ಪುತ್ತೂರು: 'ಬರಹದ ಭಾಷೆಯು ಸರಳವಾಗಿರಲಿ. ಮನುಷ್ಯ ಪ್ರೀತಿ, ಸಂವೇದನೆ, ಮಾನವೀಯ ಮೌಲ್ಯಗಳು ಮಿಳಿತವಾದ ನುಡಿಚಿತ್ರವು ಬಹುತ್ವವ ಸಾರಲಿ. ಆಕರ್ಷಣೀಯ ಶೀರ್ಷಿಕೆಯಿಂದ ಕೂಡಿದ ಅಂಕಣವು ಕಥೆಯ ನಿರೂಪಣೆ, ಕಾವ್ಯದ ಲಹರಿ, ಲಯ ಮತ್ತು ಸ್ಥಾಯಿಭಾವಗಳ ಹೂರಣವಾಗಿರಲಿ'. 'ಅನೇಕ ಪತ್ರಕರ್ತರನ್ನು ಸೃಷ್ಟಿಸಿದ ಚರಿತ್ರೆ ಸಂತ ಫಿಲೋಮಿನಾ ಕಾಲೇಜಿಗಿದೆ. ಕಾಲೇಜಿನ ಹಳೆ ವಿದ್ಯಾರ್ಥಿ ಎಂಬ ಹಿರಿಮೆ ಸದಾ ನನ್ನ ಮನದಲ್ಲಿರುತ್ತದೆ ' ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ನಿವೃತ್ತ ಕನ್ನಡ ಪ್ರಾಧ್ಯಾಪಕರು ಆಗಿರುವ ಡಾ ||ನರೇಂದ್ರ ರೈ ದೇರ್ಲ ಅವರು ಹೇಳಿದರು. ಇವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ 'ಸ್ಪಂದನ 'ಸಭಾಂಗಣದಲ್ಲಿ ಕನ್ನಡ ವಿಭಾಗ ಮತ್ತು ಕನ್ನಡ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ 'ಮಾಧ್ಯಮ ಬರವಣಿಗೆ ತರಬೇತಿ ಶಿಬಿರ' ಎಂಬ ಕಾರ್ಯಗಾರದಲ್ಲಿ ಉದ್ಘಾಟಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
'ವರದಿಗಾರಿಕೆಗೆ ಒಂದು ಸೂಕ್ತವಾದ ಚೌಕಟ್ಟು ಇರಲಿ. ಸಮಾಜದ ಮಾತಿಗೆ ಕಿವಿಯಾಗಿ, ಸತ್ಯವನ್ನು ಪ್ರತಿಪಾದಿಸುವ ವರದಿ ನಿಮ್ಮದಾಗಿರಲಿ. ಬಳಸುವ ಶಬ್ಧ ಮತ್ತು ಶೈಲಿಯಲ್ಲಿ ಪ್ರಭುದ್ಧತೆ ತುಂಬಿರಲಿ. ಬರವಣಿಗೆಗಿಂತ ಓದುವಿಕೆ ಬಹಳ ಮುಖ್ಯ. ಹತ್ತು ಪುಟ ಬರೆಯುವ ಮೊದಲು ನೂರು ಪುಟದ ಸತ್ವವು ನಿಮ್ಮಲ್ಲಿರಲಿ. ಹಾಗಾದರೆ ಮಾತ್ರ ನಿಮ್ಮ ಬರಹವು ವಿಶಿಷ್ಟ ಹಾಗೂ ವಿಭಿನ್ನವಾಗಿ ಮೂಡಿಬರಲು ಸಾಧ್ಯ ' ಎಂದು ಶ್ರೀಯುತ ಸುಧಾಕರ ಸುವರ್ಣ ತಿಂಗಳಾಡಿ, ವಿಜಯ ಕರ್ನಾಟಕ ದಿನಪತ್ರಿಕೆಯ ಜಿಲ್ಲಾ ವರದಿಗಾರರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ರೆ| ಡಾl ಆ್ಯಂಟನಿ ಪ್ರಕಾಶ್ ಮೊಂತೇರೊ ಅವರು 'ನೈಜತೆಗೆ ಆದ್ಯತೆ ನೀಡಿ. ಬರಹದಲ್ಲಿ ಕ್ರಿಯಾತ್ಮಕತೆ, ರಚನಾತ್ಮಕತೆ, ಸೃಜನಶೀಲತೆ ತುಂಬಿರಲಿ ' ಎಂದರು.
ವೇದಿಕೆಯಲ್ಲಿ ಉಪಸ್ಥಿತರಾಗಿದ್ದ ಕಾಲೇಜಿನ ಉಪಪ್ರಾಂಶುಪಾಲರೂ ಕನ್ನಡ ವಿಭಾಗದ ಮುಖ್ಯಸ್ಥರೂ ಆದ ವಿಜಯ ಕುಮಾರ್ ಮೊಳೆಯಾರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕರಾದ ನಾರಾಯಣ ರೈ ಕುಕ್ಕುವಳ್ಳಿ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್ ರೈ,ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಾಸುದೇವ ಎನ್,ಕನ್ನಡ ಉಪನ್ಯಾಸಕಿಯರಾದ ಪ್ರಶಾಂತಿ ಎನ್ ಹಾಗೂ ಪ್ರತಿಭಾ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಗಾಯತ್ರಿ ನಿರೂಪಿಸಿ,ದ್ವಿತೀಯ ಬಿಕಾಂ ವಿದ್ಯಾರ್ಥಿಗಳಾದ ಅವನಿ ಮತ್ತು ಬಳಗದವರು ಪ್ರಾರ್ಥಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಲಿಖಿತಾ ಸ್ವಾಗತಿಸಿ, ದ್ವಿತೀಯ ಬಿಎ ವಿದ್ಯಾರ್ಥಿನಿ ರಶ್ಮಿತಾ ವಂದಿಸಿದರು.