ನಾವು ಸಣ್ಣವರಿದ್ದಾಗ ಮನೆಯವರೆಲ್ಲ ಕೃಷಿ ಕಾರ್ಮಿಕರೆ. ಈಗ ಬೇಸಾಯ ಬಲ್ಲವರು ಕಡಿಮೆ. ಹೊಸ ತಲೆಮಾರು ಗದ್ದೆಗೆ ಇಳಿಯುವುದಿಲ್ಲ. ಆದರೆ ಕೃಷಿಗೆ ಯಂತ್ರಗಳ ಬಾಡಿಗೆ ನೆರವು ಧಾರಾಳ ಸಿಗುತ್ತದೆ.

ಎಪ್ಪತ್ತರ ದಶಕದಲ್ಲಿ ಕೆಲವು ಇಂಗ್ಲಿಷ್ ಚಿತ್ರಗಳಲ್ಲಿ ಬೆಳೆಯ ಹುಲ್ಲಿನ ಕಟ್ಟು ಕಂಡಾಗ ಎಷ್ಟು ಅಚ್ಚುಕಟ್ಟು ಎಂದುಕೊಂಡದ್ದಿದೆ.  ಈ ಒಣ ಹುಲ್ಲಿನ ಕಟ್ಟನ್ನು ಇಂಗ್ಲಿಷಿನಲ್ಲಿ ಬೇಲ್ ಎನ್ನುತ್ತಾರೆ. ಕಟಾವು ಮಾಡಿ ಈ ಕಟ್ಟು ಕಟ್ಟುವ ಯಂತ್ರವನ್ನು ಬೇಲರ್ ಎನ್ನುವರು.

ನಮ್ಮ ಪೇರೂರು ಸುತ್ತ ಮುತ್ತ ಹತ್ತು ವರುಷಗಳ ಹಿಂದೆಯೇ ಕಟಾವು ಯಂತ್ರಗಳು ಬರತೊಡಗಿದವು. ಆದರೆ ಅವು ಬೈ ಹುಲ್ಲನ್ನು ಕತ್ತರಿಸಿ ಒಗೆಯುತ್ತಿದ್ದವು. ಇಡಿ ಹುಲ್ಲು ಸಿಗುತ್ತಿರಲಿಲ್ಲ.

ಈಗ ಆಧುನಿಕ ಕೊಯಿಲು ಯಂತ್ರ ಬರುತ್ತಿವೆ. ಈಗ ನಮ್ಮ ಊರಿನ, ತುಳುನಾಡಿನ ಬಯಲು ಎಲ್ಲ ಬೇಲ್ ಮಯ. ಯೂರೋಪಿಯನರ ಯಾಂತ್ರಿಕ ಬೇಸಾಯ, ಸಿನಿಮಾದಲ್ಲಿ ಕಂಡಿದ್ದ ಹುಲ್ಲಿನ ಕಟ್ಟು ನೆನಪಾಗುತ್ತಿದೆ.