸವು ಕುತೂಹಲಕಾರಿಯಾಗಿದೆ. ಇಲ್ಲಿ 1876ರಲ್ಲಿ ವೆಬ್‍ಸ್ಟಾರ್ ಮಾರ್ಕೆಟ್ ಆರಂಭವಾಗಿತ್ತು. ನಗರದ 5 ರಸ್ತೆಗಳು ಈ ಸ್ಥಳಕ್ಕೆ ಬರಲು ಸೂಕ್ತವಾಗಿದ್ದು, ಸ್ಥಳೀಯ ಬಸ್ ಸ್ಟ್ಯಾಂಡ್, ರೈಲು ನಿಲ್ದಾಣ, ನಗರದ ಸಗಟು ವ್ಯಾಪಾರ ಕೇಂದ್ರ, ಬಂದರು ಪ್ರದೇಶ ಹತ್ತಿರವಿದ್ದ ಕಾರಣ ಈ ಪ್ರದೇಶವನ್ನು ಮಾರುಕಟ್ಟೆಗಾಗಿ ಆಯ್ಕೆ ಮಾಡಲಾಗಿತ್ತು. ನಂತರ ಸುಮಾರು 1965ರಲ್ಲಿ ಈಗ ಇರುವ ಸೆಂಟ್ರಲ್ ಮಾರ್ಕೆಟ್ ಕಟ್ಟಡ ಉದ್ಫಾಟನೆಯಾಯಿತು. ಕಟ್ಟಡದ ಹೊರಭಾಗದಲ್ಲಿ 50 ರಷ್ಟು ಅಂಗಡಿಗಳು, ಮಹಡಿ ಮೇಲೆ ಆಷ್ಟೇ ಅಂಗಡಿ/ಕಚೇರಿಗಳಿಗೆ ಸ್ಥಳಾವಕಾಶವಿತ್ತು. ಮಾರುಕಟ್ಟೆಯ ಒಳಭಾಗದಲ್ಲಿ ಸುಮಾರು 50ರಷ್ಟು ತರಕಾರಿ, ಹಣ್ಣು ಹಂಪಲುಗಳ ಅಂಗಡಿಗಳು ಇದ್ದು, ಸುಮಾರು ಎಕರೆಯಷ್ಟು ಪ್ರದೇಶವನ್ನು ಜಿಲ್ಲೆಯ ರೈತರಿಗಾಗಿ ಮೀಸಲು ಇರಿಸಲಾಗಿತ್ತು. ಆ ಕಾಲದಲ್ಲಿ ಜಿಲ್ಲೆಯ ಅಧಿಕ ಕೃಷಿ ಭೂಮಿ ಭೂ ಮಾಲೀಕರ ಅಧೀನದಲ್ಲಿದ್ದು, ಗೇಣಿದಾರರಾಗಿದ್ದ ಸಣ್ಣ ಹಾಗೂ ಕಿರು ರೈತರು ಬಹುಬೇಡಿಕೆಯ ಬತ್ತವನ್ನು ಬೆಳೆಸಿ ನಿರ್ಧಿಷ್ಟ ಪ್ರಮಾಣದ ಗೇಣಿ ನೀಡಬೇಕಾದುದರಿಂದ, ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿ ಇನ್ನಿತರ ಕೃಷಿ ಉತ್ಪನ್ನಗಳು ಬೆಳೆದು ಮಾರುಕಟ್ಟೆಗೆ ತರಲು ಸಾಧ್ಯವಾಗುತ್ತಿರಲಿಲ್ಲ.
ಜಿಲ್ಲೆಯಲ್ಲಿ 1974ನೇ ಭೂಮಸೂದೆ ಕಾಯಿದೆ ಜಾರಿಯಾದ ನಂತರ, ಅನೇಕ ರೈತರು ಭೂಮಿಯ ಮಾಲಕತ್ವವನ್ನು ಪಡೆದರು. ಹೊಸ ಸ್ಫೂರ್ತಿಯಿಂದ ಕೃಷಿ ಬೆಳೆಯನ್ನು ಬೆಳೆಯಲು ಆರಂಭಿಸಿದರು. ನಗರದಲ್ಲಿ ಜನಸಂಖ್ಯೆ ಬೆಳೆದು, ತರಕಾರಿ ಉತ್ಪನ್ನಗಳಿಗೂ ಬೇಡಿಕೆ ಅಧಿಕವಾಗತೊಡಗಿತು. ಕೇಂದ್ರ ಸರಕಾರದ ಸಾಲಮೇಳ ಯೋಜನೆಯಿಂದಾಗಿ, ಹಲವಾರು ಕೃಷಿಕರಿಗೆ ಸಾಲ ಪಡೆದು, ತರಕಾರಿ ಬೆಳೆ ವೃದ್ಧಿಸಿ ವ್ಯಾಪಾರ ನಡೆಸಲು ಅವಕಾಶ ದೊರೆಯಿತು.
ಹತ್ತಿರದ ಕಾಸರಗೋಡು ಜಿಲ್ಲೆಯ ಹಲವಾರು ಜನರು ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಪಡೆದರು. ಅಲ್ಲಿ ಹಣದ ಹರಿವು ಆರಂಭವಾದಂತೆ ಸ್ವಉದ್ಯೋಗ ಅವಕಾಶಗಳು ತೆರೆದುಕೊಂಡವು. ಹೆಚ್ಚಾದ ಆಹಾರ ಉತ್ಪನ್ನಗಳ ಬೇಡಿಕೆಯ ಪೂರೈಕೆಗಾಗಿ, ಅಲ್ಲಿನ ವ್ಯಾಪಾರಸ್ಥರು ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿ ರೈಲಿನಲ್ಲಿ ರವಾನಿಸಲು ಪ್ರಾರಂಭಿಸಿದರು. ಸೆಂಟ್ರಲ್ ಮಾರುಕಟ್ಟೆಯಲ್ಲಿನ ಕೃಷಿ ಉತ್ಪನ್ನಗಳ ವ್ಯಾಪರವು ಇದರಿಂದ ಮತ್ತಷ್ಟು ವಿಸ್ತರಿಸಿತು. ರೈತರು ಹಾಗೂ ಸಗಟು ವ್ಯಾಪಾರಿಗಳ ನಡುವಿನ ಸಂಬಂಧವು ಕುದುರಿತು.
ಇಲ್ಲಿ ಒಂದು ವಿಷಯವನ್ನು ತಿಳಿಯುವುದು ಮುಖ್ಯ - ಅಂದು ಕೇರಳ ರಾಜ್ಯದಲ್ಲಿ ತರಕಾರಿಗಳನ್ನು ಕಿಲೋ ಗ್ರಾಮ್ ಲೆಕ್ಕದಲ್ಲಿ ಮಾರಾಟ ಮಾಡಬೇಕಿತ್ತು. ಆದರೆ ಮಂಗಳೂರಿನಲ್ಲಿ ತರಕಾರಿ ಉತ್ಪನ್ನಗಳು ಎಣಿಕೆ ರೀತಿಯಲ್ಲಿ ಮಾರಾಟವಾಗುತ್ತಿದ್ದವು. ಇಂತಹ ಲೆಕ್ಕ ವ್ಯತ್ಯಾಸ ಹಾಗೂ ಪರಸ್ಪರ ಸಂವಹನದ ಗೊಂದಲ (ಉದಾ: ಸ್ಥಳೀಯ ರೈತರ ಮತ್ತು ಹೊರಜಿಲ್ಲೆಯವರ ಭಾಷೆಗಳ ಭಿನ್ನತೆ), ವ್ಯಾಪಾರಸ್ಥರಿಗೆ ತರಕಾರಿ ಮಾರಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆಯಲು ಕಾರಣವಾಯಿತು. ಆರಂಭದ ವರ್ಷಗಳಲ್ಲಿ ರೈತರು ಮತ್ತು ಹೊರರಾಜ್ಯದ ಸಗಟು ವ್ಯಾಪಾರಸ್ಥರ ಕೊಂಡಿಯಾಗಿದ್ದ ಸ್ಥಳೀಯ ಮಧ್ಯವರ್ತಿ ವ್ಯಾಪಾರಸ್ಥರು, ನಂತರದ ವರ್ಷಗಳಲ್ಲಿ ತಮ್ಮ ಹಿತಾಸಕ್ತಿ ರಕ್ಷಣೆಯತ್ತ ಅಧಿಕ ಗಮನ ಹರಿಸಿದರು ಹಾಗೂ ಸಗಟು ವ್ಯಾಪಾರಕ್ಕೂ ತೊಡಗಿದರು. ಕೃಷಿ ಉತ್ಪನ್ನಗಳ ಲಾಭದ ಅಧಿಕ ಪಾಲು ಮಧ್ಯವರ್ತಿಗಳ ಕೈಗೆ ಸೇರಿ, ಸ್ಥಳೀಯ ಸಗಟು ವ್ಯಾಪಾರಸ್ಥರು ಬಲಿಷ್ಠರಾಗುತ್ತಿದ್ದಂತೆ ರೈತರು ಬಲಹೀನರಾದರು.
ತಮ್ಮ ಹಿತಾಸಕ್ತಿ ಬೆಳೆಸಿಕೊಂಡಿದ್ದ ವ್ಯಾಪಾರಸ್ಥರ ಗುಂಪು, ಅಂದಿನ ಸ್ಥಳೀಯ ಆಡಳಿತದಿಂದ ಮಾರುಕಟ್ಟೆ ಸುಂಕವನ್ನು ಸಂಗ್ರಹಿಸುವ ಕಾಂಟ್ರ್ಯಾಕ್ಟ್ ಪಡೆದು, ರೈತರಿಂದ ಇನ್ನಷ್ಟು ಅಧಿಕ ಮೊತ್ತವನ್ನು, ಮೂರು ಬಾರಿ ಸುಂಕವನ್ನು ಸಂಗ್ರಹಿಸಲು ತೊಡಗಿದರು. ತಾವೇ ನಿಗದಿಪಡಿಸಿದ ಬೆಲೆಗೆ ಕೃಷಿ ಉತ್ಪನ್ನಗಳನ್ನು ರೈತರು ತಮಗೆ ನೀಡುವಂತೆ ರೈತರ ಮೇಲೆ ಒತ್ತಡ ಹೇರಲಾಯಿತು. ರೈತರು ಬೆಳಗ್ಗಿನ ಜಾವ ತಮ್ಮ ವ್ಯಾಪಾರ ಮುಗಿಸಿ ಹೋಗುತ್ತಿರುವ ಕಾರಣ, ದಿನವಿಡೀ ಅವರು ಬಳಸದ ಅವರ ವ್ಯಾಪಾರಕ್ಕಾಗಿ ನಿಗದಿಪಡಿಸಲಾದ ಸ್ಥಳದ ಅಧಿಕ ಭಾಗವನ್ನು ಮಧ್ಯವರ್ತಿಗಳಿಗೆ ದಿನ ಬಾಡಿಗೆ ಅಧಾರದಲ್ಲಿ ನೀಡಲು ಪ್ರಾರಂಭಿಸಿದರು. ಈ ಸ್ಥಳದ ಮೂಲೆಗೆ ತಳ್ಳಲ್ಪಟ್ಟ ರೈತ ಮಹಿಳೆಯರನ್ನು ತೀರಾ ಅವಮಾನಕಾರ ರೀತಿಯಲ್ಲಿ ನಡೆಸಲಾಗುತ್ತಿತು.್ತ ಈ ಹೀನಾಯ ಪರಿಸ್ಥಿತಿ ಸುಮಾರು ಎರಡು ವರ್ಷಗಳ ಕಾಲ ಮುಂದುವರಿಯಿತು. ಬಹಳಷ್ಟು ಶ್ರಮವಹಿಸಿ ಬೆಳ್ಳಂಬೆಳಗ್ಗೆ, ತಾವು ಕಷ್ಟಪಟ್ಟು ಬೆಳೆಸಿ ತಲೆಹೊರೆಯಲ್ಲಿ ತಂದು ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಹಾಗೂ ಇದರಿಂದ ದೊರಕುವ ಸ್ವಲ್ಪ ಪ್ರಮಾಣದ ಲಾಭವನ್ನು ರಕ್ಷಿಸಿಕೊಳ್ಳಲು ರೈತರು/ರೈತ ಮಹಿಳೆಯರು ಅನೇಕ ಕಷ್ಟಗಳನ್ನು ಎದುರಿಸಿ ಮುನ್ನಡೆಯುವ ಅನಿವಾರ್ಯತೆಗೆ ಒಳಗಾದರು.
ಈ ಸಮಯದಲ್ಲಿ ಕರ್ನಾಟಕ ರಾಜ್ಯದ ಪ್ರಥಮ ಮಹಿಳಾ ಮೇಯರ್ ಆಗಿ ಆಯ್ಕೆ ಆದ ಶ್ರೀಮತಿ ಯೂನಿಸ್ ಬ್ರಿಟ್ಟೊ ಅಧಿಕಾರವಹಿಸಿಕೊಂಡರು. ರೈತರ, ರೈತ ಮಹಿಳೆಯರ ಗೋಳನ್ನು ತಿಳಿದು, ಸಕರಾತ್ಮಕವಾಗಿ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ಅವರಿಂದ ದೊರೆಯಿತು. ಅವರ ಮೇಯರ್ ಅಧಿಕಾರದ ಅವಧಿ ಮುಗಿದ ಕಾರಣ, ರೈತರಲ್ಲಿ ಚಿಗುರಿದ ಅನುಕೂಲ ವ್ಯಾಪಾರ ವ್ಯವಸ್ಥೆಯ ಆಸೆ ಈಡೇರಿರಲಿಲ್ಲ. ರೈತರ ಸಮಸ್ಯೆ ಮುಂದವರಿಯುತ್ತಲೆ ಇತ್ತು. ಈ ಸಮಯದಲ್ಲಿ ಮತ್ತು ನಂತರದ ಸುಮಾರು ಮೂವತ್ತು ವರ್ಷಗಳಷ್ಟು ಕಾಲ ರೈತರಿಗೆ, ರೈತ ಮಹಿಳೆಯರಿಗೆ ಅಭಯ ಹಸ್ತವನ್ನು ನೀಡಿದವರು. ಡಾ. ರೀಟಾ ನೊರೊನ್ಹಾ ಮತ್ತು ರೈತ ಸ್ವಯಂಸೇವಕರು, ಹಾಗೂ ಪ್ರಾರಂಭದಲ್ಲಿ ಅವರಿಗೆ ಈ ಕೆಲಸದಲ್ಲಿ ಪೆÇ್ರೀತ್ಸಾಹ ನೀಡಿದ ವಾಮಂಜೂರಿನಲ್ಲಿ ಅಂದು ಕಾರ್ಯೋನ್ಮುಖವಾಗಿದ್ದ ಸಂತ ಜೋಸೆಫರ ಕೃಷಿಶಾಲೆಯ ನಿರ್ದೇಶಕರಾದ ಧರ್ಮಗುರು ವಂದನೀಯ ಎಡ್ವಿನ್ ಪಿಂಟೊರವರು, ಹಾಗೂ ಅವರ ನಿರ್ದೇಶನದಲ್ಲಿ ಕಿರಣಕೇಂದ್ರದಲ್ಲಿ ಪ್ರಾರಂಭಿಸಲಾದ ಅನೌಪಚಾರಿಕ ಸಮೂದಾಯ ಅಭಿವೃದ್ಧಿ ಶಿಕ್ಷಣ ಕಾರ್ಯಕ್ರಮದ ಸಿಬ್ಬಂದಿಗಳು ಸಹಕಾರ ನೀಡಿದ್ದರು.
ಡಾ. ರೀಟಾ ನೊರೊನ್ಹಾರವರು ನಗರದ ರೋಶನಿ ನಿಲಯದಲ್ಲಿ ಪ್ರೋಪೆಸರ್ ಆಗಿದ್ದವರು, ಎಮ್.ಎಸ್.ಡಬ್ಲ್ಯು ವಿದ್ಯಾರ್ಥಿಗಳಿಗೆ ಸಮುದಾಯ ಅಭಿವೃದ್ಧಿ ವಿಷಯವನ್ನು ಬೋಧಿಸುತ್ತಿದ್ದರು. ಹಲವು ಪ್ರಗತಿಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ತಾರತಮ್ಯತೆಗಳಿಗೆ ಒಳಗಾಗಿ ಅಂಚಿಗೆ ತಳ್ಳಲ್ಪಟ್ಟ ಜನ ಸಮೂದಾಯಗಳ ಸಂಘಟನಾ ಕಾರ್ಯದಲ್ಲಿಯೂ ನಿರತರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಸಮುದಾಯ ಅಭಿವೃದ್ಧಿ ವಿಷಯವನ್ನು ಕಲಿಯುತ್ತಿದ್ದ ವಿದ್ಯಾರ್ಥಿ ಪಂಗಡಗಳು ಕಿರಣಕೇಂದ್ರದ ಸಿಬ್ಬಂಧಿಗಳೊಂದಿಗೆ ಅನೇಕ ಗ್ರಾಮಗಳ ರೈತರ ಮನೆಗಳಿಗೆ ಕಾಲು ದಾರಿಯಲ್ಲಿ ನಡೆದು, ಅವರ ಸ್ಥಿತಿಗತಿಗಳನ್ನು ಅಭ್ಯಾಸಿಸಿ, ಅವರಿಗೆ ಮಾನಸಿಕ ಮತ್ತು ನೈತಿಕ ಬೆಂಬಲವನ್ನೂ ನೀಡಲು ಕಾರಣಕರ್ತರಾದರು. ರೈತ ಮಹಿಳೆಯರು ಮಾರುಕಟ್ಟೆ ವ್ಯವಸ್ಥೆಯಲ್ಲಿ ಶೋಷಣೆಯಿಂದ ಮುಕ್ತರಾಗಲು ಮತ್ತು ತಮ್ಮ ಆಸ್ತಿತ್ವವನ್ನು ಉಳಿಸಿಕೊಳ್ಳಲು ಸಹಕಾರಿ ಸಂಘವನ್ನು ಸ್ಥಾಪಿಸಿದರು. ಇದರಿಂದಾಗಿ ಸುಮಾರು 427 ಮಹಿಳಾ ಸದಸ್ಯರಿದ್ದ ಮಹಿಳಾ ತರಕಾರಿ ಬೆಳೆಗಾರ/ಮಾರಾಟಗಾರರ ಸಹಕಾರಿ ಸಂಘವನ್ನು ಆರಂಭಿಸುವುದು ಸಾಧ್ಯವಾಯಿತು. ಜಿಲ್ಲೆಯ ಅಂದಿನ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈಯವರು ಈ ಸಂಘಟನೆಯ ಉದ್ಘಾಟನೆಯನ್ನು ನಡೆಸಿದ್ದರು.
ರೈತರಿಗಾಗಿ ಹಾಗೂ ಪ್ರತ್ಯೇಕ ರೈತ ಮಹಿಳೆಯರಿಗೆ ತಮ್ಮ ವೃತ್ತಿ, ಸಂವಿಧಾನಬದ್ಧ ಶೋಷಣೆರಹಿತ ಜೀವಿಸುವ ಹಕ್ಕು, ಪ್ರಮುಖವಾಗಿ ತಮ್ಮ ವ್ಯಕ್ತಿ ಗೌರವವನ್ನು ರಕ್ಷಿಸಲು ಪೂರಕವಾಗುವ ಬೇಡಿಕೆಗಳನ್ನು ಮುಂದಿಟ್ಟು ಈ ಸಂಘಟನೆಯು ಕಾರ್ಯ ಪ್ರವೃತ್ತವಾಯಿತು. ರೈತ ಮಹಿಳೆಯರ ಮೇಲಾಗುವ ದಬ್ಬಾಳಿಕೆ ನಿಲ್ಲಿಸಲು ಹಾಗೂ ಅವರು ಸೂಕ್ತ ಮಾರುಕಟ್ಟೆ ಪಡೆಯುವಂತಾಗಲು ಹಲವಾರು ಸಂಘಟಿತ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಲವಾರು ಮಾಧ್ಯಮಗಳು ಕೈಜೋಡಿಸಿವೆ. ಸ್ಥಳೀಯ ಕೋಪೆರ್Çರೇಟರ್, ಮೇಯರ್, ಆಯುಕ್ತರು, ಶಾಸಕರು, ಲೋಕಸಭಾ ಸದಸ್ಯರು, ರಾಜ್ಯ ಸರಕಾರದ ಮಂತ್ರಿಗಳು, ಕೇಂದ್ರ ಸರಕಾರದ ಮಂತ್ರಿಗಳೊಂದಿಗೆ ಪತ್ರ ವ್ಯವಹಾರಗಳು ನಡೆದಿವೆ. ಸ್ಥಳೀಯ ಪತ್ರಿಕೆಗಳು ಹಲವು ಬಾರಿ ರೈತ/ರೈತ ಮಹಿಳೆಯರ ಸ್ಥಿತಿಗತಿ ಹಾಗೂ ಹೋರಾಟದ ಬಗ್ಗೆ ಪ್ರಕಟಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿವೆ.
ಹಲವು ಬಾರಿ ಸೆಂಟ್ರಲ್ ಮಾರುಕಟ್ಟೆಯ ಬಳಿ ತಮ್ಮ ಮೇಲಾಗುವ ದಬ್ಬಾಳಿಕೆಯನ್ನು ನಿಲ್ಲಿಸಲು ನಡೆಸಿದ ಪ್ರತಿಭಟನೆಗಳೊಂದಿಗೆ, ಮಹಾನಗರಪಾಲಿಕೆ ಕಚೇರಿ ಹಾಗೂ ಜಿಲ್ಲಾಧಿಕಾರಿಯವರ ಕಚೇರಿಗೂ ಪ್ರತಿಭಟನಾ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡ ಒಂದು ಬ್ರಹತ್ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಅಂದಿನ ಪ್ರಧಾನ ಕಾರ್ಯದರ್ಶಿಗಳಾದ ಕೆ. ಟಿ. ಗಂಗಾಧರ್ ಮತ್ತು ರೈತ ಸಂಘಗಳ ಸ್ಥಳೀಯ ಘಟಕಗಳ ಮುಖಂಡರು, ಪ್ರಮುಖವಾಗಿ ಧನಕೀರ್ತಿ ಬಲಿಪ, ಮೂಡುಬಿದಿರೆ, ಸನ್ನಿ ಡಿಸೋಜ, ನೀರುಮಾರ್ಗ, ಶ್ರೀ ವರ್ಮ, ಕರ್ನಾಟಕ ಪ್ರಾಂತೀಯ ರೈತ ಸಂಘದ ಯಾದವ್ ಶೆಟ್ಟಿ ಮತ್ತು ಮಹಿಳಾ ರೈತ ಹೋರಾಟಗಾರ್ತಿ ಸುನಂದಾ ಜಯರಾಮ್ ಮುಂತಾದವರು ಕೈ ಜೋಡಿಸಿದ್ದಾರೆ. ಸೂಕ್ತ ಮಾರುಕಟ್ಟೆ ಒದಗಿಸುವ ತಮ್ಮ ಹಕ್ಕೊತ್ತಾಯದ ಬಗ್ಗೆ ಹಿಂದಿನ ರಾಜ್ಯದ ಮುಖ್ಯ ಮಂತ್ರಿಗಳಿಗೆ ಅಂಚೆ ಕಾರ್ಡನ್ನು ಕಳುಹಿಸುವ ಚಳುವಳಿಯನ್ನು ರೈತರು ನಡೆಸಿದ್ದಾರೆ. ಮಂಗಳೂರಿಗೆ ಬಂದ ಇಬ್ಬರು ಮುಖ್ಯ ಮಂತ್ರಿಗಳಿಗೆ ಹಾಗೂ ಕೇಂದ್ರ ಸರಕಾರದ ಮಂತ್ರಿಯವರನ್ನು ಸ್ವತ: ಭೇಟಿ ಮಾಡಿ, ರೈತ ಮಾರುಕಟ್ಟೆ ನಿರ್ಮಾಣದ ಕುರಿತು ಮನವಿ ನೀಡಿ, ಸೂಕ್ತ ಪರಿಹಾರೋಪಾಯದ ಭರವಸೆ ಪಡೆದರೂ, ಇದು ಈವರೆಗೆ ಈಡೇರಿರುವುದಿಲ್ಲ.
ರೈತರು, ರೈತ ಮಹಿಳೆಯರು ಸ್ಥಳೀಯಾಡಳಿತಕ್ಕೆ ತಮ್ಮ ಪ್ರತಿಭಟನೆಯನ್ನು ತೋರಿಸುವುದಕ್ಕಾಗಿ ಎಲ್ಲಾ ರೀತಿಯ ಹಿಂಸೆ ಹಾಗೂ ದಬ್ಬಾಳಿಕೆಗಳನ್ನು ಎದುರಿಸಿ ಸೆಂಟ್ರಲ್ ಮಾರುಕಟ್ಟೆ ಹೊರಗಿನ ರಸ್ತೆ ಬದಿಯಲ್ಲಿಯೇ ವ್ಯಾಪಾರ ವಹಿವಾಟನ್ನು ನಡೆಸಿದ್ದಾರೆ. ಇವರನ್ನು ಅಲ್ಲಿಂದ ತೆರವುಗೊಳಿಸಲು ಹಾಗೂ ಇವರ ಪ್ರತಿರೋಧದ ಧ್ವನಿಯನ್ನು ಅಡಗಿಸಲು ಹಲವು ಪ್ರಯತ್ನಗಳು ನಡೆದಿವೆ, ಉದಾ: ರೈತ ಮಹಿಳೆಯರ ತರಕಾರಿಯನ್ನು ನಾಶ ಪಡಿಸುವುದು, ತರಕಾರಿ ಹೊರೆಗಳ ಮೇಲೆ ಸೀಮೆ ಎಣ್ಣೆಯನ್ನು ಸುರಿಯುವುದು, ಬೀದಿ ಬದಿ ವ್ಯಾಪರಿಗಳ ತೆರವು ಕಾರ್ಯಾಚರಣೆಗಳು ನಡೆದಾಗ ಇವರ ಕೃಷಿ ಉತ್ಪನ್ನಗಳನ್ನೂ ಸ್ವಾದೀನ ಪಡೆಸಿ ಕೊಂಡೊಯ್ಯುವುದು ಇತ್ಯಾದಿ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗ್ರತಿ ಮೂಡಿಸಲು ಮಾನವ ಹಕ್ಕು ಹೋರಾಟಗಾರರಾದ ರವೀಂದ್ರನಾಥ್ ಶಾನಭಾಗ್, ಬಳಕೆದಾರ ಚಳುವಳಿಯಲ್ಲಿ ಸಕ್ರೀಯರಾಗಿದ್ದ ಅಡ್ಡೂರು ಕೃಷ್ಣರಾವ್, ಮಹಿಳಾ ಪರ ಕಾರ್ಯಕರ್ತೆಯರಾದ ಗುಲಾಬಿ ಬಿಳಿಮಲೆ ಮುಂತಾದವರು ಲೇಖನಗಳನ್ನು ಪ್ರಕಟಿಸಿ ಬೆಂಬಲ ನೀಡಿದ್ದಾರೆ. ಹಲವಾರು ವರ್ಷಗಳಕಾಲ ನಗರದ ರೋಶನಿ ನಿಲಯದಲ್ಲಿ ತರಬೇತಿ, ಸಭೆ ಮತ್ತು ವಾರ್ಷಿಕ ಮಹಾಸಭೆಗಳನ್ನು ನಡೆಸಲು ಅವಕಾಶ ನೀಡಿದ್ದಾರೆ.
ಇವೆಲ್ಲದರ ಪರಿಣಾಮ ನೂರಾರು ರೈತರಿಗೆ, ರೈತ ಮಹಿಳೆಯರಿಗೆ ತಮ್ಮ ಕುಟುಂಬಗಳ ಆರ್ಥಿಕ ಅಭಿವೃದ್ಧಿ ಸಾಧಿಸಲು ಮತ್ತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರು ಇತರ ಉದ್ಯೋಗಾವಕಾಶಗಳನ್ನು ಪಡೆಯುವಂತೆ ಮಾಡಲು ಸಾಧ್ಯವಾಗಿದೆ. ತಮ್ಮ ಸ್ವಗೌರವವನ್ನು ವೃದ್ಧಿಸಿ, ಇತರರೊಂದಿಗೆ ಧೈರ್ಯದಿಂದ ವ್ಯವಹರಿಸಲು ಶಕ್ತರಾಗಿದ್ದಾರೆ. ಅನೇಕ ರೈತ ಮತ್ತು ಪ್ರಮುಖವಾಗಿ ರೈತ ಮಹಿಳೆಯರು ನಾಯಕರಾಗಿ ಮೂಡಿಬಂದಿದ್ದಾರೆ.
ಸ್ಥಳೀಯ ರೈತರ ಉಳಿವಿಕೆಗಾಗಿ ಹಾಗೂ ರೈತ ಮಹಿಳೆಯರ ಹಕ್ಕು ಸ್ಥಾಪನೆಗಾಗಿ ಆರಂಭಿಸಿದ ಹೋರಾಟ ಸುಮಾರು 25 ವರ್ಷಕ್ಕೂ ಮಿಕ್ಕಿದ ಹಾದಿ ಸವೆದಿದೆ. ಸನ್ಮಾನ್ಯ ಡಾ. ರೀಟಾ ನೊರೊನ್ಹಾರವರಿಗೆ ಸಹಾಯಕರಾಗಿದ್ದ ಜ್ಯೋತಿ ಎಮ್.ಎಸ್.ಡಬ್ಲ್ಯು, ನಂತರ ಕುಡುಪಿನಲ್ಲಿರುವ ಸೆಡ್ಸ್ (ಸೆಂಟರ್ ಫಾರ್ ಡೆವಲಪ್‍ಮೆಂಟ್ ಸ್ಟಡೀಸ್ ಎಂಡ್ ಎಜುಕೇಶನ್ - ಅಭಿವೃದ್ಧಿ ಅಧ್ಯಯನ ಮತ್ತು ಶಿಕ್ಷಣ ಸಂಸ್ಥೆ) ಸಂಸ್ಥೆಯ ವೆರೊನಿಕ ಪಿಂಟೊರವರು ಇಂದೂ ನೀಡುತ್ತಿರುವ ಅಮೂಲ್ಯ ಸೇವೆಯನ್ನು ಇಲ್ಲಿ ಸ್ಮರಿಸಬಹುದು. ಈ ಲೇಖನದ ಬರಹಗಾರನಿಗೂ ಈ ರೈತಪರ ಕಾರ್ಯದಲ್ಲಿ ಒಂದಿಷ್ಟು ಸಹಾಯ ನೀಡುವ ಅವಕಾಶ ಲಭಿಸಿದ್ದುದರಿಂದ, ರೈತಪರ ಕಾಳಜಿಯನ್ನು ಹಾಗೂ ಕೃಷಿ ವಿಷಯಗಳಲ್ಲಿನ ಆಸಕ್ತಿಯನ್ನು ಇನ್ನೂ ವೃದ್ಧಿಸಲು ಸಹಕಾರಿಯಾಯಿತು.
ಕೊರೊನಾ ತಂದಿರುವ ಹಾಗೂ ಸೆಂಟ್ರಲ್ ಮಾರುಕಟ್ಟೆ ಮುಚ್ಚುವಿಕೆಯ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಶ್ರಮಿಕ ರೈತ ಹಾಗೂ ರೈತ ಮಹಿಳೆಯರು ತಮ್ಮಲ್ಲಿದ್ದ ಕೃಷಿ ಉತ್ಪನ್ನಗಳನ್ನು ಸೂಕ್ತ ದರದಲ್ಲಿ ಮಾರಾಟ ಮಾಡಲು ಬವಣೆ ಪಡುತ್ತಿದ್ದಾರೆ. ಸ್ಥಳೀಯ ಪೌಷ್ಟಿಕಾಂಶಭರಿತ, ವಿಶಿಷ್ಟ ರುಚಿಯ ತರಕಾರಿ ಕೃಷಿ ಉತ್ಪನ್ನಗಳಿಗಿರುವ ಬೇಡಿಕೆಯನ್ನು ಪೂರೈಸುವುದರ ಮೂಲಕ ತಮ್ಮ ಜೀವನೋಪಾಯವನ್ನು ರಕ್ಷಿಸಲು ಶ್ರಮಿಸುತ್ತಿರುವ ರೈತರು, ರೈತ ಮಹಿಳೆಯರು, ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಇಂದೂ ನಿರ್ಲಕ್ಷಕ್ಕೆ ಒಳಪಟ್ಟಿರುವುದು ಬೇಸರದ ಸಂಗತಿ- ಇದೊಂದು ಉತ್ತಮ ನಾಗರಿಕ ಸಮಾಜದ ಲಕ್ಷಣವಲ್ಲ. ಇದರಿಂದಾಗಿ ಬರೆ ರೈತರು ಮಾತ್ರವಲ್ಲ, ನಗರದ ಬಳಕೆದಾರರು ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂಬುವುದನ್ನು ತಿಳಿದುಕೊಳ್ಳುವುದು ಮುಖ್ಯ. ದೂರದ ಊರುಗಳಿಂದ ರವಾನಿಸುವ ಪರಿಣಾಮದಿಂದ ಪೌಷ್ಟಿಕಾಂಶ ಕುಂಟಿತವಾದ ತರಕಾರಿಯನ್ನು ಅವರು ಅವಲಂಬಿಸಬೇಕಾಗಿದೆ. ಮಾನವನಿರ್ಮಿತ ಹಾಗೂ ಪ್ರಕತಿ ವಿಕೋಪಗಳ ಸಮಯದಲ್ಲಿ ತರಕಾರಿ ಹಾಗೂ ಹಣ್ಣು ಹಂಪಲು ಪೂರೈಕೆಯ ಅಭಾವದಿಂದ ಕಷ್ಟಕ್ಕೊಳಪಡುವ ಅನುಭವವು ಸ್ಥಳೀಯರಿಗೆ ಹೊಸತೇನಲ್ಲ. ಆದುದರಿಂದ ಸ್ಥಳೀಯ ರೈತರ ಹಿತಾಸಕ್ತಿ ರಕ್ಷಣೆ, ತಮ್ಮ ರಕ್ಷಣೆ ಎಂಬುವುದನ್ನು ನಗರದ ಬಳಕೆದಾರರು ಅರಿತು ಜಿಲ್ಲಾ ಹಾಗು ನಗರಾಡಳಿತದ ಮೂಲಕ ಸೂಕ ಸ್ಥಳಗಳಲ್ಲಿ ರೈತ ಮಾರುಕಟ್ಟೆ ವ್ಯವಸ್ಥೆಗಳ ನಿರ್ಮಾಣಕ್ಕಾಗಿ ರೈತರೊಂದಿಗೆ, ನಗರದ ಬಳಕೆದಾರರು ಕೈ ಜೋಡಿಸುವ ಅವಶ್ಯಕತೆ ಎದ್ದು ಕಾಣುತ್ತಿದೆ. ರೈತರಿಗೆ ಶೋಷಣೆರಹಿತ ಬುದುಕು ಒದಗಿಸುವ ಹೊಣೆ ನಮ್ಮೆಲ್ಲರ ಮೇಲಿದೆ.
- By ಡೇವಿಡ್ ಡಿಸೋಜ, ವಾಮಂಜೂರು