ಮಂಗಳೂರು: ರಾಷ್ಟ್ರಾದ್ಯಂತ ನರೇಂದ್ರ ಮೋದಿ ಅಲೆಯಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಕರ್ನಾಟಕದಲ್ಲಿ 20 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಷ್ಟ್ರದ ಪರವಾದ ಚಿಂತನೆಯುಳ್ಳ ಜನರು ಅಧಿಕ ಪ್ರಮಾಣದಲ್ಲಿ ಬಂದು ಮತವನ್ನು ಚಲಾಯಿಸುವುದು ಖಚಿತ ಎಂದು ಖ್ಯಾತ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಟೀಮ್ ಮೋದಿ ಕಳೆದ ನಾಲ್ಕೂವರೆ ತಿಂಗಳಿನಿಂದ ಸತತ ಮೋದಿ ಪರವಾದ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಹಳ್ಳಿ ಹಳ್ಳಿಯಲ್ಲೂ ಮೋದಿ ದೂತರನ್ನು ನೇಮಕ ಮಾಡಲಾಗಿದೆ. ಇವರೆಲ್ಲಾ ಜನರನ್ನು ಮೋದಿ ಪರ ಒಗ್ಗೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಇಂದು ದೇಶದ ಮೂಲೆ ಮೂಲೆಯ ಜನರಿಗೂ ರಾಷ್ಟ್ರೀಯ ಸುದ್ದಿಗಳು ಇಂದು ಕ್ಷಣಾರ್ಧದಲ್ಲೇ ಸಿಗುತ್ತಿವೆ. ಹಿಂದೆಲ್ಲಾ ಈ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಈಗಿನ ಜನರು ರಾಷ್ಟ್ರದ ಕುರಿತಾದ ವಿಷಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ದೇಶದಲ್ಲಿ ನಡೆಯುವ ಪ್ರತಿ ಬದಲಾವಣೆಯನ್ನೂ ಗ್ರಹಿಸುತ್ತಾರೆ. ಮತದಾರರೂ ಮೊದಲು ರಾಷ್ಟ್ರ, ಬಳಿಕ ಪಕ್ಷ, ಬಳಿಕ ಅಭ್ಯರ್ಥಿಯನ್ನು ಮುಂದಿಟ್ಟು ಮತ ಚಲಾಯಿಸಬೇಕು. ಮತ ಚಲಾಯಿಸುವಾಗ ರಾಷ್ಟ್ರ ಎತ್ತರವಾದ ಸ್ಥಾನದಲ್ಲಿರಬೇಕು. ರಾಷ್ಟ್ರ ಹಿತದ ಪರ ನಮ್ಮ ಮತವಿರಬೇಕು. ಮೋದಿಯವರಿಗೆ ಎಂತಹ ಸಂಸದನನ್ನೂ ದುಡಿಸಿಕೊಳ್ಳುವ ಸಾಮರ್ಥ್ಯವಿದೆ' ಎಂದರು.

'ದೇಶವನ್ನು ಒಡೆಯುವ ಪ್ರಣಾಳಿಕೆಯನ್ನು ನೀಡುವ ಮೂಲಕ ಕಾಂಗ್ರೆಸ್ ತನ್ನ ಸೋಲನ್ನು ತಾನೇ ಬರೆದುಕೊಂಡಿದೆ. ಅವರ ಬಗ್ಗೆ ಒಲವು ಹೊಂದಿದವರ ನಂಬಿಕೆ ಕೂಡ ಅವರ ಪ್ರಣಾಳಿಕೆ ನೋಡಿದ ಬಳಿಕ ಛದ್ರಗೊಂಡಿದೆ. ದೇಶದ್ರೋಹದ ಕಾನೂನನ್ನು ಕೈಬಿಡುತ್ತೇವೆ, ಶಸ್ತ್ರಾಸ್ತ್ರಪಡೆಗಳ ವಿಶೇಷ ಅಧಿಕಾರವನ್ನು ರದ್ದುಪಡಿಸುತ್ತೇವೆ ಎಂದು ಅವರು ನೀಡಿರುವ ಭರವಸೆಗಳು ನಿಜಕ್ಕೂ ಅಪಾಯಕಾರಿಯಾಗಿದೆ' ಎಂದರು.

'ಕಾಂಗ್ರೆಸ್ ಪಕ್ಷದ 72 ಸಾವಿರ ರೂಪಾಯಿಗಳನ್ನು ನೀಡುವ ನ್ಯಾಯ್ ಯೋಜನೆ ವಾಸ್ತವವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವೇ ಇಲ್ಲದ ಭರವಸೆಯಾಗಿದೆ. ಹೇಗೆ ಅದನ್ನು ಅನುಷ್ಠಾನಗೊಳಿಸುತ್ತಾರೆ ಎಂಬುದಕ್ಕೆ ಯಾವೊಬ್ಬ ಕಾಂಗ್ರೆಸ್ ಮುಖಂಡನ ಬಳಿಯೂ ಉತ್ತರವಿಲ್ಲ. ಇತ್ತೀಚಿಗೆ ಪಿ. ಚಿದಂಬರಂ ಅವರು, ಜಿಡಿಪಿ ಬೆಳವಣಿಗೆ ಕಾಣುತ್ತಿರುವುದರಿಂದ ಮತ್ತು ತೆರಿಗೆ ಮೂಲ ವಿಸ್ತರಣೆಗೊಂಡಿರುವುದರಿಂದ ನ್ಯಾಯ್ ಯೋಜನೆ ಅನುಷ್ಠಾನ ಸಾಧ್ಯವಾಗುತ್ತದೆ ಎನ್ನುವ ಮೂಲಕ ಬಿಜೆಪಿ ಸರ್ಕಾರ ಸಾಧನೆಯನ್ನು ಮಾಡಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸ್ವತಃ ಗೊಂದಲದಲ್ಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ'  ಎಂದರು.

'ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪೂರಕವಾದ ಸನ್ನಿವೇಶಗಳು ಇವೆ,  ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಕಲಂ 35ಎ ಮತ್ತು 370ಯನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಬಿಜೆಪಿಯ ಪ್ರಯತ್ನ ಶ್ಲಾಘನೀಯವಾಗಿದೆ. ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ನಿಷೇಧ ಮತ್ತು ಯಾಸಿನ್ ಮಲಿಕ್ ಬಂಧನ ಈ ನಿಟ್ಟಿನಲ್ಲಿ ಒಂದು ವ್ಯಾಪಕವಾದ ಹೆಜ್ಜೆ' ಎಂದರು.

'ಸೇನೆಯನ್ನು ಆಧುನೀಕರಿಸುವ ಮತ್ತು ಸಬಲೀಕರಣಗೊಳಿಸುವ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಹೆಮ್ಮೆಗೊಳಿಸುವಂತಹುದು. ಸಮ್ಮಾನ್ ನಿಧಿಯನ್ನು ಎಲ್ಲಾ ರೈತರಿಗೂ ವಿಸ್ತರಿಸುವುದು ಮತ್ತು ರೈತರಿಗೆ ಪಿಂಚಣಿ ಒದಗಿಸುವ ಭರವಸೆಯನ್ನೂ ಬಿಜೆಪಿ ನೀಡಿದ್ದು ಅತ್ಯಂತ ಪ್ರಮುಖ ವಿಷಯವಾಗಿದೆ' ಎಂದರು.

ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕತೆ ಬೆಳವಣಿಗೆ ಕಂಡಿದೆ, ಪಾಕಿಸ್ಥಾನ ದಾರಿದ್ರ್ಯದ ಮಟ್ಟಕ್ಕೆ ತಲುಪಿದೆ ಎಂದರು.

'ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಡಬೇಕೆಂಬ ಕಾರಣಕ್ಕೋ ಅಥವಾ ಕಾಂಗ್ರೆಸ್ ಅಣತಿಯಂತೆಯೋ ಇಮ್ರಾನ್ ಖಾನ್ ಅವರು ಮೋದಿ ಅಧಿಕಾರಕ್ಕೆ ಬಂದರೆ ಮಾತ್ರ ಶಾಂತಿ ಮಾತುಕತೆ ಸಾಧ್ಯ ಎಂದಿದ್ದಾರೆ. ಕೆಲ ದಿನಗಳ ಹಿಂದೆ ಅವರು ಬೇರೆಯದ್ದೇ ಭಾಷೆ ಮಾತನಾಡುತ್ತಿದ್ದರು' ಎಂದರು.