ಕಾರ್ಕಳ: `ಮಕ್ಕಳಿಗೆ ಪಠ್ಯಗಳ ಜೊತೆ ಕಲೆ, ಸಾಹಿತ್ಯ, ಸಂಗೀತಗಳ ಅವಕಾಶಗಳನ್ನು ಒಳಗೊಂಡ ಸಮಗ್ರ ಶಿಕ್ಷಣ ಅಗತ್ಯ ಇದೆ. ಮಕ್ಕಳ ಸರ್ವಾಂಗೀಣ ವಿಕಾಸವೇ ಒಟ್ಟು ಶಿಕ್ಷಣದ ಉದ್ದೇಶವಾಗಿದ್ದು ಇದನ್ನು ಅಳವಡಿಸುವಲ್ಲಿ ಶಿಕ್ಷಣ ವ್ಯವಸ್ಥೆ ಇನ್ನೂ ಸಫಲವಾಗಿಲ್ಲ. ಪಠ್ಯವಿಷಯದ ಕುರಿತ ಆಳ ಜ್ಞಾನ, ತರಬೇತಿ ವಿದ್ಯಾರ್ಥಿಗಳಿಗೆ ಆದ್ಯತೆ ಎನ್ನುವುದು ನಿಜವಾದರೂ ಅದರ ಜೊತೆ ವಿದ್ಯಾರ್ಥಿಗಳ ದೇಹ ಮನಸ್ಸು ಮತ್ತು ಬೌದ್ಧಿಕ, ಸಾಮಾಜಿಕ ಚಟುವಟಿಕೆಗಳಿಗೆ ಸಜ್ಜುಗೊಳಿಸುವ ಶಿಕ್ಷಣ ತರಬೇತಿ ಜೊತೆಗೇ ಸಿಗಬೇಕು' ಎಂದು ಎಸ್.ವಿ.ಟಿ. ವಿಸ್ಯಾಸಂಸ್ಥೆಯ ಸಂಚಾಲಕ  ಕೆ.ಪಿ. ಶೆಣೈ ಹೇಳಿದರು.

ಅವರು ಎಸ್.ವಿ.ಟಿ. ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ಅಂಡಾರು ವಿಠಲ ರುಕ್ಮಿಣಿ ಕಿಣಿ ಸಭಾಭವನದಲ್ಲಿ  ಫೆಬ್ರವರಿ 28, ರವಿವಾರ ನಡೆದ ಕಾರ್ಕಳ ಶ್ರೀ ನೃತ್ಯಾಲಯದ 24ನೆಯ ವರ್ಷದ ಚತುರ್ವಿಂಶತಿತಮ ಕಲೋಪಾಸನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉದ್ಯಮಿ ಟಿ. ರಾಮಚಂದ್ರ ನಾಯಕ್ ಮತ್ತು ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಮುಖ್ಯ ಅತಿಥಿಗಳಾಗಿ ಶುಭಹಾರೈಸಿದರು.

ಸುರತ್ಕಲ್ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಅವರಿಗೆ ಗುರುವಂದನೆ, ಕಾರ್ಕಳದ ಹಿರಿಯ ಸಂಗೀತಗುರು ವೆಂಕಟೇಶ್ ಜಿ. ಚಿಪ್ಳೂಣ್‍ಕರ್ ಅವರಿಗೆ ಕಲಾರತ್ನ ಪುರಸ್ಕಾರ ಮತ್ತು ಸ.ಹಿ.ಪ್ರಾ. ಶಾಲೆ ಮೈನ್ ಇಲ್ಲಿಯ ಪ್ರಭಾರ ಮುಖ್ಯಶಿಕ್ಷಕಿ ಗಾಯತ್ರಿದೇವಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಶ್ರೀ ನೃತ್ಯಾಲಯದ ನಿರ್ದೇಶಕ ವಿದ್ವಾನ್ ಚಂದ್ರಶೇಖರ ನಾವಡ ಸ್ವಾಗತಿಸಿದರು. ಲಕ್ಷ್ಮಿ ಜಿ. ಮಲ್ಯ ಕಾರ್ಯಕ್ರಮ ನಿರೂಪಿಸಿದರು. ಗಾಯತ್ರಿ ನಾವಡ ವಂದಿಸಿದರು.

ಪೂರ್ಣಿಮಾ ಗೋರೆ ದುರ್ಗ ಇವರ ನಿರ್ದೇಶನದಲ್ಲಿ ಸ್ವರಾಲಯ ಕಾರ್ಕಳ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಜಯಲಕ್ಷ್ಮೀ ಭಟ್ ಸಾಣೂರು ವೃಂದದವರಿಂದ ವೀಣಾವಾದನ ಮತ್ತು ನೃತ್ಯಾಲಯ ಸಂಸ್ಥೆಯ ಕಿರಿಯ, ಹಿರಿಯ ಕಲಾವಿದರಿಂದ ಭರತನಾಟ್ಯ ನೃತ್ಯವೈವಿಧ್ಯ ಹಾಗೂ ಶ್ರೀಕೃಷ್ಣರುಕ್ಮಿಣಿ ಸತ್ಯಭಾಮಾ ನೃತ್ಯರೂಪಕ ನಡೆಯಿತು.