ಬಣ್ಣ ಬಣ್ಣದ ಬಿಂದಿಗಳು

ನನಗೆ  ಹೇಳಿತು,

ಇಂದಾದರು ಮಾತಾಡು.

ನಿನ್ನ ಚಂದವಾಗಿಸಿದ, ನಿನಗಿಷ್ಟವಾಗಿಹ, 

ನಿನಗೆ ರಂಗನ್ನಿಟ್ಟ, ನಮ್ಮ ಬಗ್ಗೆ, 

ಇಂದಾದರೂ ಮಾತಾಡು.

ಏನು ಹೇಳಲಿ ಗಳತಿ? 

ಈ ಜನರ ಬಗ್ಗೆ. 

ಸಂಪ್ರದಾಯವ ಮರೆತೆನೆಂದರು, 

ಕಣ್ಣು ಕೆಂಪಾಗಿಸಿದರು. 

ಸುಮ್ಮನಿರದೆ, ಪ್ರಶ್ನಿಸಿದರು

ಹಳದಿ ಕಾಮಾಲೆ ಕಣ್ಣಿನವರು. 

ಹಸನಾಗಿರುವ ಬದುಕ ಕೆದಕಿ 

ಬಿಳಿ ಶಾಂತಿ ಕದಡಿದರು. 

ಪ್ರಶಾಂತ  ನೀಲಿ ಕೊಳದ

ತುಂಬಾ ಕಲ್ಲನ್ನೆಸೆದರು. 

ಎಲ್ಲಾ ಬಣ್ಣಗಳ ಕಲಕಿ

ತಿಳಿ ನೀರ ರಾಡಿಯನ್ನಾಗಿಸಿದರು. 

ಜಗದ ಕಲೆಗಾರ ಭಗವಂತನ, 

ಬಣ್ಣದ ಬೊಂಬೆಗಳಲ್ಲವೇ ನಾವು? 

ಬಣ್ಣಗಳೇ ಬದುಕೆಂಬ

ಸತ್ಯ ಅರಿಯಲೇ ಇಲ್ಲ. 

ಕೊನೆಗೂ ಹಸಿರು ಮೂಡಲೇ

ಇಲ್ಲ ,ಇವರ ಕಪ್ಪು ಮನದಿ. 

ಆದರೂ, ಇದು ನಿನಗಾಗಿ 

ಕೋರಿಕೆ, ಈ ಜನರಲ್ಲಿ,

ದಯವಿಟ್ಟು  ಬಣ್ಣಗಳಿಗೆ

ಬಣ್ಣ ಹಚ್ಚಬೇಡಿ.


-ವಿ. ಸೀತಾಲಕ್ಷ್ಮಿವರ್ಮ