ಮಕ್ಕಳ ತಪ್ಪಿಗೆ ಹೆತ್ತಪ್ಪನು ಕ್ರೋಧಗೊಂಡು (ಮಕ್ಕಳ) ಹೆತ್ತಮ್ಮನಿಗೆ ಶಿಕ್ಷೆ ನೀಡುತ್ತಿದ್ದಾನೆ. ಶಿಕ್ಷೆ ತಪ್ಪಿಸಲು ಯಾವ ಮಕ್ಕಳೂ ತಯಾರಿಲ್ಲ. ಯಾಕೆ? ಉದಾಸೀನವೇ?, ಅಲಕ್ಷ್ಯವೇ?, ದುರಹಂಕಾರವೇ?.    ಹಾ.... ಅತಿಯಾಸೆಯೇ ಕಾರಣವೆನ್ನಬಹುದೋ ಏನೋ?

ಇಲ್ಲಿ ಮಕ್ಕಳೆಂದರೆ ಯಾರು? ನಾವೇ!!

ಏನು ಆಶ್ಚರ್ಯವಾಯಿತೇ?

ಹೆತ್ತಪ್ಪ ಯಾರು? ಬೆಳಗೋ ಸೂರ್ಯ - ದಿನಕರ. ನಮ್ಮ ದಿನವನ್ನು ಬೆಳಗಿಸುವ ರವಿ.

ಭೂಮಿತಾಯಿ - ಹೊತ್ತ ಮಾತೆ ಅಂದ ಮೇಲೆ ಹೆತ್ತ ತಾಯೇ ತಾನೇ?

ದಿನಪನು ಮಾತೆಯನ್ನು ಸುಡುವ ಕಣ್ಣುಗಳಿಂದ ದಿನಾಲೂ ನೋಡುತ್ತಿದ್ದಾನೆ. ಯಾಕಾಗಿ? ನಾವು ನೀವುಗಳು ಮಾಡುತ್ತಿರುವ ತಪ್ಪಿಗಾಗಿ.

ಎಲ್ಲಿ ನೋಡಿದರೂ ಸುಡು ಸುಡು ಬಿಸಿಲ ಧಗೆ. ನೀರಿಲ್ಲ, ನೆರಳಿಲ್ಲ, ಮರಗಳೇ ಇಲ್ಲದ ಮೇಲೆ ತಂಪಿನ ಮಾತೆಲ್ಲಿ? ಕಾಂಕ್ರೀಟು ಕಾಡು ಬೆಳೆಸಿದ ಮಕ್ಕಳು ಐಷಾರಾಮಿ ಜೀವನಕ್ಕೆ ಸೋತು ಹೋಗಿ ತಂಗಾಳಿಗಾಗಿ ತಾತ್ಕಾಲಿಕವಾದ ಎಸಿಯನ್ನವಲಂಬಿಸಿದ್ದಾರೆ. ಆದರೆ ಅದು ಹೊರಬಿಡುವ ಬಿಸಿಗಾಳಿಗೆ ತಲೆಕೆಡಿಸಿಕೊಳ್ಳದ ಮೂರ್ಖರು ಪ್ರಾಕೃತಿಕವಾಗಿ ಇನ್ನಷ್ಟು ಬಿಸಿ ಮಾಡುವ ಮೂಲಕ ಅತ್ಯಧಿಕ ಪ್ರಮಾಣದಲ್ಲಿ ಮಲಿನಗೊಳಿಸುತ್ತಿದ್ದೇವೆ.

ಕಣ್ಣಿದ್ದು ಕುರುಡರು, ಕಿವಿಯಿದ್ದು ಕಿವುಡರು, ಬಾಯಿಯಿದ್ದೂ ಮೂಗರಾಗಿ ವರ್ತಿಸುತ್ತಿರುವುದನ್ನು ಗಮನಿಸಿದರೆ ಹಿಂದಿನ ಕಾಲದ ಮೂರು ಮಂಗಗಳ ಪಾಠ ಈಗಿನ ಕಾಲಕ್ಕೇ ರಚಿತವಾಯ್ತೋ ಎಂಬಂತೆ ಭಾಸವಾಗುತ್ತಿದೆ.

ಪ್ಲಾಸ್ಟಿಕ್ ಹಾವಳಿಯೇನೂ ಕಡಿಮೆಯಿಲ್ಲ.!!ಯಾವ ಕಾರ್ಯಕ್ರಮವೇ ಇರಲಿ ಪ್ಲಾಸ್ಟಿಕ್ ನ ಬಳಕೆ ಇಲ್ಲದೆ ಯಾವ ಕಾರ್ಯವೂ ಇಲ್ಲವೇನೋ ಅನ್ನುವ ಹಾಗಾಗಿದೆ. ಯಾಕಾಗಿ? ಇದೆಲ್ಲಾ ಬೇಕಾ?, ಯೋಚಿಸಿ....... ಅಬ್ಬಾ ಸೆಕೆ ಅಂತಾರೆ ತಡ್ಕೊಳ್ಳೋಕಾಗಲ್ಲ ಅಂತಾರೆ...

ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಲಕ್ಷ ಗಟ್ಟಲೆ ಮರಗಳ ಮಾರಣಹೋಮ ಬೇಕಿತ್ತಾ?

ಅದಿರ್ಲಿ, ಬಿಸಿಗಾಳಿ, ಬಿಸಿಲಿಗೆ ಹೊರಗೆ ಹೋಗೋ ಹಾಗೆ ಇಲ್ಲ. ಇನ್ನು ವಾತಾವರಣ ಸೇರೋ ಈ ಪ್ಲಾಸ್ಟಿಕ್  (ದುರ್ಬಳಕೆ) ಬಳಕೆ ಇಂದು ನಿನ್ನೆಯದಲ್ಲ. ಪ್ರತಿಯೊಬ್ಬರೂ ಮನೆಯಿಂದ ಹೊರಡುವಾಗಲೇ ಲಕ್ಷಣವಾಗಿ ಕೈಚೀಲ ಹಿಡಿದುಕೊಂಡು ಹೊರಟರೆ ಒಳ್ಳೆಯದಲ್ಲವೇ?

ನಾಳೆಯ ಚಿಂತೆ ಪ್ರಾಕೃತಿಕ ಮಟ್ಟದಲ್ಲಿರಬೇಕೇ ಹೊರತು ಎಷ್ಟು ಹಣ ಹೂಡಿದರೆ ಎಷ್ಟು ಗಳಿಕೆ ದುಪ್ಪಟ್ಟು ಆಗಬಹುದು ಎನ್ನುವ ಚಿಂತೆಯಲ್ಲಿ ಮುಳುಗಿಹೋಗಬಾರದಲ್ಲಾ? ಕೇರಳ!, ಅಷ್ಟೇ ಯಾಕೆ? ಪಕ್ಕದ ಮಡಿಕೇರಿಯಲ್ಲಿಯೂ ಆದ ಘಟನೆ ಎಲ್ಲಾರೂ ಮರೆತಂತಿದೆ. ಪ್ಲಾಸ್ಟಿಕ್ ನಿಂದ ಮನುಜನ ವಿನಾಶ ಖಂಡಿತ.

ಹಾಗಾಗಿ ಯಾವುದೇ ಸಮಾರಂಭವಿರಲಿ ಪ್ಲಾಸ್ಟಿಕ್ ನ್ನು ಮರೆತು ಲಕ್ಷಣವಾಗಿ ಹಾಳೆ ತಟ್ಟೆಯಂತಹ ಪರಿಕರಗಳು, ಸ್ಟೀಲ್ ಲೋಟಗಳಂತಹ ಉಪಕರಣಗಳ ಬಳಕೆ ಹೆಚ್ಚೆಚ್ಚು ಆಗಲಿ. ಇಂದಿನ ಚಿಂತನೆ ನಾಳೆಗೆ ಒಳಿತಿನ ದಾರಿಯಾಗಲಿ.

ಮಿತಿ ಮೀರಿದ ಪ್ಲಾಸ್ಟಿಕ್ ಗಳ ಬಳಕೆ ಅತಿಯಾದ ಜನಸಂಖ್ಯೆ ಯಂತೇ.... ಕಾಡುತ್ತಿದೆ. ಹಾಗಾಗಿ ಎಲ್ಲಾ ಸಮಾಜದ ಬಾಂಧವರಿಗೂ ಒಂದೇ ತೆರನಾದ ಕಾನೂನು, ರೀತಿ, ನೀತಿ ದೇಶದ ಆರ್ಥಿಕ ಸ್ಥಿತಿ ಗೂ ಒಳಿತು...

(ದ.ಕ ಲೇಖಕರು, ಕವಯಿತ್ರಿ )