ಬಂಟ್ವಾಳ : ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಡಕಾಯಿತಿ ಪ್ರಕರಣಗಳಲ್ಲಿ  ಆರೋಪವನ್ನು ಎದುರಿಸುತ್ತಿದ್ದ ಆರು ಮಂದಿ ಆರೋಪಿಗಳಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಚಿಕ್ಕಮಗಳೂರಿನ ಕಡೂರು ಯರದಕೆರೆ ನಿವಾಸಿ ತಿಮ್ಮಯ್ಯ (55), ಹಾಸನ ಜಿಲ್ಲೆಯ ಇಡಬ್ಲ್ಯುಎಸ್ ಕುವೆಂಪು ನಗರದ ನಿವಾಸಿ ಜಯರಾಜ ಸ್ವಾಮಿ (45), ಹಾಸನದ ಕಟ್ಟಾಯಲ್ ಹೋಬಳಿಯ ನಿವಾಸಿ ಗಂಗಾ (32), ಶಿವಮೊಗ್ಗ ಜಿಲ್ಲೆಯ ಮತ್ತೂರು ನಿವಾಸಿ ನೇತ್ರಾ (35), ಶಿವಮೊಗ್ಗದ ಶಂಕರ್ ಸರ್ಕಲ್ ಸಮೀಪದ ರಾಜೇಂದ್ರ (65), ಬೆಳ್ತಂಗಡಿಯ ಬಳ್ಳಮಂಜ ಅಶೋಕ್ ನಗರದ ನಿವಾಸಿ ಬಾಬು ಯಾನೆ ರುದ್ರ ಯಾನೆ ರಾಜೇಶ್(45), ಶಿಕ್ಷೆಗೆ ಒಳಗಾದ ಆರೋಪಿಗಳಾಗಿದ್ದಾರೆ. ಈ ಪ್ರಕರಣದ ಮತ್ತೋರ್ವ ಆರೋಪಿಯಾದ ಅರಸೀಕೆರೆ ಬೆಳವತ್ತ ಹಳ್ಳಿಯ ನಿವಾಸಿ ಸೋಮೇಶ್ (50) ವಿಚಾರಣಾ ಸಮಯದಲ್ಲಿ ಮೃತಪಟ್ಟಿದ್ದ.

2013ರಲ್ಲಿ  ಡಕಾಯಿತಿಗೆ ಸಂಚು ಹೂಡಿದ್ದ ಆರೋಪಿದಲ್ಲಿ ಆಗಿನ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಆಗಿದ್ದ ಮಹೇಶ್ ಪ್ರಸಾದ್ ಮತ್ತವರ ತಂಡ  ಖಚಿತ ಮಾಹಿತಿಯ ಮೇರೆಗೆ  ತಂಡ  ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ‌  ದಸ್ತಗಿರಿ ಮಾಡಿ  ವಿಚಾರಣೆಗೊಳಪಡಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಠಾಣೆ, ಬಂಟ್ವಾಳ ನಗರ ಠಾಣೆ (ಎರಡು ಪ್ರಕರಣ), ಬೆಳ್ತಂಗಡಿ ಠಾಣೆ,  ಪುಂಜಾಲಕಟ್ಟೆ ಠಾಣೆ, ಸುಳ್ಯ ಠಾಣೆ ಹಾಗೂ ಉಡುಪಿ ಜಿಲ್ಲೆಯ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದರು.

ಈಸಂದರ್ಭ ಆರೋಪಿಗಳಿಂದ ಸುಮಾರು 20 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದಕೊಳ್ಳಲಾಗಿತ್ತು.ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾಗಿದ್ದರಿಂದ ಆರೋಪಿಗಳಿಗೆ ಎರಡು ವರ್ಷ ಸಾದಾ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ವಿಚರಣಾ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ನೇತ್ರಾಳನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು  ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.