ಚಿತ್ರ / ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ:  ಗೌಡ ಸಾರಸ್ವತ್ ಬ್ರಾಹ್ಮಣ್ ಸಭಾ ದಹಿಸರ್ ಬೊರಿವಲಿ (ರಿ.) ವಾರ್ಷಿಕವಾಗಿ ಸಂಭ್ರಮಿಸುವಂತೆ ಈ ಬಾರಿ ಹದಿನೆಂಟನೇ ವಾರ್ಷಿಕ ನವರಾತ್ರಿ ಉತ್ಸವ 2025 ನ್ನು ಜಿಎಸ್‌ಬಿ ನವರಾತ್ರಿ ಉತ್ಸವ್‌ವನ್ನು (ದಹಿಸರ್ ದಸರಾ) ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಾಬ್ದಿ ಆರಾಧನಾ ಮಹೋತ್ಸವ 2025-26 ಶುಭಾವಸರದಿ ಸ್ವಾಮೀಜಿಗಳ ಕೃಪೆ ಮತ್ತು ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಶುಭಾಶೀರ್ವಚನಗಳೊಂದಿಗೆ ಒಂಬತ್ತು ದಿನಗಳನ್ನಾಗಿಸಿ ಸಂಭ್ರಮಿಸಲಿದ್ದು ಸೋಮವಾರ ಬೆಳಿಗ್ಗೆ ಶುಭ ಮುಹೂರ್ತದಲ್ಲಿ ಚಾಲನೆಯನ್ನೀಡಿತು.

ಇಂದಿನಿಂದ ಅ. 02ರ ಗುರುವಾರ ವಿಜಯದಶಮಿ ವರೆಗೆ ದಹಿಸರ್ ಪೂರ್ವದ ಎನ್.ಎಲ್ ಕಾಂಪ್ಲೆಕ್ಸ್ ಅಲ್ಲಿನ ಜಿಎಸ್‌ಬಿ ಗಾರ್ಡನ್‌ನಲ್ಲಿ (ಸಾರಸ್ವತ ಕಲ್ಚರಲ್ ಮತ್ತು ರಿಕ್ರಿಯೇಷನ್ ಸೆಂಟರ್) ನಡೆಸಲ್ಪಡುವ ಶರನ್ನವರಾತ್ರಿಗೆ ಸಜ್ಜುಗೊಳಿಸಿದ ಮಾಧವೇಂದ್ರ ಸಭಾ ಮಂಟಪದಲ್ಲಿ ರಚಿತ ಪುಷ್ಪಾಲಂಕೃತ ಭವ್ಯ ಮಂಟಪದಲ್ಲಿ ರಜತ ಪ್ರಭಾವಳಿಯೊಂದಿಗೆ ಸ್ವರ್ಣಮುಕುಟ, ವಜ್ರ, ಚಿನ್ನಾಭರಣಗಳ ಶೃಂಗಾರದೊಂದಿಗೆ ಶ್ರೀ ಹರಿ ಗುರು ಸೇವಾ ಪ್ರತಿಷ್ಠಾನವು ಮಾತೆ ಶ್ರೀದೇವಿಯ ಪ್ರಾಣಪ್ರತಿಷ್ಠೆ ನೆರವೇರಿಸಿ ವಾರ್ಷಿಕ ‘ದಹಿಸರ್ ದಸರೋತ್ಸವ’ ಸಂಭ್ರಮಕ್ಕೆ ಭಕ್ತಿಪೂರ್ವಕವಾಗಿ ಚಾಲನೆ ನೀಡಿತು.

ವೇದಮೂರ್ತಿ ಲಕ್ಷ್ಮೀ ನಾರಾಯಣ ಭಟ್ ವಾಲ್ಕೇಶ್ವರ್ ತಮ್ಮ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ಪ್ರತಿಷ್ಠಾಪಿಸಿ ಸದ್ಭಕ್ತರನ್ನು ಹರಸಿದರು. ಇಂದು ಸರಸ್ವತಿದೇವಿ ಆರಾಧನೆಯೊಂದಿಗೆ ಪುರೋಹಿತರಾದ ಸಂಭ್ರಮಕ್ಕೆ ಚಾಲನೆ ನೀಡಲಾಗಿದ್ದು, ಬೆಳಿಗ್ಗೆಯಿಂದ ರಾತ್ರಿ ತನಕ ವಿವಿಧ ಪೂಜಾಧಿ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಪುಷ್ಪ ಅಲಂಕಾರ ಸೇವೆ, ರಂಗ ಪೂಜೆ, ಮಧ್ಯಾಹ್ನ ಪೂಜೆ, ರಾತ್ರಿ ಪೂಜೆ, ಚಂಡಿಕಾ ಹವನ, ವರ-ಭೇಟ್ (ದಂಪತಿಗಳಿಗಾಗಿ), ಪಂಚಾಮೃತ ಅಭಿಷೇಕ, ದುರ್ಗಾ ಹವನ, ತುಲಾಭಾರ ಸೇವೆ, ಪಂಚನೈವೇದ್ಯ ಮಹಾಭೋಗ, ದುರ್ಗಾ ನಮಸ್ಕಾರ, ದೀಪಾರಾಧನೆ ಹಾಗೂ ಲಕ್ಷಿ ನಾರಾಯಣ ಹೃದಯ ಹವನ ಹಾಗೂ ಸಮೂಹಿಕ ಕುಂಕುಮಾರ್ಚನೆ ಸೇವೆಗಳು ನಡೆಸಲ್ಪಟ್ಟವು. ವೇ| ಮೂ| ಪ್ರಶಾಂತ್ ಭಟ್, ವೇ| ಮೂ| ಉಲ್ಲಾಸ್ ಭಟ್, ವೇ| ಮೂ| ವಿನಾಯಕ ಭಟ್ ಮತ್ತಿತರ ವಿದ್ವಾನರು ಪೂಜಾಧಿಗಳನ್ನು ನಡೆಸಿದ್ದು, ಗುರುಪ್ರಸಾದ್ ಪೈ ಮತ್ತು ವೈಶಾಲಿ ಜಿ.ಪೈ ಹಾಗೂ ಸಿ.ನಾರಾಯಣ ಪೈ ಮತ್ತು ನಯನಾ ಎನ್.ಪೈ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ನಾಳೆಯಿಂದ ಉತ್ಸವದ ದಿನಗಳಲ್ಲೂ ದೇವಿಗೆ ವಿಭಿನ್ನ ರೂಪಳಿಂದ ಶೃಂಗಾರಿಸಿ ಆರಾಧಿಸಲಾಗುವುದು. ನಾಳೆ ಮಂಗಳವಾರ ಅನ್ನಪೂರ್ಣೇಶ್ವರಿ, ಶಾಂತಾದುರ್ಗಾ, ವೈಷ್ಣೋದೇವಿ ಚಾಮುಂಡೇಶ್ವರಿ, ದುರ್ಗಾ ಪರಮೇಶ್ವರಿ, ವಿಜಯದುರ್ಗಾ ದೇವಿ, ಮಹಾಕಾಳಿ, ಚಂಡಿಕಾ ದೇವಿ ಹಾಗೂ ವಿಜಯದಶಮಿ ದಿನ ಶಾರದಾ ದೇವಿಗೆ ಪೂಜಿಸಲಾಗುವುದು.

ಜಿಎಸ್‌ಬಿ ಸಭಾ ದಹಿಸರ್-ಬೋರಿವಲಿ (ರಿ.) ಇದರ ಅಧ್ಯಕ್ಷ ಸಾಣೂರು ಮನೋಹರ್ ವಿ.ಕಾಮತ್, ಉಪಾಧ್ಯಕ್ಷ ವಿಷ್ಣು ಆರ್.ಕಾಮತ್, ಗೌರವ ಪ್ರಧಾನ ಕಾರ್ಯದರ್ಶಿ ಉದಯ್ ಎಂ.ಪಡಿಯಾರ್, ಗೌರವ ಕೋಶಾಧಿಕಾರಿ ಮೋಹನ್‌ದಾಸ್ ಎ.ಕಾಮತ್, ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರನೇಕರು ಉಪಸ್ಥಿತರಿದ್ದು ಶಾಲಾ ವಿದ್ಯಾಥಿಗಳಿಗೆ ಬ್ಯಾಗ್, ಪುಸ್ತಕ ಹಾಗೂ ಪರಿಕರಗಳನ್ನು ವಿತರಿಸಿದರು.