ಈ ಶಿರೋನಾಮೆ ಕಂಡು ಹಲವರಿಗೆ ಕಸಿವಿಸಿಯಾದರೆ ಇನ್ನು ಕೆಲವರಿಗೆ ಎದೆ ಡವಾಯಿಸಬಹುದು. ಹೀಗೂ ಉಂಟೇ ಎಂದೆಣಿಸಬಹುದು. ಏನಾದರೇನು?, ಓದುವ ತಾವೆಲ್ಲ ಓದಿ ಮುಗಿಸಿದ ತರುವಾಯ ಉಸಿರೆಳೆದು ನಿರಾಳರಾದರೆ, ಉತ್ತಮತೆಗೆ ಬೆಂಬಲ ನೀಡಿದರೆ ಅಷ್ಟೇ ಸಂತೋಷ.

ಸಾಮಾನ್ಯವಾಗಿ ಖಾಸಗೀ ಆಸ್ಪತ್ರೆಗಳು ತಮ್ಮ ಹೆಸರಿನೊಂದಿಗೆ ಈ ವಿಶೇಷಣವನ್ನು ಸೇರಿಸಿಕೊಳ್ಳುವುದು ಸಾಮಾನ್ಯ. ಹಾಗಿದ್ದರೆ ಅಂತಹ ಶ್ರೇಷ್ಠತೆ ಅಲ್ಲೇನಿದೆ? ಮೊತ್ತ ಮೊದಲಾಗಿ ಆಗಬೇಕಾದುದು ಜನರ ಮನಸ್ಸಿನಲ್ಲಿ ಸರಕಾರೀ ಆಸ್ಪತ್ರೆಯ ಬಗೆಗೆ ಒಲವು, ಅಭಿಮಾನ, ಆತ್ಮೀಯತೆ, ತಮ್ಮದೆನ್ನುವ ಭಾವನೆ ಬೆಳೆಯಬೇಕಾಗಿದೆ. ಕಾರ್ಯ ನಿರ್ವಹಿಸುವ ವೈದ್ಯರುಗಳು ತಮ್ಮ ಸ್ವಂತ ಕ್ಲಿನಿಕ್ ಅಥವಾ ಇತರರ ಆಸ್ಪತ್ರೆಗಳಲ್ಲಿ ವಿಸಿಟಿಂಗ್ ಡಾಕ್ಟರ್ ಗಳಾಗಿ ಕಾರ್ಯನಿರ್ವಹಿಸುವುದರ ಬಗೆಗೆ ಪರ್ಯಾಲೋಚಿಸಿ ತಾವು ಕೆಲಸ ನಿರ್ವಹಿಸುವಲ್ಲಿಯೇ ಎಲ್ಲರಿಗೂ ಉತ್ತಮ ವೈದ್ಯಕೀಯ ನೆರವು, ಚಿಕಿತ್ಸೆ ನೀಡಬೇಕಾಗಿದೆ.

ಜನರ ಮನಸ್ಸಿನಲ್ಲಿ ಖಾಸಗಿ ಆಸ್ಪತ್ರೆಯ ಬಗೆಗೆ ಇರುವಷ್ಟೇ ವ್ಯಾಮೋಹ ಸರಕಾರೀ ಅಸ್ಪತ್ರೆಗಳ ಬಗೆಗೆ ಬೆಳೆಯಬೇಕಾಗಿದೆ. ಅದಕ್ಕಾಗಿ ಸರಕಾರೀ ಆಸ್ಪತ್ರೆಗಳೂ ಅಷ್ಟೇ ಉತ್ತಮ ಪರಿಸರ, ಸ್ವಚ್ಛತೆ, ಜನರಿಗೆ ಸಹಾಯ, ಸಹಕಾರ ನೀಡುವ ಮನಸ್ಥಿತಿಯನ್ನು ಹೊಂದಬೇಕಾಗಿದೆ.

ಸ್ವಚ್ಛ ಪರಿಸರ :- ಹೆಚ್ಚಿನ ಸರಕಾರೀ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಸರವನ್ನು ಗಮನಿಸಿದರೆ ಎಲ್ಲವೂ ಅಯೋಮಯವಾಗಿರುವುದು ಕಂಡುಬರುತ್ತದೆ. ಪರಿಸರದಲ್ಲಿ ಬೆಳೆದ ಅನುತ್ಪಾದಕ, ಅನಾವಶ್ಯಕ ಗಿಡ-ಗಂಟಿಗಳನ್ನು ನಿವಾರಿಸಿ ಸ್ವಚ್ಛ-ಸುಂದರ ಪರಿಸರವನ್ನು ನಿರ್ಮಿಸಿರುವುದಿಲ್ಲ. ಇರುವ ಸ್ನಾನ ಗೃಹ, ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸದೇ ಅನುತ್ಪಾದಕ, ಅನಾವಶ್ಯಕ ವಸ್ತುಗಳ ಸಂಗ್ರಹಾಗಾರದಂತೆ ಕಂಡುಬರುತ್ತದೆ. ಕೈ-ಕಾಲುಗಳನ್ನು ಕಳೆದುಕೊಂಡ ಹಳೆ ಸಾಮಾಗ್ರಿಗಳನ್ನು ವಿಲೇ ಮಾಡದೇ ಹಾಗೆಯೇ ಇದ್ದಲ್ಲೆಲ್ಲಾ ಶೇಖರಿಸಿಟ್ಟು ಗಬ್ಬೇಳುವಂತೆ ಮಾಡಿರುವುದು ಕಂಡುಬರುತ್ತದೆ. ಹೀಗೆ ಈ ಪ್ರಕಾರದಲ್ಲಿರುವ ಪರಿಸರವನ್ನು ಸೂ¥ರ್ ಸ್ಪೆಷಾಲಿಟಿ ಎಂದು ಹೇಗೆ ತಾನೇ ಹೇಳಲು ಸಾಧ್ಯ? ಹೀಗಾಗಿ ಹಳೆಯ ಎಲ್ಲ ಸಾಮಾಗ್ರಿಗಳನ್ನು ಕನಿಷ್ಠ ತಿಂಗಳಿಗೊಂದಾವರ್ತಿ ವಿಲೇ ಮಾಡಿ ಪರಿಸರವನ್ನು ಸ್ವಚ್ಛಗೊಳಿಸಿದರೆ, ಎಲ್ಲವೂ ಸುಂದರಗೊಳ್ಳಲು ಸಾಧ್ಯ.

ತುಕ್ಕು ಹಿಡಿಯುತ್ತಿರುವ ಸಲಕರಣೆಗಳು :- ಹಲವಾರು ಆಸ್ಪತ್ರಗಳು ಹಾಗೂ ಪ್ರಾ.ಆ.ಕೇ.ಗಳಲ್ಲಿ ವಿವಿಧ ಆರೋಗ್ಯ ಸುಧಾರಣಾ ಸಲಕರಣೆಗಳಿವೆ. ಆದರೆ ಆ ಸಲಕರಣೆಗಳನ್ನು ಉಪಯೋಗಿಸಲು ಸೂಕ್ತ ತರಬೇತಾದ ಡಾಕ್ಟರ್ ಹಾಗೂ ಸಹಾಯಕರುಗಳು ಇರುವದಿಲ್ಲ. ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಣ್ಣಿಗೆ ಸಂಬಂಧಿಸಿದ, ಶಸ್ತ ಚಿಕಿತ್ಸೆಗೆ ಸಂಬಂಧಿತ, ಹಲ್ಲಿಗೆ ಸಂಬಂಧಿತ ಇತ್ಯಾದಿ ಹಲವಾರು ವಿಶೇಷ ರೀತಿಯ ಸಲಕರಣೆಗಳಿವೆ. ಆದರೆ ಎಂತಹ ಉಪಕರಣಗಳಿದ್ದರೂ ಕೂಡಾ ಅವನ್ನು ಉಪಯೋಗಿಸುವ, ಉಪಯೋಗಿಸಿ ಗುಣಪಡಿಸ ಬೇಕಾದ ಡಾಕ್ಟರ್, ಸಹಾಯಕರು ಇಲ್ಲದಿದ್ದರೆ ಏನಿದ್ದೂ ಉಪಯೋಗವಿಲ್ಲ. ಅಂತಹ ಎಲ್ಲ ಉಪಕರಣಗಳೂ ಉಪಯೋಗ ರಹಿತವಾಗಿ ತುಕ್ಕು ಹಿಡಿದು ಗ್ರಾಹಕರ ಹಣ, ಸಾಮಾನ್ಯರ ತೆರಿಗೆ ಹಣ ಉಪಯೋಗ ರಹಿತವಾಗಿ ವ್ಯರ್ಥಗೊಳ್ಳುತ್ತಿದೆ. ಇದಕ್ಕೆ ಕಾರಣ ಯಾರು ಒಮ್ಮೆ ಎಲ್ಲರೂ ಯೋಚಿಸಿರಿ.

ಯೋಗ್ಯ , ನಿಷ್ಣಾತ ಡಾಕ್ಟರರುಗಳ ಕೊರತೆ :- ಭಾರತದಲ್ಲಿ ಸಾಕಷ್ಟು ಸಂಖ್ಯೆಯ ಡಾಕ್ಟರರುಗಳು ಇದ್ದರೂ ಕೂಡಾ ಸರಕಾರದ, ಸರಕಾರದ ಮಂದಿಯ ವಿವಿಧ ಕಾರಣದಿಂದ ಅವರೆಲ್ಲರೂ ಸರಕಾರದ ಆಸ್ಪತ್ರೆಗಳಿಂದ ದೂರವೇ ಉಳಿದಿದ್ದಾರೆ. ಒಂದೋ ಅವರು ತಮ್ಮದೇ ಕ್ಲಿನಿಕ್, ಇಲ್ಲವೇ ಇತರರ ಆಸ್ಪತ್ರೆಗಳಲ್ಲಿ ದುಡಿಯುತ್ತಿದ್ದಾರೆ. ಒಂದು ವೇಳೆ ಖಾಸಗೀ ಆಸ್ಪತ್ರೆಗಳಲ್ಲಿರುವಂತೆ ಸರಕಾರೀ ಆಸ್ಪತ್ರೆಗಳಲ್ಲಿ ಕೂಡಾ ಯೋಗ್ಯ, ನಿಷ್ಣಾತ ಡಾಕ್ಟರರುಗಳನ್ನು ಕರೆಸಿ ಸೂಕ್ತ ಚಿಕಿತ್ಸೆ, ಔಷಧಿಗಳನ್ನು ನೀಡುವಂತಾದರೆ ಸರಕಾರೀ ಆಸ್ಪತ್ರೆಗಳೂ ಸೂಪರ್ ಸ್ಪೆಷಾಲಿಟಿಗಳಾಗಲು ಸಾದ್ಯವಿದೆ. ಆದರೆ ಅದಕ್ಕೆ ಸರಕಾರೀ ಆಸ್ಪತ್ರೆಗಳಲ್ಲಿರುವ ಆರೋಗ್ಯಾಧಿಕಾರಿಗಳು, ಸರಕಾರ , ಸರಕಾರದ ಮಂದಿ ಅವಕಾಶ ಮಾಡಿಕೊಡಬೇಕಾಗಿದೆ. ಇವರೆಲ್ಲರ ಮನಸ್ಸನ್ನು ತಿದ್ದುವ ಕೆಲಸವನ್ನು ಯಾರು ಮಾಡಬಹುದು? ಸಾಮಾನ್ಯರಿಂದ ಇದು ಸಾಧ್ಯವಿಲ್ಲ. ಈ ಬಗ್ಗೆ ಎಲ್ಲರೂ ಒಂದಾಗಿ ಒಮ್ಮನಸ್ಸಿನಿಂದ ನಿರ್ಧಾರ ಕೈಗೊಂಡರೆ ಮಾತ್ರ ಎಲ್ಲವೂ ಸಾಧ್ಯವಿದೆ.

ಪ್ರಸ್ತುತ ಯಾವುದೇ ತುರ್ತು ಸಂದರ್ಭದಲ್ಲಿ ಹೇಗೆ ಸರಕಾರದ 108 ವಾಹನ ತತ್ಕ್ಷಣ ಸ್ಪಂದಿಸಿ ಚಿಕಿತ್ಸೆ, ಪರಿಹಾರ ಒದಗಿಸುತ್ತದೆಯೋ ಅದೇ ರೀತಿ ಸರಕಾರೀ ಆಸ್ಪತ್ರೆಗಳು, ಪ್ರಾ.ಆ.ಕೇ.ಗಳು ಕೂಡಾ ಅಷ್ಟೇ ಉತ್ತಮವಾಗಿ ಸ್ಪಂದಿಸಿದಲ್ಲಿ ಜನ ಸಾಮಾನ್ಯರೂ ಅತ್ತ ಸುಳಿದಾರು. ಉತ್ತಮ,. ಯೋಗ್ಯ, ನಿಷ್ಣಾತ ಡಾಕ್ಟರರುಗಳು ಸರಕಾರೀ ಆಸ್ಪತ್ರೆ ಹಾಗೂ ಪ್ರಾ.ಆ.ಕೇ.ಗಳಲ್ಲಿರುವದರಿಂದ ಆಯಾ ಪ್ರದೇಶದ ಏಳಿಗೆಗೂ, ಜನರ ಆರೋಗ್ಯ ಸುಧಾರಣೆಗೂ ಸಹಾಯಕವಾಗಲು ಸಾಧ್ಯವಿದೆ.

ಇತರ ಎಲ್ಲಾ ಕಡೆಯ ಬಿಲ್ಲುಗಳನ್ನೂ ನಿಷೇಧಿಸಿ :- ಸರಕಾರೀ ನೌಕರರರಾಗಲಿ, ರಾಜಕೀಯ ನೇತಾರರಾಗಲಿ, ಅಥವಾ ಇತರ ಯಾರೇ ಆಗಲಿ ಸರಕಾರೀ ಆಸ್ಪತ್ರೆ, ಪ್ರಾ.ಆ.ಕೇ.ದ ಹೊರತಾದ ಯಾವುದೇ ಬಿಲ್ಲುಗಳನ್ನು ನೀಡಿದರೂ ಕೂಡಾ ಅದನ್ನು ಭರ್ತಿ ಮಾಡಿಕೊಡುವ ಕ್ರಮವನ್ನು ಕಡ್ಡಾಯವಾಗಿ ನಿಷೇಧಿಸಬೇಕಾಗಿದೆ. ಯಾವಾಗ ಅಂತಹ ಉಪಕ್ರಮವನ್ನು ಸರಕಾರ ಜಾರಿಗೆ ತರುವುದೋ ಆಗ ತನ್ನಿಂದ ತಾನಾಗಿ ಆಯಾ ಕ್ಷೇತ್ರದ ಸರಕಾರೀ ಆಸ್ಪತ್ರೆಗಳು, ಪ್ರಾ.ಆ.ಕೇ.ಗಳು ಬೇಡಿಕೆಗೆ ಬಂದಾವು. ಅದೇ ರೀತಿ ಆಯಾ ಕ್ಷೇತ್ರದ ಶಾಸಕರುಗಳು ಕೂಡಾ ಅಲ್ಲಲ್ಲಿ ಉತ್ತಮ ಡಾಕ್ಟರರು, ಸಹಾಯಕರನ್ನು ನೇಮಿಸಲು ಒತ್ತಾಯಿಸಿಯಾರು, ಒತ್ತಡ ಹೇರಿ ಕೆಲಸ ಮಾಡಿಸಿಕೊಂಡಾರು. ಅಂತಹ ದಿನಗಳು ಆದಷ್ಟು ಶೀಘ್ರ ಬರಲಿ ಎಂದು ನಮ್ಮ ಹಾರೈಕೆ.

ಶಾಸಕರು, ಅಧಿಕಾರಿಗಳು ತಂತಮ್ಮ ಕ್ಷೇತ್ರ/ ಸ್ಥಳದ ಸರಕಾರೀ ಆಸ್ಪತ್ರೆ, ಪ್ರಾ.ಆ.ಕೇ.ಗಳಲ್ಲಿ ಉತ್ತಮ ಯೋಗ್ಯ, ಪ್ರತಿಭಾವಂತ ಡಾಕ್ಟರರನ್ನು ನೇಮಿಸಿಕೊಳ್ಳುವುದರಿಂದ ತಮಗೇ ಲಾಭಕರ ಎಂದು ತಿಳಿದರೆ ಶ್ರೇಯಸ್ಕರ. ಈ ರೀತಿಯ ಮನಸ್ಥತಿ ಬೆಳೆಯಬೇಕಿದ್ದರೆ ಖಾಸಗೀ ಆಸ್ಪತ್ರೆಯ ಬಿಲ್ಲುಗಳನ್ನು ಭರ್ತಿ ಮಾಡಿಕೊಡುವ ಕ್ರಮವನ್ನು ಕಡ್ಡಾಯವಾಗಿ ನಿಷೇಧಿಸಬೇಕಾಗಿದೆ. ಎಂತಹ ಅನಿವಾರ್ಯತೆ ಇದ್ದರೂ ಕೂಡಾ ಸರಕಾರೀ ಆಸ್ಪತ್ರೆ, ಪ್ರಾ.ಆ.ಕೇ.ಗಳಿಗೇ ನುರಿತ, ನಿಷ್ಣಾತ ಡಾಕ್ಟರರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದರೆ, ಅವರ ಹೆಚ್ಚುವರಿ ಶುಲ್ಕವನ್ನು ನೀಡುವ ಕ್ರಮ ಜಾರಿಗೊಂಡರೆ, ಬೇರೆ ಕಡೆಯ ಬಿಲ್ಲುಗಳನ್ನು ಭರ್ತಿ ಮಾಡಿಸಿ ಕೊಡುವ ಅಗತ್ಯ ಏನಿರುತ್ತದೆ? ಹೀಗಾಗಿ ಈ ರೀತಿಯ ಪ್ರಯತ್ನಕ್ಕೆ ಸರಕಾರ, ಸರಕಾರದ ಮಂದಿ ಮುಂದಾಗಬೇಕಾಗಿದೆ.

ಸರಕಾರ, ಸರಕಾರದ ಮಂದಿ ಶಾಸಕರು ಪ್ರಯತ್ನಿಸಿದಲ್ಲಿ ಜನ ಸಾಮಾನ್ಯರ ಹಣವನ್ನು ಯುಕ್ತ ಬಳಕೆಗೆ ತರಬಹುದಾಗಿದೆ. ಆದರೆ ಅದಕ್ಕೆ ಅಂತಹ ಮನಸ್ಥತಿ ಎಲ್ಲರಲ್ಲೂ ಬರುವ ಅಗತ್ಯವಿದೆ. ಅಂತಹ ಮನಸ್ಥಿತಿ ಎಲ್ಲರಲ್ಲೂ ಮೂಡಿಬರಲಿ. ಸರಕಾರೀ ಆಸ್ಪತ್ರೆಗಳಲ್ಲಿಯ ಪರಿಸರ ಪರಿಶುದ್ಧಗೊಳ್ಳಲಿ, ಸ್ವಚ್ಛತೆಯು ನೆಲೆಗೊಂಡು ಸುಂದರ ಹಸುರೀಕರಣಗೊಂಡು ಹಚ್ಚ ಹಸಿರು ನೆಲೆಗೊಳ್ಳಲಿ. ಇರುವ ಉಪಕರಣಗಳು ಯೋಗ್ಯ ರೀತಿ ಬಳಕೆಯಾಗಿ ಸಾರ್ವಜನಿಕರೆಲ್ಲರ ಚಿಕಿತ್ಸೆಗೆ ಸದುಪಯೋಗಗೊಳ್ಳಲಿ. ಉತ್ತಮ, ಯೋಗ್ಯ ನಿಷ್ಣಾತ ಡಾಕ್ಟರರುಗಳು ಸರಕಾರೀ ಆಸ್ತತ್ರೆ, ಪ್ರಾ.ಆ.ಕೇ.ಗ¼ಲ್ಲಿ ಚಿಕಿತ್ಸಕರಾಗಿ, ಸಾರ್ವಕನಿಕರ ಆರೋಗ್ಯ ಉತ್ತಮಗೊಳ್ಳಲಿ, ಸಾರ್ವಜನಿಕರು ಹೆಚ್ಚು ಕಾಲ ಬದುಕುವಂತಾಗಲಿ. ಎಲ್ಲರಿಗೂ, ಎಲ್ಲ ಕಾಲಕ್ಕೂ ಸರ್ವರಿಗೂ ಉತ್ತಮ ಆರೋಗ್ಯ ಸರಕಾರ, ಸರಕಾರದ ಮಂದಿಯಿಂದ ಸರಕಾರೀ ಆಸ್ಪತ್ರ್ರೆ, ಪ್ರಾ.ಆ.ಕೇ.ಗಳಲ್ಲಿ ದೊರಕುವಂತಾಗಿ ಭಾರತ ಮಾತೆಯ ಮಕ್ಕಳು ಆರೋಗ್ಯ, ಸದೃಢ, ಶಕ್ತಿಶಾಲಿ ಬಲಾಢ್ಯರಾಗಲಿ ಎಂದು ನಮ್ಮ ಹಾರೈಕೆ. ಜೈ ಭಾರತಾಂಬೆ.

(ಲೇಖಕರು: ಹಿರಿಯ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು )