ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.),ಮೂಡುಬಿದಿರೆ ಹಾಗೂ ಕರಾವಳಿ ಮತ್ತು ಮಲೆನಾಡಿನ ಸಮಸ್ತ ಜೈನ ಸಮಾಜಬಾಂಧವರ ಸಹಕಾರದೊಂದಿಗೆ ಕೃಷಿಸಿರಿ ವೇದಿಕೆಯಲ್ಲಿ ಇದೇ ಬರುವ ಏಪ್ರಿಲ್ 27 ರ ಭಾನುವಾರ  ಅಪರಾಹ್ನ 4 ಗಂಟೆಯಿಂದ ಪರಮಪೂಜ್ಯ  ಡಾ ಡಿ.ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಭ। ಶ್ರೀ ಮಹಾವೀರ ಸ್ವಾಮಿ ಜನ್ಮಕಲ್ಯಾಣ ಮಹೋತ್ಸವ ಆಚರಣೆ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಮೂಡುಬಿದಿರೆಯ ಶ್ರೀ ಜೈನ ಮಠದ  ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯಾ ಮಹಾಸ್ವಾಮಿಯವರು  ಆಶೀರ್ವಚನ ನೀಡಲಿದ್ದಾರೆ.

ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ  ಎ. ಉಮಾನಾಥ ಕೋಟ್ಯಾನ್,ಕರ್ನಾಟಕ ಸರಕಾರದ ಮಾಜಿ ಸಚಿವ, ಕೆ. ಅಭಯಚಂದ್ರ ಜೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರಕುಮಾರ್, ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್‌ನ  ಅಧ್ಯಕ್ಷ ಎಂ.ಎನ್. ರಾಜೇಂದ್ರ  ಕುಮಾರ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಮಹಾವೀರ ಜಯಂತಿಯ ಪೂರ್ವಭಾವಿಯಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ಕರ‍್ಯಕ್ರಮದಲ್ಲಿ ವಿತರಿಸಲಾಗುವುದು.

ಸಂಜೆ  4 ರಿಂದ 5ವರೆಗೆ ಆಳ್ವಾಸ್ ವಿದ್ಯಾರ್ಥಿಗಳಿಂದ ಜಿನಭಜನೆ ಕಾರ್ಯಕ್ರಮ ನಂತರ ಸಂಜೆ  5ರಿಂದ ಭ।ಶ್ರೀ ಮಹಾವೀರ ಸ್ವಾಮಿ ಜಿನಬಿಂಬ ಮೆರವಣಿಗೆ ಹಾಗೂ ಸಂಜೆ  5.15ರಿಂದ  ತೋರಣ ಮುಹೂರ್ತ ಕಾರ್ಯಕ್ರಮ ಮತ್ತು ಸಂಜೆ  5.30ಕ್ಕೆ ಸರಿಯಾಗಿ ಜಯಶ್ರೀ ಡಿ. ಜೈನ್, ಹೊರನಾಡು ಅವರಿಂದ ಜಿನ ಗಾನಾಮೃತ ಜರುಗಲಿದೆ.  ನಂತರ ಸಂಜೆ  5.45 ರಿಂದ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಸಂಜೆ 6.30ಕ್ಕೆ ಸರಿಯಾಗಿ ಭ| ಶ್ರೀ ಮಹಾವೀರ ಸ್ವಾಮಿ ಜಿನ ಬಿಂಬಕ್ಕೆ ಮಂಗಳದ್ರವ್ಯಾಭಿಷೇಕ ಮತ್ತು ಅಷ್ಟವಿಧಾರ್ಚನೆ ಪೂಜೆ ನೆರವೇರಲಿದೆ. ಸಂಜೆ 8 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಕರಾವಳಿ ಹಾಗೂ ಮಲೆನಾಡಿನ ಸಮಸ್ತ ಜೈನ ಸಮಾಜಭಾಂದವರು ಹಾಗೂ ಸರ್ವರಿಗೂ ಸ್ವಾಗತ ಕೋರಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ, ಧನಕೀರ್ತಿ ಬಲಿಪ, ಆದಿರಾಜ್ ಜೈನ್, ವಕೀಲೆ ಶ್ವೇತಾ ಜೈನ್ ಇದ್ದರು.