ಮಂಗಳೂರು, ಮಾರ್ಚ್ 29:  ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕಾರಿನ ಮೇಲೆ ಬೆಳಗಾವಿಯಲ್ಲಿ ಲೈಂಗಿಕ ಹಗರಣದ ಆರೋಪಿ ರಮೇಶ್ ಜಾರಕಿಹೊಳಿ ತಂಡ ಮತ್ತು ‌ಬಿಜೆಪಿ‌ ಗೂಂಡಾಗಳು ನಡೆಸಿದ ದಾಳಿಯನ್ನು ದ. ಕ. ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಮೊನ್ನೆ ಪತ್ರಿಕಾಗೋಷ್ಠಿ ನಡೆಸಿದ್ದ‌ ರಮೇಶ್ ಜಾರಕಿಹೊಳಿ ಕೀಳು ಮಟ್ಟದ ಭಾಷೆ ಬಳಸಿ ತನ್ನ ಯೋಗ್ಯತೆ ತೋರಿಸಿದ್ದರು. ಈಗ‌ ನಮ್ಮ ಅಧ್ಯಕ್ಷರ‌ ಕಾರಿನ ಮೇಲೆ ಕೆಟ್ಟ ದಾಳಿಗೆ ಕಾರಣಕರ್ತರಾಗಿ ಮತ್ತೆ ಕೆಳ ಮಟ್ಟದ ರಾಜಕೀಯ ‌ನಡೆಸಿದ್ದಾರೆ. ಹಿಂದೆ ಬಳ್ಳಾರಿ ರಿಪಬ್ಲಿಕ್ ಎನಲಾದ ಬಿಜೆಪಿ ಗಣಿಕಳ್ಳರ ಕೂಟ‌ ಸದನದಲ್ಲಿ‌ ತೊಡೆ ತಟ್ಟಿ ಧೈರ್ಯ ಇದ್ದರೆ ಬಳ್ಳಾರಿಗೆ ಬನ್ನಿ ಎಂದು ಸವಾಲು ಹಾಕಿತ್ತು. ಸಿದ್ದರಾಮಯ್ಯನವರು  ಆಗ ಸವಾಲು ಸ್ವೀಕರಿಸಿ ನಡೆದು ಹೋಗಿ ಬಳ್ಳಾರಿ ಕಳ್ಳರ ಕೋಟೆ‌ ಮುರಿದಿದ್ದರು. ಮೊನ್ನೆ ರ.ಜಾ. ಸವಾಲು ಹಾಕಿದ್ದರು. ಡಿಕೆಶಿ ಬೆಳಗಾವಿಗೆ ಹೋದರು. ಅಲ್ಲಿ ಇಂಥ ಗೂಂಡಾಗಿರಿ‌ ನಡೆಸಿದ್ದಾರೆ. ನಮ್ಮ ಅಧ್ಯಕ್ಷರು ಸವಾಲು ಸ್ವೀಕರಿಸಿದ್ದಾರೆ. ಇವರ ಬೆಳಗಾವಿ ರಿಪಬ್ಲಿಕ್ ಆಟ ನಿಲ್ಲಿಸುವುದು ಖಚಿತ ಎಂದು ಹರೀಶ್ ಕುಮಾರ್ ಹೇಳಿದರು.

ರಮೇಶ್ ಜಾರಕಿಹೊಳಿ ಪ್ರಕರಣದ ಸಂತ್ರಸ್ತೆಯ ಹೆತ್ತವರದು ಬೀದರ್ ಜಿಲ್ಲೆ. ಅವರನ್ನು ಬೆಳಗಾವಿಗೆ ಕರೆಸಿ ಪತ್ರಿಕಾಗೋಷ್ಠಿ ನಡೆಸಿರುವುದು ಬಿಜೆಪಿಯ ಚುನಾವಣೆ ಕಾಲದ ಕೆಟ್ಟ ರಾಜಕೀಯ. ರಮೇಶ್ ಜಾರಕಿಹೊಳಿ ಸಾಕ್ಷ್ಯ ನಾಶ‌ ನಡೆಸಲು ಸಿಟ್ ಅವಕಾಶ ಮಾಡಿಕೊಟ್ಟಿದೆ. ಅವರನ್ನು ಬಂಧಿಸದೆ ಒಳ ವ್ಯವಹಾರ ನಡೆಸಿದೆ. ವಿಧಾನ ಪರಿಷತ್ ನಲ್ಲಿ ನಮ್ಮ ನಾಯಕ ಎಸ್. ಆರ್. ಪಾಟೀಲರು ಚರ್ಚೆಗೆ ಅವಕಾಶ ಕೇಳಿದರೆ ಸರಕಾರ ಅದನ್ನು ಕಿವಿಗೆ ಹಾಕಿಕೊಂಡಿಲ್ಲ; ಸದನವೂ ನಡೆದಿಲ್ಲ. ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ‌ವಿಧಾನಸಭೆ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ತಿಳಿಯುತ್ತಲೇ ಬಿಜೆಪಿ ಮತ್ತು ರಮೇಶ್ ಜಾರಕಿಹೊಳಿ ಬಳಗ‌ ಅಡ್ಡ ಹಾದಿ ಹಿಡಿದಿದೆ. ಅದು ಅವರಿಗೇ ಮಾರಕ ಎಂದು ರಮೇಶ್ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನೀರಜ್ ಪಾಲ್, ಲಾರೆನ್ಸ್, ಟಿ. ಕೆ. ಸುಧೀರ್, ಸದಾಶಿವ ಉಲ್ಲಾಳ್, ವಿಶ್ವಾಸದಾಸ್, ಮುರಳೀಧರ ಇದ್ದರು