ಕರ್ನಾಟಕ ವಿಧಾನ ಸಭಾ ಚುನಾವಣೆ ಸಂಬಂಧ ಮನೆಯಿಂದಲೇ ಮತ ಚಲಾಯಿಸಿದ 80 ವರುಷ ದಾಟಿದ ಹಾಗೂ ಅಂಗವಿಕಲರ ಸಂಖ್ಯೆಯು ಮೂರು ದಿನಗಳಲ್ಲಿ 69,132 ದಾಟಿದ್ದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದರು.
ರಾಜ್ಯದಲ್ಲಿ ಹಿರಿಯರು ಮತ್ತು ಅಂಗವಿಕಲರು ಒಟ್ಟು 99,529 ಮಂದಿ ಮನೆಯಿಂದಲೇ ಮತ ಚಲಾಯಿಸಲು ನೋಂದಾಯಿಸಿ ಕೊಂಡಿದ್ದಾರೆ.
ಏಪ್ರಿಲ್ 29ರಂದು ಆರಂಭವಾದ ಈ ಪ್ರಕ್ರಿಯೆಯು ಮೇ 6ರವರೆಗೆ ನಡೆಯಲಿದೆ. ಒಟ್ಟು 763 ತಂಡಗಳು ಮತ ಸಂಗ್ರಹದಲ್ಲಿ ತೊಡಗಿವೆ. ಮೊದಲ ಎರಡು ದಿನ 49,797 ಹಾಗೂ ಸೋಮವಾರ 19,335 ಎಂದು ಒಟ್ಟು ಮೂರು ದಿನಗಳಲ್ಲಿ 69,132 ಜನರು ಮನೆಯಿಂದಲೇ ಮತ ಚಲಾಯಿಸಿದ್ದಾರೆ.