ಪುತ್ತೂರು: ಭಾಷಾ ಪಾಂಡಿತ್ಯ ಮತ್ತು ಸಂವಹನ ಕಲೆಯಲ್ಲಿ ಪ್ರಾವಿಣ್ಯತೆಯಿದ್ದಾಗ ಅಭಿಪ್ರಾಯವನ್ನು ಇತರರಿಗೆ ಸುಲಲಿತವಾಗಿ ತಲುಪಿಸಬಹುದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ‘ಲರ್ನಿಂಗ್ ಅನಲಿಟಿಕಲ್ ಸ್ಕಿಲ್ಸ್’ ಕುರಿತು ಆಯೋಜಿಸಲಾದ ಸರ್ಟಿಫಿಕೇಟ್ ಕೋರ್ಸನ್ನು ಸ್ನಾತಕೋತ್ತರ ಸಭಾಂಗಣದಲ್ಲಿ ಉದ್ಘಾಟಿಸಿ, ಮಾತನಾಡಿದರು. ವಿಜ್ಞಾನ ಕ್ಷೇತ್ರದ ವಿಚಾರಗಳ ವ್ಯಾಪ್ತಿ ಬಹಳಷ್ಟು ವಿಶಾಲವಾದುದು. ಕೆಲವು ಬಾರಿ ಅವುಗಳ ಕುರಿತು ನಮ್ಮಲ್ಲಿರುವ ಜ್ಞಾನ ಬಹಳ ಕಡಿಮೆಯೆನಿಸುತ್ತದೆ. ಕಲಿಕೆಯ ಪ್ರಕ್ರಿಯೆಯನ್ನು ಜೀವನದುದ್ದಕ್ಕೂ ನಿರಂತರವಾಗಿ ಮುಂದುವರಿಸಬೇಕು ಎಂದರು.

ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿರುವವರು ವಿಶ್ಲೇಷಣಾ ಕೌಶಲ್ಯವನ್ನು ಉನ್ನತೀಕರಿಸುವ ಕುರಿತು ವಿಶೇಷ ಆಸಕ್ತಿ ವಹಿಸಿದಾಗ ಶಿಕ್ಷಣದ ಮೂಲ ಉದ್ದೇಶ ಈಡೇರಿದಂತಾಗುತ್ತದೆ. ಜ್ಞಾನ ಸಂಪಾದನೆ ಮತ್ತು ಕೌಶಲ್ಯ ಗಳಿಕೆಯಲ್ಲಿ ಇತರರಿಗಿಂತ ಹಿಂದೆ ಬಿದ್ದಾಗ ಅವಕಾಶ ವಂಚಿತರಾಗುವ ಸಾಧ್ಯತೆಯಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸತತ ಪರಿಶ್ರಮ, ಅರ್ಪಣಾ ಮನೋಭಾವ ಮತ್ತು ಕೌತುಕತೆ ಬಹಳ ಮುಖ್ಯ ಎಂದು ಹೇಳಿದರು.

ವಿಭಾಗದ ಸಂಯೋಜಕ ಡಾ. ಇ ದೀಪಕ್ ಡಿ’ಸಿಲ್ವ ಮಾತನಾಡಿ, ಇಂದಿನ ಈ ಡಿಜಿಟಲ್ ಯುಗದಲ್ಲಿ ಬದಲಾವಣೆಗಳು ಕ್ಷಿಪ್ರಗತಿಯಲ್ಲಿ ನಡೆಯುತ್ತವೆ. ಜೀವನದ ಎಲ್ಲಾ ರಂಗದಲ್ಲಿ ತಂತ್ರಾಂಶಗಳ ಬಳಕೆ ಅನಿವಾರ್ಯವಾಗಿದೆ. ಬೋಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ವಿನೂತನ ನಮೂನೆಯ ತಂತ್ರಾಂಶಗಳನ್ನು ಉಪಯೋಗಿಸಿದಾಗ ಮಾತ್ರ ಶೈಕ್ಷಣಿಕ ಗುಣಮಟ್ಟವನ್ನು ಸಾಧಿಸಬಹುದು ಎಂದರು.

ಪ್ರಮಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಅಕ್ಷತಾ ಜಿ ಸ್ವಾಗತಿಸಿದರು. ನಿತ್ಯ ಕೆ ನಾಯರ್ ವಂದಿಸಿದರು. ಪೂಜಾಶ್ರೀ ವಿ ರೈ ಕಾರ್ಯಕ್ರಮ ನಿರೂಪಿಸಿದರು.