ಉಜಿರೆ.ಮಾ.27: “ದುಶ್ಚಟಗಳಲ್ಲಿ ಮದ್ಯಪಾನ ಬಹಳ ಕಠಿಣವಾದದ್ದು. ತಮ್ಮಲ್ಲಿರುವ ಯೋಗ್ಯತೆಗೆ ಕುತ್ತು ತರಿಸಿ ಮನುಷ್ಯನ ಮೂಲಸ್ವರೂಪ, ಸ್ವಭಾವ ಮರೆಮಾಚಿಸುವಂತೆ ಮಾಡುತ್ತದೆ. ಸೂರ್ಯನಿಗೆ ಮೋಡ ಆವರಿಸಿದಾಗ ಸೂರ್ಯನ ಶಕ್ತಿ ಅಥವಾ ಬೆಳಕು ಹೇಗೆ ಅರಿವಿಗೆ ಬರುವುದಿಲ್ಲವೋ ಹಾಗೆಯೇ ಮದ್ಯಪಾನ ಮತ್ತು ಯಾವುದೇ ದುಶ್ಚಟಗಳು ಇದ್ದಂತಹ ವ್ಯಕ್ತಿಯು ಕೂಡಾ ಅವನ ನಿಜವಾದ ಶಕ್ತಿಯನ್ನು ಮರೆತು ಅಮಲಿನ ದಾಸನಾಗಿ ಕುಟುಂಬ ಹಾಗೂ ಸಮಾಜದಲ್ಲಿ ಅಗೌರವದಿಂದ ಬಾಳುವಂತಾಗುತ್ತದೆ. ಆದುದರಿಂದ ಈ ಚಟದಿಂದ ಎಚ್ಚೆತ್ತು ಮನಪರಿವರ್ತನೆ ಮಾಡಿಕೊಂಡು ಸುಖ ಜೀವನ ನಡೆಸುವಂತಾಗಲು ಮದ್ಯವರ್ಜನ ಶಿಬಿರಗಳ ಮೂಲಕ ಪ್ರೇರಣೆ ನೀಡಲಾಗುತ್ತದೆ. ಸುಖ-ಸಂತೋಷವನ್ನು ಹಣದಿಂದ ಅಳೆಯಲಾಗುವುದಿಲ್ಲ. ಉತ್ತಮವಾದ ಜೀವನದಿಂದ ಮಾತ್ರ ಇದನ್ನು ಸಾಧಿಸಬಹುದು. ಯಾವುದೇ ಆಕರ್ಷಣೆ, ಒತ್ತಡಗಳಿಗೆ ಬಲಿಬೀಳದೆ ಯೋಗ್ಯತೆಯ ಜೀವನ ನಡೆಸಿ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 173ನೇ ವಿಶೇಷ ಶಿಬಿರದ 89 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ವರ್ಷಂಪ್ರತಿ 150 ಶಿಬಿರಗಳು ನಡೆಸಲಾಗುತ್ತಿದ್ದು,10 ಸಾವಿರಕ್ಕೂ ಮಿಕ್ಕಿದ ಜನರು ವಾರ್ಷಿಕವಾಗಿ ಪಾನಮುಕ್ತರಾಗುತ್ತಾರೆ. ಇಂದು ಈ ಶಿಬಿರಗಳಿಗೆ ಯಾವುದೇ ಒತ್ತಡವಿಲ್ಲದೆ ಸ್ವ ಪ್ರೇರಣೆಯಿಂದಲೇ ಜನರು ಸೇರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿಶೇಷ ಶಿಬಿರದಲ್ಲಿ ರಾಜ್ಯದ ಎಲ್ಲಾ ಕಡೆಗಳಿಂದಲೂ ವ್ಯಸನಿಗಳು ದಾಖಲಾಗಿ ಜೀವನ ಸುಧಾರಿಸಿಕೊಳ್ಳುತ್ತಿದ್ದಾರೆ. ಶಿಬಿರದಲ್ಲಿ ಪರಿವರ್ತನೆಯ ಬೋಧನೆಗಳು, ವೈಯಕ್ತಿಕ ಸಲಹೆ, ಯೋಗ, ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಯಲ್ಲಿ ಮನೋವೈದ್ಯಕೀಯ ವಿಭಾಗದ ವೈದ್ಯರು ಮತ್ತು ಸಲಹೆಗಾರರ ಚಿಕಿತ್ಸೆ ಮತ್ತು ಸ್ಪಂದನೆಯು ಮನಪರಿವರ್ತನೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಮುಖ್ಯ ನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್.ರವರು ತಿಳಿಸಿದರು. ಶಿಬಿರದಲ್ಲಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿಗಳಾದ ಶ್ರೀ ಮೋಹನ್ ಕೆ., ಶಿಬಿರಾಧಿಕಾರಿ ದಿನೇಶ್ ಮರಾಠಿ, ಆರೋಗ್ಯ ಸಹಾಯಕಿ ಸೌಮ್ಯ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ:04.04.2022 ರಿಂದ ಪ್ರಾರಂಭವಾಗಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.