ಹೆಬ್ರಿ : ಮೂರು ದಶಕಗಳಲ್ಲಿ ಪತ್ರಕರ್ತರಾಗಿ ಸಾರ್ಥಕ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ, ಕವಿ ಸಾಹಿತಿಯಾಗಿರುವ ಅಖಿಲ ಕರ್ನಾಟಕ ಬೆಳದಿಂಗಳ ಕನ್ನಡ ಸಾಹಿತ್ಯ ಸಮ್ಮೇಳನದ ರೂವಾರಿ ಶೇಖರ ಅಜೆಕಾರು ಅವರಿಗೆ ಮುಂಬಯಿಯ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋಧ್ಯಮ ಮತ್ತು ಸಾಹಿತ್ಯದ ಉತ್ಕ್ರಷ್ಟತೆಯ ಸೇವೆಗಾಗಿ ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಅ್ಯಂಡ್ ಎಜುಕೇಷನ್ ಘಟಿಕೋತ್ಸವದಲ್ಲಿ ಶನಿವಾರ ಡಾಕ್ಟರೇಟ್ ಪದವಿ ಪ್ರದಾನ ನಡೆಯಲಿದೆ. ಮಂಗಳೂರು ವಿವಿಯಲ್ಲಿ ಬಿಕಾಂ ಪದವಿ ಪಡೆದಿರುವ ಶೇಖರ ಅಜೆಕಾರು ಚಿನ್ನದ ಪದಕದೊಂದಿಗೆ ಎಂಎ ಪದವಿ, ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮುಂಬಯಿ ವಿವಿಯಲ್ಲಿ ಎಂಫಿಲ್ ಪದವಿ ಪಡೆದಿದ್ದಾರೆ. ಸದಾ ಹೊಸತನದ ಹರಿಕಾರರಾದ ಶೇಖರ ಅಜೆಕಾರು ಆದಿಗ್ರಾಮೋತ್ಸವ, ಕರ್ನಾಟಕ ಮಿನಿ ಚಲನ ಚಿತ್ರೋತ್ಸವ, ಅಂಗನವಾಡಿ ಮಕ್ಕಳ ಬಾಲ ಪ್ರತಿಭೋತ್ಸವ, ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಹೊಟೇಲ್ ಕಾರ್ಮಿಕರ ಪ್ರತಿಭೋತ್ಸವ ಸಹಿತ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ನಾಡಿಗೆ ಪರಿಚಯಿಸಿ ಮುನ್ನಡೆಸಿದ್ದಾರೆ.
ಕರ್ನಾಟಕ ಮತ್ತು ಮುಂಬಯಿಯಲ್ಲಿ ಪತ್ರಕರ್ತರಾಗಿ ವಿಶೇಷ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದಾರೆ. ಕವಿ,ಸಾಹಿತಿ,ಲೇಖಕ, ವಿಮರ್ಶಕರಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.