ಈ ಕಂಬಳ ಗದ್ದೆಯು 10 ಎಕರೆ ವಿಸ್ತಿರ್ಣ ಹೊಂದಿದ್ದು ಅರಮನೆಯ ಬಳ್ಳಾಳರ ಆಧೀನದಲ್ಲಿದ್ದಾಗ ವೈಭವದ ಕಂಬಳೋತ್ಸವ ಶ್ರೀ ದೈವದ‌ ಸೇವೆಯೊಂದಿಗೆ ನಡೆಯುತ್ತಿತ್ತು..ಹದ ಮಾಡಿದ ಗದ್ದೆಯಲ್ಲಿ ಸುತ್ತಲಿರುವ ಕಟ್ಟವುನಿಗೆ ಬರಿಮಣ್ಣು ಸವರಿ ಬೆಳಗಿನ ಜಾವ ದಲಿತ ವರ್ಗದ ಮಹನಿಯರಿಂದ ಶೇಡಿ ಹಾಕುವ ಎಂದರೆ ರಂಗೋಲಿ ಹಾಕುವ ಕಾರ್ಯಕ್ರಮ ಆರಂಭಗೊಂಡು ಬಳ್ಳಾಳರ ಅನುಮತಿ ಮತ್ತು ಕೋರಿಕೆಯಂತೆ ಊರಿನ ಕೋಣಗಳು ಊಳುವುದು ಈಗ ಇತಿಹಾಸದ ಪುಟ ಸೇರಿದೆ..

ಉಳುಮೆಯಾದ ಕೊನೆಗೆ ಕೋಣಗಳನ್ನು ಓಡಿಸಿ ಕುರಿನೀರಿನಿಂದ ಅವುಗಳಿಗೆ ಮೈಗೆ ಚೆಲ್ಲಿ ಸಂತೃಪ್ತಿಗೊಳಿಸಲಾಗುತ್ತಿತ್ತು...

ಬಳಿಕ ಸಂಜೆ ಬಳ್ಳಾಳರರ ನಿರ್ದೆಶನದಂತೆ ಗುತ್ತು ಬಾಳಿಕೆಯವರು ಗ್ರಾಮಸ್ಥರ ಉಪಸ್ಥಿತಿಯಲ್ಲಿ ಶುಭ ಮುಹೂರ್ತದಲ್ಲಿ ಕಂಬಳದ ಉತ್ತರ ದಿಕ್ಕಿನಿಂದ ಅರಸು ಕೊಡಮಣಿತ್ತಾಯನ ಪರಿವಾರ ದೈವವಾದ ಪಂಜುರ್ಲಿಯ ಮಾಡದಿಂದ ಪಂಜುರ್ಲಿ,ಎರುಗೋಣ ಹಾಗೂ ಬ್ರಾಹ್ಮಣ ವೇಷದಾರಿಯ ವಾಲಗದ ಮೂಲಕ ವೈಭವದ ಬಲಿ ಹೊರಟು ಕಂಬಳಗದ್ದೆಗೆ ಸುತ್ತು ಬಂದು ಪೂಕರೆ ಹಾಕಲು ಅನುವು ಮಾಡಿಕೊಡುವುದು ಸಂಪ್ರದಾಯಕವಾಗಿತ್ತು..ಬಳಿಕ ಅರಮನೆಯ ಗಡಿಕಾರ ಬಳ್ಳಾಳರು ಪೂಕರೆಗೆ ಹಾಲೆರೆದು ನಮಿಸುವ ವಿಹಂಗಮ ನೋಟ ಭಕ್ತಿಪ್ರಧಾನವಾಗಿತ್ತು..‌‌‍ಬಳಿಕ‌‌‍‍‍ ರಾತ್ರಿ ಅಮೃತಗಳಿಗೆಯಲ್ಲಿ ಅರಸು ಕೊಡಮಣಿತ್ತಾಯನ ವೈಭವದ ಭಂಡಾರ ಹೊರಟು ಕಂಬಳದ ಗದ್ದೆ ಎದುರಿರುವ ಮಂಜೊಟ್ಟಿಗುಡ್ಡೆಯಲ್ಲಿ ಹಾಕಿದ ಚಪ್ಪರದೊಂಪದಲ್ಲಿ ಭಂಡಾರ ಇಳಿಸಿ ಬಳಿಕ ನೇಮೋತ್ಸವ ನಡೆಯುವುದು ವೈಭವದ ಕಿಲೆಂಜಾರು ಜಾತ್ರೆಯಾಗುತ್ತಿತ್ತು..

ಮತ್ತೆ ಮರುದಿವಸ ಊರಿನ ಹೆಂಗಸರು ಗದ್ದೆನಾಟಿ ಮಾಡುತ್ತಿದ್ದರು..

ಕಂಬಳದ ಮರುದಿನ ಅರಮನೆಯಿಂದ ಹಿಂದೆ ಮನುಷ್ಯ ಜನ್ಮದಲ್ಲಿ ದಲಿತನಾಗಿದ್ದು ಅರಮನೆಯ ದನಗಳನ್ನು ಮೇಹಿಸಿ ಗೋಪಾಲಕನಾಗಿದ್ದ ಗೊಲ್ಲು ಎಂಬವ ಶ್ರೀದುರ್ಗಪರಮೇಶ್ವರಿ ಹಾಗೂ ದೈವ ಕೊಡಮಣಿತ್ತಾಯನ ಆದೇಶದಂತೆ ಮಾನವ ಕಾಯ ಬಿಟ್ಟು ದೈವಾಂಶಸಂಭೂತನಾಗಿ ಗೋವುಗಳ ರಕ್ಷಣೆಗೆ ನಿಯುಕ್ತಿಗೊಂಡ ದೈವ ಬೊಲರಾಯ ದೈವವು ಆ ದಿನ ಅರಮನೆಯಿಂದ ನಲ್ಕೆ ಸಮಾಜದ ದಿಶೆಮಕ್ಕಳ ಮೇಲೆ ಆವೇಶ ಭರಿತವಾಗಿ ಕಿಲೆಂಜಾರು ಗ್ರಾಮದ ಕಟ್ಟೆಮಾರು ಮನೆತನದ ಗಾಣದಕೊಟ್ಯಕ್ಕೆ ಹೊರಟು ಅವರು ನೀಡುವ ಅನ್ನ ಮೀನು ಪಧಾರ್ಥ ನೈವೇದ್ಯ ಸ್ವೀಕಾರ ಮಾಡಿ ಅಲ್ಲಿಂದ ಕೊನೆಗೆ ಅಂಬೆಲೊಟ್ಟು ಎಂಬ ಬಾಳಿಕೆಗೆ ಹೋಗಿ ಕೋಳಿ ಊಟದ ಸವಿ ಉಣ್ಣುವುದು ಪಧ್ಧತಿಯಾಗಿತ್ತು..

ಬಳಿಕ ಅರಮನೆಯ ಹತ್ತಿರ ಬಂದು ಎದುರಿರುವ ಬಾಕಿಮಾರುಗದ್ದೆಗೆ ಬಂದು ಕಲ್ಲಿನಲ್ಲಿ ಕೂತು ಸಂಧಿ ಹೇಳಿ ದೈವದ ದರ್ಶನ ಮುಗಿಯುತ್ತಿತ್ತು...ಇದು ಕಿಲೆಂಜಾರು ಗ್ರಾಮ ಕಂಬಳಗದ್ದೆಯ ಜಾತ್ರ ಮಹೋತ್ಸವದ ಇತಿಹಾಸದ ವೈಭವ..

ಪ್ರಸ್ಥುತ ಕಾಲದಲ್ಲಿ ಈ ಕಂಬಳ‌ಗದ್ದೆಯು ಸರಕಾರದ ಭೂಸುಧಾರಣೆ ಕಾಯ್ದೆಯ ಅಧಿನಿಯಮದಡಿ ಸ್ಥಳಿಯರಾದ ವಿಶ್ವನಾಥ ಶೆಟ್ಟಿ ಕಂಬಳಕೋಡಿ,ಹರೀಶ್ ನಾಯ್ಕ್,ರಾಮಣ್ಣ ನಾಯ್ಕ್,ಜಗನ್ನಾಥ ಶೆಟ್ಟಿ ಬಳ್ಳಿ ಇವರು ತಮ್ಮ ಗದ್ದೆಯಲ್ಲಿ ಹತ್ತುಹಲವಾರು ಸಮಸ್ಯೆ ಎದುರಿಸಿದರೂ ಭತ್ತ ಬೆಳೆದು ಗದ್ದೆಯನ್ನು ಹಡಿಲಾಗಲು ಬಿಡಲಿಲ್ಲ..

ಕರಾವಳಿ ಜಿಲ್ಲೆಯಾದ್ಯಂತ ಸಾಂಸ್ಕಿತಿಕವಾಗಿಯೂ ಆಹಾರ ಬೆಳೆಯಾಗಿಯೂ ಶ್ರಮವಹಿಸಿ ದುಡಿಯುವ ರೈತನಿಗೆ ಭತ್ತ ಬೆಳೆಯಿಂದ ನಷ್ಟವಾಗಿ ಬೆಳೆಯಿಂದ ವಿಮುಖರಾಗುವ ಸಂದರ್ಭದಲ್ಲಿ ಕ.ರಾ.ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳಾದ ಶ್ರೀಧರ ಶೆಟ್ಟಿ ಬೈಲುಗುತ್ತು,ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು,ದಯಾನಂದ ಶೆಟ್ಟಿ ಕುಳಾವೂರುಗುತ್ತು ಹಾಗೂ ಪ್ರಗತಿಪರ ಕೃಷಿಕರಾದ ಪ್ರಭಾಕರ ಮೈಯ ಇವರುಗಳ ಬೇಡಿಕೆಯನ್ನು ಮನ್ನಿಸಿ ಕರ್ನಾಟಕ ‌ರಾಜ್ಯದ ಮುಖ್ಯಮಂತ್ರಿಗಳು ಕರಾವಳಿ ಪ್ಯಾಖೇಜ್ ಎಂಬ ಅನುದಾನವನ್ನು 2019ರ ಮುಂಗಾರು ಹಂಗಾಮಿಗೆ ಬಿಡುಗಡೆಗೊಳಿಸಿದ್ದರು...ಅದರೆ ಪ್ರಸ್ಥುತ ವರ್ಷ ಈ ಅನುದಾನ ಸ್ಥಗಿತಗೊಂಡಿರುವುದು ವಿಷಾದನಿಯ..ಕರಾವಳಿ ಜಿಲ್ಲೆಯ ಭತ್ತ ಬೆಳೆಗಾರರ ಹಿತದೃಷ್ಟಿಯಿಂದ ಭತ್ತ ಬೆಳೆದ ಕರಾವಳಿ ಜಿಲ್ಲೆಯ ಎಲ್ಲ ರೈತರಿಗೆ ಶೀಘ್ರವೆ ಕರಾವಳಿ ಪ್ಯಾಖೇಜ್ ಬಿಡುಗಡೆ ಮಾಡಬೇಕೆಂದು ಹಡೀಲುಗದ್ದೆ ಸಾಗುವಳಿಯ ಹರಿಕಾರ ಬಂಟ್ವಾಳ ಶಾಸಕ ರೈತ ನಾಯಕ ರಾಜೇಶ್ ನಾಯ್ಕ್ ಇವರ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಓತ್ತಾಯಿಸಲಾಗಿದೆ...ಅನ್ನದಾತನ ಬೇಡಿಕೆಯಾದ ಕರಾವಳಿ ಪ್ಯಾಖೇಜನ್ನು ಶೀಘ್ರವೆ ಬಿಡುಗಡೆ ಮಾಡಬೇಕೆಂದು ರೈತ ಸಂಘ ಅಕ್ಕೋತ್ತಾಯ ಮಂಡಿಸಿದೆ