ಪ್ರಪಂಚದ ಬಲಾಢ್ಯ ದೇಶಗಳಿಗೆ ಸರಸಮನಾಗಿ ನಾವಿಂದು ಹೆಜ್ಜೆ ಇಡುತ್ತಿದ್ದೇವೆ. ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಕೂಡಾ ನಾವಿಂದು ಏರುಗತಿಯಲ್ಲಿ ಮುಂದಡಿ ಇಡುತ್ತಿದ್ದೇವೆ. ಇದೆಲ್ಲದಕ್ಕೆ ಮುಖ್ಯ ಕಾರಣ ಭಾರತ ದೇಶಕ್ಕೆ ದೊರೆತ ಸಮರ್ಥ ಹಾಗೂ ದೂರದರ್ಶಿತ್ವದ ನಾಯಕತ್ವ. ಅಂತಹ ನಾಯಕನಿಗೆ ಸರಿಸಮನಾಗಿ, ಬೆಂಬಲವಾಗಿ ಪೂರಕ ವಾತಾವರಣವನ್ನು ನಿರ್ಮಿಸುತ್ತಿರುವ ಪಡೆಯ ಪ್ರತಿಯೊಬ್ಬರೂ ಸಮರ್ಥವಾಗಿ ತಂತಮ್ಮ ಕ್ಷೇತ್ರಗಳನ್ನು ಪ್ರಗತಿ ಪೂರಕವಾಗಿ ಮುನ್ನಡೆಸುತ್ತಿದ್ದಾರೆ. ಪ್ರಪಂಚದ ಎಲ್ಲ ದೇಶಗಳೂ ಈ ಔನ್ನತ್ಯವನ್ನು ವೀಕ್ಷಿಸಿ ಉಘೇ ಉಘೇ ಎನ್ನುತ್ತಿರುವುದರಿಂದ ಹಿಂದುಳಿದ ದೇಶಗಳು ಭಾರತವನ್ನು ಆಶಾಕಿರಣದಂತೆ ಸ್ವೀಕರಿಸುತ್ತಿವೆ.

ಆರ್ಥಿಕ ಬೆಳವಣಿಗೆ:- ಕೈಗಾರಿಕೆಗಳ ಬೆಳವಣಿಗೆಯ ಒಟ್ಟೊಟ್ಟಿಗೆ ಈಗಿನ ಸರಕಾರ ಕೈಗೊಂಡ ಕ್ರಮದಿಂದಾಗಿ ಯುವÀಜನರು ತಮ್ಮದೇ ಸ್ವಂತ ಹಾಗೂ ನುರಿತ ಉದ್ದಿಮೆಯನ್ನು ಸ್ಥಾಪಿಸಲು ಮುಂದೆ ಬರುತ್ತಿದ್ದಾರೆ. ತನ್ಮೂಲಕ ಇತರರಿಗೆ ಉದ್ಯೋಗ ನೀಡುವ ಊದ್ಯೋಗದಾತರಾಗಿಯೂ ಬೆಳೆಯುತ್ತಿದ್ದಾರೆ. ಇದರಿಂದಾಗಿ ಯುವಕರು ಉದ್ದಿಮೆಯ ಕೌಶಲ್ಯವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಒಂದು ವಿಧದಲ್ಲಿ ಇದು ಕೌಶಲ್ಯ ವೃದ್ಧಿಗೆ ಕಾರಣವಾಗುತ್ತಿದ್ದರೆ ಇನ್ನೊಂದು ವಿಧದಲ್ಲಿ ನಿರುದ್ಯೋಗಿಗಳ ಸಂಖ್ಯೆ ಕಡಿಮೆಗೊಳ್ಳುತ್ತಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಾಣುತ್ತಿದ್ದರೂ ಕೂಡಾ ಕೌಶಲ್ಯ ವೃದ್ಧಿಯು ಜನರ ಸ್ವಂತ ನಿಷ್ಣಾತತೆಗೆ ಉತ್ತಮ ಅವಕಾಶವನ್ನು ಒದಗಿಸುತ್ತಿದೆ. ಈ ನಿಷ್ಣಾತತೆ ನೂತನ ವಸ್ತುಗಳ/ ಉತ್ಪಾದನೆಗಳ ಆವಿಷ್ಕಾರಕ್ಕೆ ಪ್ರೇರಣೆಯನ್ನು ನೀಡುತ್ತಿದೆ.

ಭಾರತದ್ದೇ ವಸ್ತುಗಳಿಗೆ ಪ್ರೋತ್ಸಾಹ ನೀಡುತ್ತಿರುವುದರ ಕಾರಣದಿಂದ ಪರಿಣಿತ ಭಾರತೀಯರು ಇಂದು ಭಾರತಕ್ಕೆ ಬರುತ್ತಿದ್ದಾರೆ. ವಿದೇಶದಲ್ಲಿ ವಿದ್ಯಾಭ್ಯಾಸ ಪಡೆದ ತರುವಾಯ ಭಾರತಕ್ಕೆ ಹಿಂದಿರುಗಿ ಭಾರತೀಯ ವಸ್ತು, ನಿರ್ಮಾಣದಲ್ಲಿ ತೊಡಗುತ್ತಿದ್ದಾರೆ. ಇದರಿಂದಾಗಿ ಭಾರತದ ಸಂಪತ್ತು ಭಾರತದಲ್ಲೇ ಉಳಿಯುವಂತಾಗಿದೆ. ಭಾರತದ ಕಚ್ಚಾ ವಸ್ತು ಭಾರತದಲ್ಲೇ ವಸ್ತು ನಿರ್ಮಾಣಕ್ಕೆ ಉತ್ಪನ್ನವಾಗಿ ದೊರಕಿ ವಿದೇಶಗಳಿಗೆ ತಯಾರಾದ ವಸ್ತುಗಳು ರವಾನೆಯಾಗಿ ಸಂಪೂರ್ಣ ಲಾಭ ಭಾರತಕ್ಕೇ ಸಿಗುವಂತಾಗಿದೆ. ಇದು ಮೇಕ್ ಇನ್ ಇಂಡಿಯಾದ ಶ್ರೇಷ್ಠತೆ. ಮೇಕ್ ಇನ್ ಇಂಡಿಯಾದಿಂದ ಭಾರತದ ಘನತೆ, ಗೌರವ, ಶ್ರೇಷ್ಠತೆ ಹೆಚ್ಚಿ ಕೌಶಲ ಭರಿತರ ನಾಡಾಗುವದಕ್ಕೆ ಸಾಧ್ಯವಾಗಿದೆ. ಆದರೆ ಅದಕ್ಕಾಗಿ ಭಾರತದ ಸೌಂದರ್ಯವನ್ನು ಹಾಳುಮಾಡಬಾರದು. ನಮ್ಮ ದೇಶ, ನಮ್ಮ ಪರಿಸರ ಸದಾಕಾಲ ಶುದ್ಧ, ಪರಿಶುದ್ಧ, ಆರೋಗ್ಯವಂತವಾಗಿರಬೇಕು.

ಪರಿಸರ, ಪ್ರಾಕೃತಿಕ ಸಂಪನ್ಮೂಲ ಕಾಪಾಡಿ: - ಮನುಷ್ಯ ಈ ಪರಿಸರದಲ್ಲಿ, ಈ ಭೂಮಿಯಲ್ಲಿ, ಈ ಪಂಚಭೂತಗಳಲ್ಲಿ ಉಳಿಯಬೇಕಿದ್ದರೆ ನಮ್ಮ ಪರಿಸರ ಹಾಗೂ ಪ್ರಕೃತಿಯನ್ನು ಉಳಿಸಿಕೊಳ್ಳಬೇಕಾಗಿದೆ. ನಮ್ಮಲ್ಲಿರುವ ಪಾÀ್ರಕೃತಿಕ ಸಂಪನ್ಮೂಲಗಳನ್ನು ವಿದೇಶೀಯರು ನಮ್ಮಲ್ಲಿಂದ ಕೊಳ್ಳೆ ಹೊಡೆದುಕೊಂಡು ಹೋಗಿದ್ದರೂ ಕೂಡಾ, ಭಾರತ ಮಾತೆ ನಮಗೆ ಎಂದೆಂದೂ ಅಳಿಯದಷ್ಟು ಸಂಪತ್ತನ್ನು ನೀಡಿದ್ದಾಳೆ. ಅದರಿಂದಾಗಿ ಭಾರತ ಮಾತೆ ಸದಾ ವಂದನೀಯಳು. ಅಂತಹ ನಮ್ಮ ಪ್ರಾಕೃತಿಕ ಸಂಪನ್ಮೂಲವನ್ನು ನಾವು ಸದಾ ರಕ್ಷಿಸಿಕೊಳ್ಳ ಬೇಕಾಗಿದೆ. ಅದನ್ನು ಕಾಪಾಡುವ ಆಡಳಿತ ವ್ಯವಸ್ಥೆ ನಮ್ಮಲ್ಲಿರ ಬೇಕಾಗಿದೆ.

ಮನುಷ್ಯ ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಈಗಾಗಲೇ ಸಾಕಷ್ಟು ಪ್ರಕೃತಿಕ ಸಂಪನ್ಮೂಲವನ್ನು, ಗಿಡ, ಮರ, ಪ್ರಕೃತಿಯನ್ನು ಖಾಲಿ ಮಾಡಿಯಾಗಿದೆ. ಅದರಿಂದಾಗಿ ಪ್ರಕೃತಿಯÀ ಸಮತೋಲನವೇ ಏರುಪೇರಾಗಿದೆ. ಕಾಲಕಾಲಕ್ಕೆ ಮಳೆ-ಬೆಳೆಗಳು ಆಗುತ್ತಿಲ್ಲ. ಅದುದರಿಂದ ಕನಿಷ್ಠ ಪಕ್ಷÀ ಈಗ ಉಳಿದಿರುವ ಪ್ರಕೃತಿ, ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಿ ಜಾಗರೂಕತೆಯಿಂದ ಉಪಯೋಗಿಸುವ ಕ್ರಮವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಯುವಜನಾಂಗಕ್ಕೆ, ಮಕ್ಕಳಿಗೆ ಸೂಕ್ತ ತಿಳಿವಳಿಕೆ ನೀಡುವ ಪ್ರಯತ್ನ ಆಗಬೇಕಾಗಿದೆ. ಇಂದಿನ ಮಕ್ಕಳಲ್ಲಿ ಗಿಡ-ಮರ-ಪ್ರಕೃತಿ, ಪ್ರಾಕೃತಿಕ ಸಂಪತ್ತನ್ನು ಉಳಿಸುವ ಮನಸ್ಸನ್ನು ಬೆಳೆಸಿದಲ್ಲಿ, ಇರುವ ಖಾಲಿ ಪ್ರದೇಶಗಳಲ್ಲಿ ಬೇರೆ ಬೇರೆ ಜಾತಿಯ ಮರ-ಗಿಡಗಳನ್ನು ಬೆಳೆಸಲು ಪ್ರೇರೇಪಿಸಿದಲ್ಲಿ ಮುಂದಿನ ದಿನಗಳಿಗೆ ಕಾಡು-ಮೇಡು ಉಳಿದೀತು.

ಆರ್ಥಿಕ ಬೆಳವಣಿಗೆಗೆ ಸರಿಸಮನಾಗಿ ಜನಸಂಖ್ಯಾ ಬೆಳವಣಿಗೆ ಆಗುತ್ತಿರುವುದರಿಂದ ಪ್ರಾಕೃತಿಕ ಸಂಪತ್ತು ಅಷ್ಟೇ ಶೀಘ್ರವಾಗಿ ಕ್ಷೀಣಿಸುತ್ತಿದೆ. ಪ್ರಾಕೃತಿಕ ಸಂಪತ್ತು ಕ್ಷೀಣಿಸದಂತೆ ಕಾಪಾಡಬೇಕಾದರೆ ಪ್ರಾಕೃತಿಕ ಸಂಪತ್ತಿನ ಬದಲಿಗೆ ಪರ್ಯಾಯ ವಸ್ತುಗಳ ಅಥವಾ ಮೂಲಗಳ ಉಪಯೋಗವನ್ನು ಹೆಚ್ಚಿಸಬೇಕಾಗಿದೆ. ಉದಾಹರಣೆಗೆ ಕಟ್ಟಿಗೆಯ ಬದಲು ನೈಸರ್ಗಿಕ ಅನಿಲ, ಸೌರಶಕ್ತಿಯ ಉಪಯೋಗ ಹೆಚ್ಚಿಸಿದಂತೆ ಎಲ್ಲ ವಿಭಾಗಗಳಲ್ಲೂ ಅಂತಹ ಪರ್ಯಾಯ ಮಾರ್ಗಗಳನ್ನು, ವಸ್ತುಗಳನ್ನು ಕಂಡುಕೊಂಡು ಉಪಯೋಗಿಸ ಬೇಕಾಗಿದೆ. ಈ ಪ್ರಕಾರದ ಉಪಕ್ರಮದಿಂದ ಪ್ರಾಕೃತಿಕ ಸಂಪತ್ತು ಉಳಿದು ಹೆಚ್ಚು ಸಮಯ ಕಾಪಿಡಬಹುದಾಗಿದೆ.

ಪರಿಸರ ಮಾಲಿನ್ಯ ನಿಯಂತ್ರಣ :- ಏರುಗತಿಯಲ್ಲಿ ದಾಪುಗಾಲಿಡುತ್ತಿರುವ ಭಾರತದ ಪರಿಸರ ಮಾಲಿನ್ಯ ಪ್ರಮಾಣವೂ ಅಷ್ಟೇ ಏರುಗತಿಯಲ್ಲಿ ಸಾಗುತ್ತಿರುವುದು ಕಳವಳ ದಿಗ್ಭ್ರಮೆ ಹುಟ್ಟಿಸುತ್ತಿದೆ. ನೂತನ ನಗರಗಳ ನಿರ್ಮಾಣದೊಂದಿಗೇ ಆ ನಗರಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ಬೆಟ್ಟದ ಗಾತ್ರಕ್ಕೆ ಬೆಳೆಯುತ್ತಿದೆ. ಒಂದು ದಿನ ತ್ಯಾಜ್ಯ ಸಂಗ್ರಹಿಸುವವರು, ಶುಚಿಗೊಳಿಸುವವರು ಇಲ್ಲವೆಂದಾದಲ್ಲಿ ನಗರಗಳು, ಪಟ್ಟಣಗಳು ಗಬ್ಬೆದ್ದು ಹೋಗುತ್ತವೆ. ತ್ಯಾಜ್ಯ ಸಂಗ್ರಹಿಸುವವರು, ಶುಚಿಗೊಳಿಸುವವರು ಚಳುವÀಳಿ ಹೂಡಿದರಂತೂ ನಗರದ ವಾಸ ವಾಸನಾಮಯಗೊಂಡು, ವಾಸವೇ ಬೇಡ ಎನ್ನುವಷ್ಟರ ಮಟ್ಟಕ್ಕೆ ಇಳಿಯಲಿದೆ. ಹೀಗಿದ್ದರೂ ಕೂಡಾ ಜನ ಅದೇನೋ ನಗರಕ್ಕೇ ಸದಾ ಎಡತಾಕುತ್ತಿದ್ದಾರೆ. ಸುಂದರ, ಪ್ರಾಕೃತಿಕ ಪರಿಸರವು- ಹಳ್ಳಿ, ಬೆಟ್ಟ, ಗುಡ್ಡಗಳಲ್ಲಿದ್ದರೂ ಇಂದಿನ ಮಂದಿಗೆ ಅದೆಲ್ಲವೂ ಕೇವಲ ವೀಕೆಂಡ್ ನ ತಾಣವಾಗಿ ಪರಿವರ್ತನೆಗೊಂಡಿದೆ. ಅಂತಹ ಸುಂದರ ಪರಿಸರವನ್ನು ಬಿಟ್ಟು ನಾಲ್ಕು ಅಕ್ಷರÀ ಕಲಿತಾಕ್ಷಣ ಊರನ್ನು ಬಿಟ್ಟು ಅದೇಕೋ ನಗರಗಳತ್ತ ಆಕರ್ಷಿತರಾಗಿ ಕಳೆದುಹೋಗುತ್ತಿದ್ದಾರೆ. ಈ ವಿಚಾರದಲ್ಲಿ ಹುಡುರಷ್ಟೇ, ಹುಡುಗಿಯರೂ ಮುಂದು ಅಥವಾ ಸ್ವಲ್ಪ ಹೆಚ್ಚೇ. ಏಕೆಂದರೆ ಹಳ್ಳಿಯ ಹುಡುಗರತ್ತ ಅವರು ಕಣ್ಣೆತ್ತಿಯೂ ನೋಡುವುದಿಲ್ಲ. ಮದುವೆಯಾಗುವುದಕ್ಕೂ ಸುತರಾಂ ಒಪ್ಪುವುದೇ ಇಲ್ಲ. ಈ ರೀತಿಯ ಪರಿಸ್ಥಿತಿಯಲ್ಲಿ ಯಾರನ್ನು ತಾನೇ ದೂರೋಣ?

ಅದೇನೇ ಇರಲಿ, ಪರಿಸರದ ಮಲಿನತೆಯನ್ನು ಕಡಿಮೆಗೊಳಿಸುವ ಕೆಲವಾರು ಉಪಾಯಗಳ ಮೂಲಕ ನಗರ , ಪಟ್ಟಣ ಪ್ರದೇಶಗಳ ಸೌಂದರ್ಯವನ್ನು ಉಳಿಸಬೇಕಾಗಿದೆ. ಹಳ್ಳಿ, ಬೆಟ್ಟ, ಗುಡ್ಡಗಳು ಕೂಡಾ ತಮ್ಮ ಪ್ರಾಕೃತಿಕ ಸೌಂದರ್ಯವನ್ನು ಉಳಿಸಿಕೊಂಡು ಅತಿಥಿಗಳ ಮಾಲಿನ್ಯದಿಂದ ಬಚಾವಾಗಬೇಕಾಗಿದೆ. ಕನಿಷ್ಠ ಪಕ್ಷ ವೀಕೆಂಡ್ ನಲ್ಲಿ ಹೋದ ಕಡೆಯಲ್ಲಾದರೂ, ಮೋಜು ಮಸ್ತಿಯ ಸಮಯದಲ್ಲಿ – ಕೊಳಕು, ಕಶ್ಮಲಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ನಾವೂ ಕ್ರಮವಹಿಸಿ, ಕಂಡವರಿಗೂ ತಿಳಿ ಹೇಳಿ ಸ್ವಚ್ಛತೆಯ ಪ್ರಯತ್ನ ಮಾಡೋಣ. ಅಂತಹ ಮನಸ್ಸು ಎಲ್ಲ ಭಾರತೀಯರಲ್ಲಿ ಬೆಳೆಯಬೇಕಾಗಿದೆ. ಭಾರತ ಮಾತೆಯ ಮಡಿಲು ಉತ್ತಮ ಸ್ವಚ್ಛತೆಯಿಂದ ಕಂಗೊಳಿಸಲಿ ಎಂದು ನಮ್ಮೆಲ್ಲರ ಹಾರೈಕೆ. ಜೈ ಭಾರತ ಮಾತೆ.

ಲೇಖನ: ರಾಯೀ ರಾಜ ಕುಮಾರ್, ಮೂಡುಬಿದಿರೆ.(ಲೇಖಕರು: ಹಿರಿಯ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರು, ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು)