ಮಂಗಳೂರು:- ಮಂಗಳೂರಿನ ವಾಮಂಜೂರಿನಲ್ಲಿರುವ ಎಸ್ ಜೆಇಸಿ- ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿಗೆ ಎನ್ ಎಎಸಿ- ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯು ಐದು ವರುಷಗಳಿಗೆ ಅನ್ವಯವಾಗುವಂತೆ ಪ್ರತಿಷ್ಠಿತ ಎ+ ಗ್ರೇಡ್ ಮಾನ್ಯತೆಯನ್ನು ನೀಡಿದೆ ಎಂದು ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಿನ್ಸಿಪಾಲ್ ಲಿಯೋ ಡಿಸೋಜಾ ಅವರು ತಿಳಿಸಿದರು.
ಸಾವಿರ ಅಂಕಗಳಲ್ಲಿ 700ರಷ್ಟು ಅಂಕ ಪಡೆದ ಅಂದರೆ 4 ಅಂಕದ ಮಾಪನಾಂಕದಲ್ಲಿ 3.39 ಸಿಜಿಪಿಎ ಸಹಿತ ಮೊದಲ ಪ್ರಯತ್ನದಲ್ಲೇ ಎ+ ಮಾನ್ಯತೆ ಪಡೆದ ಕೆಲವೇ ಕೆಲವು ಕಾಲೇಜುಗಳ ಸಾಲಿಗೆ ಇದು ಸೇರಿತು. ಸ್ವಾಯತ್ತ ವಿವಿ ಮಾನ್ಯತೆಯನ್ನು ಕೂಡ ಪಡೆಯುವ ಹಂತದಲ್ಲಿ ಕಾಲೇಜು ಇದೆ. ಕೊರೋನಾ ಅಲ್ಲದಿದ್ದರೆ ಅದು ಸಹ ಅಂತಿಮ ಮಾನ್ಯತೆ ಮುಟ್ಟುತ್ತಿತ್ತು ಎಂದು ಲಿಯೋ ಡಿಸೋಜಾ ಹೇಳಿದರು.
2021ರ ಫೆಬ್ರುವರಿಯ 15-16ರಲ್ಲಿ ಕಾಲೇಜಿಗೆ ಭೇಟಿ ನೀಡಿದ ಎನ್ ಎಎಸಿ ತಂಡವು ಕಾಲೇಜಿನ ಸಂರಚನೆ, ಅನುಕೂಲತೆಗಳು, ವಿದ್ಯಾರ್ಥಿಗಳ ಮಟ್ಟ, ದತ್ತು ಪಡೆದ ಗ್ರಾಮಗಳು, ಸೌರ ವಿದ್ಯುತ್ ಪೂರೈಕೆ, ಸಾವಯವ ಗೊಬ್ಬರ ಘಟಕ, ಸಾವಯವ ಅನಿಲ ತಯಾರಿಕೆ, ಉಪನ್ಯಾಸಕರ ಗುಣಮಟ್ಟ, ಶಿಕ್ಷಣ ಮುಟ್ಟಿಸುವಿಕೆ, ಕಲಿಕಾ ಗ್ರಹಿಕೆ ಇವನ್ನೆಲ್ಲ ವಿಶ್ಲೇಷಣೆ ಮಾಡಿ ಎ+ ಮಾನ್ಯತೆ ನೀಡಲಾಗಿದೆ. ಕಾಲೇಜು ಕೊಡುವ ಮಾಹಿತಿಯನ್ನು ಮೂರನೇ ಮೂಲದ ಮಾಹಿತಿಯೊಡನೆ ತುಲನೆ ಮಾಡಿ ಗುಣಮಟ್ಟದ ವಿಶ್ಲೇಷಣೆಯ ಮಾನದಂಡ ಅನುಸರಿಸಿ ಈ ಅರ್ಹತಾ ಮಾನ್ಯತೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
19 ವರುಷಗಳಿಂದ ಅಸ್ತಿತ್ವದಲ್ಲಿರುವ ಈ ಕಾಲೇಜಿನಲ್ಲಿ 2,500 ವಿದ್ಯಾರ್ಥಿಗಳು ಸ್ವಚ್ಛ ಹಸಿರು ಕ್ಯಾಂಪಸ್ ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಶಿಸ್ತು, ಉದ್ಯಮಶೀಲತೆ, ಉದ್ಯೋಗ ಅವಕಾಶ, ಮೂಲ ಸೌಕರ್ಯ, ಅತ್ಯಾಧುನಿಕತೆಗೆ ತೆರೆದುಕೊಂಡ ವಾತಾವರಣ, ತಾಂತ್ರಿಕ ಸವಲತ್ತು, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಎಂದು ಈ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಸರ್ವ ಸಜ್ಜುಗೊಂಡು ನಡೆಯುತ್ತಿದೆ.