ಉಡುಪಿ: ಪ್ರಾದೇಶಿಕ ಅಸಮತೋಲನೆಯು ಸ್ಥಳೀಯ ಜನರ ಕಾರ್ಯಚಟುವಟಿಕೆ ಹಾಗೂ ಆರ್ಥಿಕ ಅಭಿವೃದ್ಧಿಯ ಆಧಾರದ ಮೇಲೆ ಅವಲಂಬನೆಯಾಗಿರುತ್ತದೆ. ಉಡುಪಿ ಜಿಲ್ಲೆಯು ಸಾಕಷ್ಟು ಅಭಿವೃದ್ಧಿಯು ಖಾಸಗಿ ಸಹಭಾಗಿತ್ವದಲ್ಲಿ ಆಗಿದೆ. ಇನ್ನಷ್ಟು ಅಭಿವೃದ್ಧಿ ಆಗಬೇಕು ಎಂದು ಅಧ್ಯಕ್ಷ ಪ್ರೊ. ಎಂ ಗೋವಿಂದರಾವ್ ಹೇಳಿದರು. 

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‍ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ, ಡಾ. ಡಿ.ಎಂ ನಂಜುಂಡಪ್ಪ ವರದಿಯ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣ ವ್ಯವಸ್ಥೆ, ಬ್ಯಾಂಕಿಂಗ್ ಸೆಕ್ಟರ್‍ಗಳು ಸೇರಿದಂತೆ ಮತ್ತಿತರ ಕಾರ್ಯಚಟುವಟಿಕೆಗಳಿಂದ ಜಿಲ್ಲೆಯು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದೆ. ಇದಕ್ಕೆ ಪೂರಕವಾಗಿ ಸರಕಾರವೂ ಸಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಜಿಲ್ಲೆಯು ಸಾಗಬೇಕಿದೆ ಎಂದರು.

ನಂಜುಂಡಪ್ಪ ಸಮಿತಿ ವರದಿಯು ಅತ್ಯಂತ ಹಿಂದುಳಿದವರು 39, ಹೆಚ್ಚು ಹಿಂದುಳಿದವರು 40, ಹಿಂದುಳಿದವರು 35 ಎಂದು ಸಮಗ್ರ ಅಭಿವೃದ್ಧಿ ಸೂಚ್ಯಂಕದ ಆಧಾರದ ಮೇಲೆ ತಾಲ್ಲೂಕುಗಳು ಅಥವಾ ಜಿಲ್ಲೆಗಳ ವರ್ಗೀಕರಣ ಮಾಡಿದೆ ಎಂದ ಅವರು, ಸಮಿತಿಯು ವರದಿ ಸಲ್ಲಿಸಿದ ನಂತರದಲ್ಲಿ ಅಂತರ್‍ಜಿಲ್ಲಾ ಮಾನವ ಪ್ರವೃತ್ತಿಗಳು ಹಾಗೂ ಜಿಲ್ಲೆಯ ಜೀವನ ಮಟ್ಟಗಳ ಸುಧಾರಣೆ ಹಾಗೂ ಮಾನವ ಅಭಿವೃದ್ಧಿಯ ವ್ಯತ್ಯಾಸಗಳ ಕುರಿತು ವಿಶ್ಲೇಷಣೆ ನಡೆಸಿ ವರದಿಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಅಭಿವೃದ್ಧಿ ಸೂಚಕಗಳಾಗಿ ಆರ್ಥಿಕವಾಗಿ ಒಟ್ಟು ದೇಶೀಯ ಉತ್ಪನ್ನ, ತಲಾ ಆದಾಯ, ಆರ್ಥಿಕ ರಚನೆ, ಸಾಮಾಜಿಕವಾಗಿ ಜೀವಿತಾವಧಿ, ಶಿಶು ಮರಣ ಪ್ರಮಾಣ ಮತ್ತು ಸಾಕ್ಷರತಾ ಪ್ರಮಾಣ, ಪರಿಸರ ಸಂಬಂಧಿತವಾದ ನೈಸರ್ಗಿಕ ಸಂಪನ್ಮೂಲ, ಸವಕಳಿ ಸೂಚಕಗಳೂ ಸೇರಿದಂತೆ ಮತ್ತಿತರ 35 ಸೂಚಕಗಳನ್ನು ಪರಿಗಣಿಸಲಾಗುವುದು   ಎಂದ ಅವರು, ಜಿಲ್ಲೆಯ ಮತ್ತಷ್ಟು ಸಮಗ್ರ ಅಭಿವೃದ್ಧಿಗೆ ಏನೆಲ್ಲಾ ಅವಶ್ಯಗಳ ಬಗ್ಗೆ ಶಿಫಾರಸನ್ನು ಮಾಡಲಾಗುವುದು ಎಂದರು. 

ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರದ ಕೆಲವೊಂದು ಕಾನೂನುಗಳಿಂದ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ತೊಡಕು ಉಂಟಾಗುತ್ತಿದೆ. ವಿಶೇಷವಾಗಿ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ 500 ರಿಂದ 200 ಮೀ. ವ್ಯಾಪ್ತಿಯಲ್ಲಿ ನಿರ್ಬಂಧವಿರುವುದರಿಂದ ತೊಂದರೆ ಉಂಟಾಗುತ್ತಿದೆ. ವೈಲ್ಡ್ ಲೈಫ್ ಆಕ್ಟ್ ನ ಅನ್ವಯ ಒಂದು ಕಿ.ಮೀ. ಇಕೋ ಸೆನ್ಸಿಟಿವ್ ಝೋನ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ. ಕೇವಲ ಇರಲು ಮನೆ ಕಟ್ಟಿಕೊಂಡು ಜೀವನ ನಡೆಸಲು ಅವಕಾಶವಿದೆ. ಇತರೆ ಯಾವುದೇ ಕೈಗಾರಿಕಾ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಭೂ ಪರಿವರ್ತನೆ ಮಾಡಲು ಅವಕಾಶವಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಇದಕ್ಕೆ ರಿಯಾಯಿತಿ ನೀಡಬೇಕು ಎಂದರು.

ಸಾಮಾನ್ಯವಾಗಿ ಪಂಚಾಯತಿ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಗೆ ಪಂಚಾಯಿತಿಗಿದ್ದ ಅಧಿಕಾರವನ್ನು ತೆಗೆದು ಹಾಕಲಾಗಿದೆ. ಪ್ರಾಧಿಕಾರವೇ ಇದಕ್ಕೆ ಅನುಮತಿ ನೀಡಬೇಕು. ಭೂ ಪರಿವರ್ತನೆ ಕಾರ್ಯಗಳು ವಿಳಂಬ ಉಂಟಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಸಮಿತಿಯ ಗಮನಕ್ಕೆ ಗಮನಕ್ಕೆ ತಂದರು. 

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಜನರು ಐದು ಸೇಂಟ್ಸ್ ಭೂಮಿಯನ್ನು ಭೂ ಪರಿವರ್ತನೆ ಮಾಡುವಾಗ ರಸ್ತೆಗೆ ಜಾಗ ಬಿಡುವುದು ಸೇರಿದಂತೆ ಮತ್ತಿತರ ನಿಯಮಗಳಿಂದ ಕಷ್ಟ ಉಂಟಾಗುತ್ತಿದೆ. ಇವುಗಳ ಬಗ್ಗೆ ರಿಯಾಯಿತಿ ನೀಡಬೇಕು, ಕುಡುಬಿ ಜನಾಂಗದವರು ತುಂಬಾ ಹಿಂದುಳಿದಿದ್ದಾರೆ. ಅವರು ಅಭಿವೃದ್ಧಿಯಾಗಬೇಕು. ಸರಕಾರ ಕೃಷಿಕರಿಗೆ ಕೆಲವು ಯಂತ್ರಧಾರೆಗಳನ್ನು ನೀಡುವಾಗ ಇಂತಿಷ್ಟು ಜಮೀನು ಇರಬೇಕು ಎಂಬ ನಿಯಮಗಳನ್ನು ಇಡುತ್ತಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದರು. 

ಜಿಲ್ಲೆಯ ಕೈಗಾರಿಕಾ ಸಂಘದ ಪದಾಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ, ಕೈಗಾರಿಕಾ ಪ್ರದೇಶಗಳ ವಿಸ್ತರಣೆ ಆಗಬೇಕು. ದೊಡ್ಡ ಪ್ರಮಾಣದ ಕೈಗಾರಿಕೆಗಳು ಬಂದಲ್ಲಿ ಸಣ್ಣ ಸಣ್ಣ ಕೈಗಾರಿಕೆಗಳೂ ಸಹ ಹುಟ್ಟಿಕೊಳ್ಳುತ್ತವೆ. ಖಾಸಗಿ ವತಿಯಿಂದ ಕೈಗಾರಿಕೆಗಳ  ಸ್ಥಾಪನೆಗೆ ಗ್ರಾಮ  ಪಂಚಾಯತಿಗಳಲ್ಲಿ 9 ಅಂಡ್ 11 ದಾಖಲಾತಿಗಳನ್ನು ಪಡೆಯುವ ಕಾರ್ಯ ತುಂಬಾ ವಿಳಂಬವಾಗುತ್ತಿದೆ. ಎರಡು ಎಕರೆಗಿಂತ ಕಡಿಮೆ ಜಾಗವಿದ್ದ ಪ್ರದೇಶಗಳಿಗೆ ಭೂ ಪರಿವರ್ತನೆಗೆ ವಿನಾಯಿತಿ ನೀಡಬೇಕು, ಮಂಗಳೂರಿನಿಂದ ಮುಂಬೈಗೆ ಹೋಗುವ ರೈಲ್ವೇ ಸರಕು ಸರಬರಾಜು ಎರಡು ಕೋಚ್‍ಗಳಿದ್ದು, ಈ ಹಿಂದೆ 16 ಟನ್‍ಗಳಷ್ಟು ಸರಕುಗಳ ಸಾಕಾಣಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದರ ಪ್ರಮಾಣ ಇಳಿಕೆಯಾಗಿದ್ದು, ಇದರಿಂದ ತೊಂದರೆ ಉಂಟಾಗಿದೆ ಎಂದರು. 

ಯೋಜನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಡಾ. ವಿಶಾಲ್ ಆರ್, ನಂಜುಂಡಪ್ಪ ಸಮಿತಿಯು ನೀಡಿರುವ ಶಿಫಾರಸ್ಸುಗಳು, ಹಾಗೂ ಆ ವರದಿಯಲ್ಲೇನಿದೆ ಜೊತೆಗೆ ಮುಂದೆ ಯಾವ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಪ್ರಸ್ತುತದ ಗೋವಿಂದ ರಾವ್ ಸಮಿತಿಯ ವರದಿಗಳು, ಪರಿಕಲ್ಪನೆ, ಓಳನೋಟಗಳು ಮತ್ತು ಜಿಲ್ಲೆಯಲ್ಲಿ ಅಭಿವೃದ್ಧಿಗೆ ಇರುವ ಸವಾಲುಗಳ ಕುರಿತು ಮಾತನಾಡುತ್ತಾ, ಜಿಲ್ಲೆಯಲ್ಲಿಯ ಶೈಕ್ಷಣಿಕ ವ್ಯವಸ್ಥೆ ಸುಧಾರಿಸಲು ವಿದ್ಯಾರ್ಥಿನಿಲಯ, ವಸತಿ ಶಾಲೆಯ ಅವಶ್ಯಕತೆ, ಶಿಕ್ಷಕರ ಕೊರತೆ, ಪ್ರವಾಸೋದ್ಯಮದ ಅಭಿವೃದ್ಧಿಯ ಸವಾಲುಗಳು, ಧಾರ್ಮಿಕ ಪ್ರವಾಸೋದ್ಯಮಕ್ಕೆ ಮೂಲ ಸೌಕರ್ಯಗಳ ಕಲ್ಪನೆ, ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ, ಫೈರ್ & ಎಮರ್‍ಜೆನ್ಸಿ ಸೇಫ್ಟಿ ಕೋರ್ಸುಗಳ ಬಗ್ಗೆ ಸಾರ್ವಜನಿಕ ಮಾಹಿತಿ ನೀಡುವುದು ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಸ್ಥಳೀಯ ಅನುದಾನ ಕ್ರೋಢೀಕರಿಸಿ ಕೈಗೊಳ್ಳುವ ಬಗ್ಗೆ ತಿಳಿಸಿದರು. 

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ ಜಿಲ್ಲೆಯ ಅಭಿವೃದ್ಧಿ ಸಾಮಾಜಿಕ ಅಭಿವೃದ್ಧಿ ಅಂಶಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಕೊರಗ ಹಾಗೂ ಮಲೆಕುಡಿಯ ಜನಾಂಗದವರು ಉತ್ತಮ ಶಿಕ್ಷಣವನ್ನು ಪಡೆದರೂ ಅವರುಗಳಿಗೆ ಸರಕಾರಿ ಕೆಲಸಗಳು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೂ ಸಾಧ್ಯವಾಗುತ್ತಿಲ್ಲ. ಇವರುಗಳಿಗೆ ವಿಶೇಷ ಮೀಸಲಾತಿಯನ್ನು ಕಲ್ಪಿಸುವುದು ಅವಶ್ಯವಿದೆ. ಕೈಗಾರಿಕೆ ಮತ್ತು ಐ.ಟಿ ಪಾರ್ಕ್‍ಗಳ ಸ್ಥಾಪನೆಗೆ ಸರಕಾರಿ ಜಮೀನುಗಳ ಬೇಡಿಕೆ ಇದೆ ಎಂದ ಅವರು, ಜಿಲ್ಲೆಯ ಜನರು ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಉದ್ಯೋಗ, ವ್ಯಾಪಾರಗಳಿಂದ ಸಾಕಷ್ಟು ಆರ್ಥಿಕ ಲಾಭ ಪಡೆದು ಅವುಗಳ ಹೂಡಿಕೆಯನ್ನು ಜಿಲ್ಲೆಯಲ್ಲಿ ಮಾಡುತ್ತಿದ್ದಾರೆ ಎಂದರು.  

 ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಸ್.ಪಿ ಡಾ. ಅರುಣ್ ಕೆ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.