"ಎಷ್ಟೂಂತ ಟಿ.ವಿ ನೋಡ್ತೀಯಾ. ನಿಂಗೇ ಅಭ್ಯಾಸ ಆಗಿಬಿಟ್ಟಿದೆ ಕಲಿಯೋ ಮಕ್ಕಳಿಗೆ ಟಿವಿ ಒಳ್ಳೇದಲ್ಲ ತಿಳೀತಾ" ಎಂದವರ ಮಕ್ಕಳಿಗೆಲ್ಲ ಇಂದು ಟಿ.ವಿಯಲ್ಲೇ ಪಾಠವಂತೆ! ಕೇಳಲು ಒಂಥರಾ ಸೋಜಿಗವಾದರೂ ಅದೇ ಆದರೆ ವಾಸ್ತವ. ಕಾಲ ಎಷ್ಟರ ಮಟ್ಟಿಗೆ ಬದಲಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ...??
ದೂರದರ್ಶನ, ಮೊಬೈಲ್, ಕಂಪ್ಯೂಟರ್‌ನಂತಹ ಮಾಧ್ಯಮಗಳು ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಶೈಕ್ಷಣಿಕ ಸಾಧನೆಯ ಮೇಲೆ ಪ್ರಭಾವ ಬೀರುತ್ತವೆ. ಇದರಿಂದ ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಕಡಿಮೆಯಾಗಬಹುದು ಎಂದು ಅವುಗಳನ್ನು ಮೊದಲಿಂದಲೂ ಮಕ್ಕಳಿಂದ ದೂರವಿಟ್ಟುಕೊಂಡುಬಂದವರು ನಾವು. ಶಾಲೆಯಿಂದ ಬಂದ ತಕ್ಷಣ ಚಿಕ್ಕಮಕ್ಕಳು ಕಾರ್ಟೂನ್ ನೋಡಲು ಕೂತರೆ ಗದರಿಸಿ ಹೋಂವರ್ಕ್ ಮಾಡಲು ಕೂರಿಸುತ್ತಿದ್ದುದು ಸಾಮಾನ್ಯ ಸಂಗತಿ. ಅಷ್ಟೇ ಯಾಕೆ, ಹದಿಹರೆಯದ ಮಕ್ಕಳು ಬ್ಯಾಗ್ ಬಿಸಾಡಿ ಮೊಬೈಲ್ ಹಿಡಿದುಕೊಂಡರೆ ಮನೆ ರಣರಂಗವಾಗುವುದು ಗ್ಯಾರಂಟಿ. ಆದರೆ ಈಗ ಏನಾಯಿತು.?!
ಬದಲಾವಣೆಯ ಬೆನ್ನ ಹತ್ತಿ ನಾವು ಮುಂದೆ ಮುಂದೆ ಸಾಗುತ್ತಿದ್ದೇವೆ. ಕೊರೋನಾ ಎಂಬ ಮಹಾಮಾರಿಯಿಂದ ಊಹಿಸಲಾಗದ ಅದೆಷ್ಟೋ ಬದಲಾವಣೆಗಳಿಗೆ ನಾವು ಒಗ್ಗಿಕೊಳ್ಳುತ್ತಿದ್ದೇವೆ. ಶೈಕ್ಷಣಿಕ ಕ್ಷೇತ್ರದ ಮೇಲಂತೂ ಕೊರೋನಾದ ಪ್ರಭಾವ ಅಷ್ಟಿಷ್ಟಲ್ಲ. ಹಿಂದೆಲ್ಲಾ ಓದಿಗೆ ಅಪಥ್ಯವೆನಿಸಿದ್ದ ಟಿವಿ, ಮೊಬೈಲ್‌ಗಳೇ ಈಗ ಓದಿಗೆ ಮಧ್ಯವರ್ತಿಗಳಾಗಿರುವುದು ವಿಪರ್ಯಾಸ!
ಈಗ ಸಮಯ ಮುಂಜಾನೆ 9 ಆದರೆ ಸಾಕು. ಮಕ್ಕಳನ್ನು ಎಬ್ಬಿಸಿ ತಿಂಡಿ ತಿನ್ನಿಸಿ ದೂರದರ್ಶನದ ಎದುರು ತರಗತಿ ಕೇಳಲು ಕೂರಿಸಿ ಬಿಡುತ್ತೇವೆ. ಮಕ್ಕಳಿಗೋ ಇದೊಂತರಾ ವಿಚಿತ್ರ ಅನುಭವ. ಆದರೂ ಉನ್ನತ ಭವಿಷ್ಯಕ್ಕೆ ಈ ತರಗತಿಗಳನ್ನು ಕೇಳಲೇಬೇಕು. ಶಾಲೆಯಲ್ಲಿ ಮೇಷ್ಟ್ರು ಪಾಠ ಮಾಡುವಾಗ ಅಲ್ಲಿಗೇ ನಿದ್ದೆಗೆ ಜಾರುವ ಮಕ್ಕಳು ಈ ಟಿವಿ ಪಾಠದಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬುದು ಕುತೂಹಲಕರ ಅಂಶ.
ಶಾಲಾ ಜೀವನದಲ್ಲಿ ಶಾಪವಾಗಿದ್ದ ಈ ದೂರದರ್ಶನ ಇಂದು ವರವಾಗಿದೆಯೇ?, ಈ ಶಿಕ್ಷಣ ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುತ್ತಿದೆಯೇ? ತರಗತಿ ಕೇಳುವಾಗ ಬರುವ ಅದೆಷ್ಟೋ ಸಂದೇಹ, ಪ್ರಶ್ನೆಗಳಿಗೆ ಉತ್ತರ ಲಭಿಸುತ್ತದೆಯೇ? ಮುಂದೆ ಇದೇ ಕ್ರಮ ಮುಂದುವರೆಯುತ್ತದೆಯೇ? ಹೀಗೆ ಅನೇಕ ಪ್ರಶ್ನೆಗಳಿಗೆ ಶಿಕ್ಷಣ ವ್ಯವಸ್ಥೆ ಉತ್ತರಿಸಬೇಕಿದೆ. ಆದರೂ ಇರುವ ಮಿತಿಯಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯಬಹುದಾದ ಇಂತಹ ಪ್ರಯತ್ನಗಳಾಗಲಿ. ಆ ನಿಟ್ಟಿನಲ್ಲಿ ಟಿ.ವಿ ಮಕ್ಕಳಿಗೆ ವರವಾಗಲಿ ಎಂಬ ಶುಭದೊಸಗೆಯಷ್ಟೆ.
- By ಅರ್ಪಿತಾ ಕುಂದರ್
ಎಂಸಿಜೆ ವಿದ್ಯಾರ್ಥಿನಿ ,ವಿವೇಕಾನಂದ ಕಾಲೇಜು, ಪುತ್ತೂರು .