ನಿಟ್ಟೆ, ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಕಿಂಡ್ರೆಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಯ ಸಹಯೋಗದಲ್ಲಿ ಸೆ. 23 ಹಾಗೂ 24 ರಂದು ಸತತ 24 ಗಂಟೆಗಳ ಹ್ಯಾಕಥಾನ್ 'ಎಐನ್ನೋವೇಶನ್ II 2025' ನ್ನು ಹಮ್ಮಿಕೊಂಡಿತ್ತು. ಸಾಮಾಜಿಕ ಅಗತ್ಯಗಳಿಗೆ ಪರಿಣಾಮಕಾರಿ, ತಂತ್ರಜ್ಞಾನ-ಚಾಲಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಈ ಕಾರ್ಯಕ್ರಮವು ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿತು.
ಸಮಾರೋಪ ಸಮಾರಂಭದಲ್ಲಿ ಕಿಂಡ್ರೆಲ್ ಸಂಸ್ಥೆಯ ಗ್ಲೋಬಲ್ ಡೆಲಿವರಿ ಲೀಡರ್ಶಿಪ್ ನ ಹಿರಿಯ ಉಪಾಧ್ಯಕ್ಷ ಶಂಕರ ಶ್ರೀನಿವಾಸನ್ ಅತಿಥಿಗಳಾಗಿ ಭಾಗವಹಿಸಿ 'ಇಂತಹ ಹ್ಯಾಕಥಾನ್ ಗಳು ಉತ್ತಮ ಐಡಿಯಾಗಳನ್ನು ಹೊರತರುವಲ್ಲಿ ಸಹಕಾರಿಯಾಗುತ್ತವೆ. ಈರೀತಿಯ ಸ್ಪರ್ಧೆಗಳಲ್ಲಿ ಹೊರಹೊಮ್ಮಿದ ಯೋಜನೆಗಳು ನಿತ್ಯಜೀವನದಲ್ಲಿ ಕಮರ್ಶಿಯಲೈಸ್ ಆಗುವ ಹಂತವನ್ನು ಕಾಣಬೇಕಾಗಿದೆ. ಈ ಐಡಿಯಾಗಳು ಕೇವಲ ಸ್ಪರ್ಧೆಗಷ್ಟೇ ಸೀಮಿತವಾಗಿರದೆ ಸಮಾಜಕ್ಕೆ ಪ್ರಯೋಜನಕಾರಿಯಾಗಬೇಕು' ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಯ ಆಡಳಿತ ವಿಭಾಗದ ಪ್ರೊ-ಚಾನ್ಸಲರ್ ವಿಶಾಲ್ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ವಿದ್ಯಾರ್ಥಿಗಳು ವಿವಿಧ ಬಗೆಯ ಸಾಮಾಜಿಕ ಸಮಸ್ಯೆಗಳಿಗೆ ವಿನೂತನ ಚಿಂತನೆಯೊಂದಿಗೆ ಪರಿಹಾರ ಕಂಡುಕೊಳ್ಳಬೇಕು. ಇಂತಹ ಹ್ಯಾಕಥಾನ್ ಗಳು ವಿದ್ಯಾರ್ಥಿಗಳ ಆಲೋಚನಾಶಕ್ತಿಯನ್ನು ವೃದ್ದಿಸುತ್ತದೆ' ಎಂದರು.
ವೇದಿಕೆಯಲ್ಲಿ ಕಿಂಡ್ರೆಲ್ ಸಂಸ್ಥೆಯ ಡೆಲಿವರಿ ಮ್ಯಾನೇಜ್ಮೆಂಟ್ ಮತ್ತು ಇಂಡಿಯಾ ಯೂನಿವರ್ಸಿಟಿ ಲೀಡರ್ ವಿಭಾಗದ ನಿರ್ದೇಶಕ ಡಾ. ರಾಜ್ ಮೋಹನ್ ಸಿ ; ಮೈಕ್ರೋಸಾಫ್ಟ್ ಸಂಸ್ಥೆಯ ಡೇಟಾ ಮತ್ತು ಎಐ ಪ್ರೋಗ್ರಾಂ ಮುಖ್ಯಸ್ಥ ಸುಮಿತ್ ರಂಜನ್; ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಲುಂಕರ್ ಉಪಸ್ಥಿತರಿದ್ದು ವಿಜೇತರಿಗೆ ಅತಿಥಿಗಳೊಡಗೂಡಿ ಬಹುಮಾನಗಳನ್ನು ವಿತರಿಸಿದರು.
ಸೇಂಟ್ ಜೋಸೆಫ್ ಕಾಲೇಜಿನ ರಿಯನ್ ಜೇಡನ್ ವಾಲ್ಡರ್, ಸಲೋಮಿ ಡಿಸೌಜಾ, ಮ್ಯಾಕ್ ರಿಯಾನ್ ಡಿಸೋಜಾ ಮತ್ತು ಮಿಲ್ಟನ್ ಬ್ರಾಗ್ಸ್ ಅವರನ್ನು ಒಳಗೊಂಡ ನಲ್ ಪಾಯಿಂಟರ್ಸ್ ತಂಡವು ಪ್ರಥಮ ಸ್ಥಾನವನ್ನು ಗಳಿಸಿತು. ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅನನ್ಯಾ ಭಟ್, ಪ್ರತೀಕ್ ಪ್ರಕಾಶ್ ಕಿಣಿ, ಸುಜನ್ ಕುಮಾರ್ ಶೆಟ್ಟಿ ಮತ್ತು ಲಕ್ಷ್ಮೀಶ್ ಎಂ ಪ್ರಭು ಅವರನ್ನೊಳಗೊಂಡ ಬಯೋ ಇನ್ನೋವೇಟರ್ಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆದರೆ, ಎಜೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಜ್ಞಾನೇಶ್, ಮಿಲನ್ ಸಿಐ, ಹಿಮಾಂಶು ಹೆಗ್ಡೆ ಮತ್ತು ಗೌರೇಶ್ ಜಿ ಪೈ ಅವರನ್ನೊಳಗೊಂಡ ಅನ್ಡಿಫೈನ್ಡ್ ತಂಡವು ಎರಡನೇ ರನ್ನರ್ಸ್ ಅಪ್ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಕಾರ್ಯಕ್ರಮವನ್ನು ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ & ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್, ಕೌನ್ಸಿಲರ್ ಅಂಕಿತ್ ಎಸ್ ಕುಮಾರ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ಶಶಾಂಕ್ ಶೆಟ್ಟಿ ಇವರು ಸಂಯೋಜಿಸಿದರು. ವಿದ್ಯಾರ್ಥಿ ನಂದನ್ ಪೈ ಅತಿಥಿಗಳನ್ನು ಸ್ವಾಗತಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅನುಷಾ ಆರ್ ಶರತ್ ಕಾರ್ಯಕ್ರಮ ನಿರೂಪಿಸಿದರು.