ಮಂಗಳೂರು, ಫೆ. 26: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಅವರು ಅಕಾಡೆಮಿಯ ಸಿರಿ ಚಾವಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ 2018, 2019, 2020ರ ಮೂರು ವರ್ಷಗಳ ಪ್ರಶಸ್ತಿ ಪ್ರಕಟಿಸಿ, ಮಾರ್ಚ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ದಿನ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯುವುದನ್ನು ವಿವರಿಸಿದರು.
2018ಕ್ಕೆ ಹಿಂದಿನ ಅಕಾಡೆಮಿ ಪ್ರಕಟಿಸಿದ್ದನ್ನೇ ಉಳಿಸಿಕೊಂಡು ಒಟ್ಟು ಮೂರು ವರುಷಗಳ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಮಂತ್ರಿ ಸದಾನಂದ ಗೌಡ, ಮುಖ್ಯ ಮಂತ್ರಿ ಯಡಿಯೂರಪ್ಪ, ಸಂಸ್ಕೃತಿ ಇಲಾಖೆಯ ಸಿ. ಟಿ. ರವಿ, ಇಲ್ಲಿನ ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಸಚಿವ ಅರವಿಂದ ಲಿಂಬಾವಳಿ, ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮತ್ತಿತರರು ಭಾಗವಹಿಸುವರೆಂದು ಕತ್ತಲ್ ಸಾರ್ ಮಾಹಿತಿ ನೀಡಿದರು.
ಮೂರು ವರುಷಗಳಲ್ಲಿ ಕ್ರಮವಾಗಿ ತುಳು ಸಾಹಿತ್ಯ ಕ್ಷೇತ್ರ ಲಲಿತಾ ಆರ್. ರೈ, ಎಸ್. ಆರ್. ವಿಘ್ನರಾಜ್ ಧರ್ಮಸ್ಥಳ, ರಾಮಚಂದರ್ ಬೈಕಂಪಾಡಿ; ತುಳು ನಾಟಕ ರಂಗದಲ್ಲಿ ರತ್ನಾಕರ ರಾವ್ ಕಾವೂರು, ದಿ. ತಿಮ್ಮಪ್ಪ ಗುಜರನ್ ತಲಕಳ, ತುಂಗಪ್ಪ ಬಂಗೇರ ಪುಂಜಾಲಕಟ್ಟೆ; ತುಳು ಜಾನಪದ ಕ್ಷೇತ್ರದ ಎ. ಕೆ. ವಿಜಯ್ ಕೋಕಿಲ, ಗುರುವ ಕೊರಗ ಹಿರಿಯಡ್ಕ, ಆನಂದ ಪೂಜಾರಿ ಹಳೆಯಂಗಡಿ ಪ್ರಶಸ್ತಿ ಪುರಸ್ಕೃತರು.
ಮೂರು ಸಾಲಿನಲ್ಲಿ ಕ್ರಮವಾಗಿ ತುಳು ಕವನ ವಿಭಾಗದಲ್ಲಿ ಶಾಂತಾರಾಂ ವಿ. ಶೆಟ್ಟಿ, ಕುಶಾಲಾಕ್ಷಿ ವಿ. ಕುಲಾಲ್, ತುಳು ಕಾದಂಬರಿ ವಿಭಾಗದಲ್ಲಿ ರಾಜಶ್ರೀ ಟಿ. ರೈ ಪೆರ್ಲ, ತುಳು ಕವನ ವಿಭಾಗದಲ್ಲಿ ಚಿನ್ನಪ್ಪ ಗೌಡ ಪ್ರಶಸ್ತಿ ವಿಜೇತರಾಗಿದ್ದಾರೆ.
ಅಲ್ಲದೆ ಈ ಬಾರಿ ವಿಶೇಷವಾಗಿ ಸಂಘಟನೆ ಯೋಗೀಶ್ ಶೆಟ್ಟಿ ಜೆಪ್ಪು, ನಿರೂಪಣೆ ನವೀನ್ ಶೆಟ್ಟಿ ಎಡೈಮಾರ್, ಜನಪದ ಸಂಘಟನೆ ರಮೇಶ್ ಪಿ. ಮೆಟ್ಟಿನಡ್ಕ, ತುಳು ದೈವ ಕ್ಷೇತ್ರ ನಾಗರಾಜ ಭಟ್, ತುಳು ಕಲಾ ಪೋಷಣೆ ಭರತ್ ಸೌಂದರ್ಯ, ತುಳು ಶಾಸನ ಕ್ಷೇತ್ರ ಸುಭಾಷ್ ನಾಯಕ್, ತುಳು ಲಿಪಿ ಸಂಶೋಧನೆ ದೀಪಕ್ ಪಡುಕೋಣೆ ಇವರೆಲ್ಲ ಪ್ರಶಸ್ತಿ ಪಡೆಯುವವರಾಗಿದ್ದಾರೆ.
ಮೊದಲು ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ. ಎಲ್ಲರನ್ನೂ ಸ್ವಾಗತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಲೀಲಾಕ್ಷ ಕರ್ಕೇರ, ನಾಗೇಶ್ ಕುಲಾಲ್, ರವೀಂದ್ರ ಶೆಟ್ಟಿ, ವಿಜಯಲಕ್ಷ್ಮಿ ಪಿ. ರೈ, ಮಲ್ಲಿಕಾ ಅಜಿತ್ ಶೆಟ್ಟಿ, ಕಡಬ ದಿನೇಶ್ ರೈ, ಶ್ರೀಮತಿ ತಾರಾ, ಶಶಿಧರ ಶೆಟ್ಟಿ ನಿಟ್ಟೆ ಕಲಾವತಿ ದಯಾನಂದ್ ಮೊದಲಾದವರು ಉಪಸ್ಥಿತರಿದ್ದರು.